ವಿಶ್ವದ ಮೂರು ಪ್ರಮುಖ ಮೌಲ್ಯಮಾಪನಾ ಸಂಸ್ಥೆಗಳಲ್ಲಿ ಒಂದಾಗಿರುವ `ಸ್ಟ್ಯಾಂಡರ್ಡ್ ಆಂಡ್ ಪೂರ್ಸ್`, ಅಮೆರಿಕದ ಸಾಲ ಮರುಪಾವತಿ ಸಾಮರ್ಥ್ಯ ಕುಗ್ಗಿಸಿದ ಒಂದೇ ಒಂದು ಕಾರಣಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ವಿಶ್ವದ ಎಲ್ಲ ಷೇರುಪೇಟೆಗಳಲ್ಲಿ ಇನ್ನಿಲ್ಲದ ಗಾಬರಿ ಕಂಡು ಬಂದಿತು. ಈ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನೂ ತಿಳಿಯದ ತೀವ್ರ ಗೊಂದಲದ ಪರಿಸ್ಥಿತಿ ಷೇರು ಮಾರುಕಟ್ಟೆಗಳಲ್ಲಿ ಉದ್ಭವಿಸಿತ್ತು. ಇಂತಹ ವಿದ್ಯಮಾನಗಳು ಘಟಿಸುವುದು ತುಂಬ ವಿರಳ.
ಈ ಹಿಂದೆ ಇಂತಹ ಘಟನೆ ಯಾವಾಗ ಘಟಿಸಿತ್ತು ಎನ್ನುವುದು ಕೂಡ ಯಾರೊಬ್ಬರಿಗೂ ಗೊತ್ತಿಲ್ಲ. ಆದರೆ, ಇದರಿಂದ ವಿಶ್ವದಾದ್ಯಂತ ಹೂಡಿಕೆದಾರರು ರಾತ್ರಿ ಬೆಳಗಾಗುವುದರೊಳಗೆ ಲಕ್ಷಾಂತರ ಡಾಲರ್‌ಗಳನ್ನು ಕಳೆದುಕೊಳ್ಳುವಂತಾಯಿತು. ಚಿನ್ನ ಹೊರತು ಪಡಿಸಿ ಉಳಿದೆಲ್ಲ ಸರಕು ಪದಾರ್ಥಗಳ ಮಾರುಕಟ್ಟೆಗಳ ವಹಿವಾಟೂ ಕುಸಿಯಿತು. ಇವೆಲ್ಲ ನಿಜಕ್ಕೂ ಸಂಕಷ್ಟದ ದಿನಗಳು.
ಯಾವುದೇ ಒಂದು ದೇಶದ ಬಜೆಟ್, ಕುಟುಂಬವೊಂದರ ಬಜೆಟ್‌ನಂತೆಯೇ ಇರುತ್ತದೆ. ವರಮಾನದ ಮೂಲಗಳು ಇರುವಂತೆ, ವೆಚ್ಚದ ಹಲವಾರು ದಾರಿಗಳೂ ಇರುತ್ತವೆ. ಸಂಕಷ್ಟದ ದಿನಗಳಲ್ಲಿ ಎರಡೂ ಒಂದೇ ಮಟ್ಟದಲ್ಲಿದ್ದು, ಅನಿರೀಕ್ಷಿತ ವೆಚ್ಚಗಳಿಗಾಗಿ ಕೈಯಲ್ಲಿ ಒಂದು ಬಿಡಿಗಾಸೂ ಇರುವುದಿಲ್ಲ. ವರಮಾನಕ್ಕಿಂತ ವೆಚ್ಚ ಹೆಚ್ಚಾಗಿ `ಬಜೆಟ್` ಅಸಮತೋಲನಗೊಂಡ ಸಂದರ್ಭಗಳಲ್ಲಿ ವೆಚ್ಚಕ್ಕೆ ಕಡಿವಾಣ ವಿಧಿಸುವುದು ಅನಿವಾರ್ಯವಾಗುತ್ತದೆ, ಇಲ್ಲವೆ ವರಮಾನದ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅಲ್ಪಾವಧಿಯಲ್ಲಿ ಈ ಅಸಮತೋಲನ ನಿವಾರಿಸಿಕೊಳ್ಳಲು ಸಾಲಕ್ಕೂ ಕೈಚಾಚಬೇಕಾಗುತ್ತದೆ.
ಒಂದು ವೇಳೆ ಈ ಅಸಮತೋಲನ ದೀರ್ಘಕಾಲ ಮುಂದುವರೆದರೆ ಸಾಲದ ಹೊರೆ ಹೆಚ್ಚುತ್ತಲೇ ಹೋಗುವುದು ಮತ್ತು ಆ ಸಾಲ ಮರು ಪಾವತಿಸಬೇಕಾದ ಕುಟುಂಬದ ಯಜಮಾನನ ಸಾಮರ್ಥ್ಯ ಕುಗ್ಗುವುದು ನಮಗೆಲ್ಲ ಅನುಭವ ವೇದ್ಯ. ಇದೇ ವೇಳೆಗೆ ಸಾಲದ ಸುಳಿಗೆ ಸಿಕ್ಕ ಕುಟುಂಬದ ವಿಶ್ವಾಸಾರ್ಹತೆ ಕುಗ್ಗಲು ತೊಡಗುತ್ತದೆ. ಅಂತಹ ಸಂದರ್ಭಗಳಲ್ಲಿ ಯಾರೊಬ್ಬರೂ ಈ ಕುಟುಂಬಕ್ಕೆ ಸಾಲ ಕೊಡಲು ಮುಂದೆ ಬರುವುದಿಲ್ಲ.
ಕ್ರಮೇಣ ಈ ಕುಟುಂಬ ದುಬಾರಿ ಬಡ್ಡಿ ತೆತ್ತಾದರೂ ಸಾಲ ತರಲು ಮುಂದಾಗುತ್ತದೆ.
ಇದರಿಂದ ಕುಟುಂಬದ ಮರ್ಯಾದೆ ಇನ್ನೂ ಪಾತಾಳಕ್ಕೆ ಕುಸಿಯುತ್ತದೆ. ಇಂತಹ ಪರಿಸ್ಥಿತಿ ಕುಟುಂಬ, ಸಂಘಟನೆ ಅಥವಾ ಸರ್ಕಾರಕ್ಕೂ ಎದುರಾಗುತ್ತದೆ. ಸದ್ಯಕ್ಕೆ ಅಮೆರಿಕವು ಬಂದು ನಿಂತಿರುವುದು ಇದೇ ಹಂತಕ್ಕೆ.
ಪರಮಾಧಿಕಾರ ಹೊಂದಿದ ಯಾವುದೇ ಒಂದು ದೇಶ, ತನ್ನ ಹಣಕಾಸು ಪರಿಸ್ಥಿತಿಗೆ ಅನ್ವಯಗೊಳ್ಳುವ ಹಲವಾರು ಆಯ್ಕೆಗಳನ್ನು ಹೊಂದಿರುತ್ತದೆ. ಸೀಮಿತ ಪ್ರಮಾಣದಲ್ಲಿ ಕರೆನ್ಸಿಯನ್ನೂ ಮುದ್ರಿಸುತ್ತವೆ. ದೇಶದ ಅರ್ಥ ವ್ಯವಸ್ಥೆಯ ದೀರ್ಘಾವಧಿ ಆರೋಗ್ಯದ ದೃಷ್ಟಿಯಿಂದ `ಹಣಕಾಸು ವ್ಯವಹಾರ ಜ್ಞಾನ`ವೂ ತುಂಬ ಅಗತ್ಯವಾಗಿರುತ್ತದೆ.
ಅಮೆರಿಕವು ವಿಶ್ವದಲ್ಲಿಯೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿದೆ. ಅಮೆರಿಕದ ಡಾಲರ್‌ಅನ್ನು, ಜಾಗತಿಕ ಕರೆನ್ಸಿ ಎಂದೇ ಪರಿಗಣಿಸಲಾಗಿದೆ. ದೊಡ್ಡ ಅರ್ಥ ವ್ಯವಸ್ಥೆಯಾಗಿದ್ದರೂ, ಅದು ಸದೃಢವಾಗಿದೆ ಎಂದೇನೂ ಅಮೆರಿಕ ಹೇಳಿಕೊಳ್ಳುವಂತಿಲ್ಲ. ಭಾರಿ ಪ್ರಮಾಣದ ಬಜೆಟ್ ಕೊರತೆಯು ನಿರಂತರವಾಗಿ ಸಾಲ ಎತ್ತಲು ಉತ್ತೇಜನ ನೀಡಿರುವುದರಿಂದ, ಸಾಲ ಮರು ಪಾವತಿ ಸಾಮರ್ಥ್ಯದ ಬಗ್ಗೆಯೇ ಈಗ ಅನುಮಾನಗಳು ಮೂಡಿವೆ.
ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವ ಮೂಲ ತತ್ವಗಳನ್ನೇ ಅಮೆರಿಕವು ನಿರ್ಲಕ್ಷಿಸಿರುವುದನ್ನು ಕಂಡು ಆಶ್ಚರ್ಯವಾಗುತ್ತದೆ. ಸರ್ಕಾರದ ಸಾಲದ ಪ್ರಮಾಣವು 1917ರಲ್ಲಿ 11.5 ಶತಕೋಟಿ ಡಾಲರ್‌ಗಳಿಂದ (51,750 ಕೋಟಿ) 2011ರಲ್ಲಿ 14 ಲಕ್ಷ ಕೋಟಿ ಡಾಲರ್‌ಗಳಿಗೆ (630 ಲಕ್ಷ ಕೋಟಿಗಳಿಗೆ) ಅಗಾಧ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಇದರರ್ಥ ಏನೆಂದರೆ, ಸಾಲದ ಹೊರೆಯು ಒಟ್ಟು ಆಂತರಿಕ ಉತ್ಪನ್ನದಷ್ಟೇ (ಜಿಡಿಪಿ) ಆಗಿದೆ. ಇದೇ ಕಾರಣಕ್ಕೆ ಋಣಭಾರದ ಸಾಮರ್ಥ್ಯ ಕುಗ್ಗಿಸಲಾಗಿದೆ. ಇತರ ಎರಡು ಮೌಲ್ಯಮಾಪನಾ ಸಂಸ್ಥೆಗಳು ಈ ವಿದ್ಯಮಾನದ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯದ ಜಾಗತೀಕರಣದ ಸಂದರ್ಭದಲ್ಲಿ, ಭಾರತದ ಅರ್ಥವ್ಯವಸ್ಥೆಯು ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲ. ಬಹುತೇಕ ಅಭಿವೃದ್ಧಿಶೀಲ ದೇಶಗಳು ಆರ್ಥಿಕವಾಗಿ ತೀವ್ರವಾಗಿ ದಣಿದಿದ್ದು, 2008ರ ಹಣಕಾಸು ಬಿಕ್ಕಟ್ಟಿನಿಂದ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ.
ಸದ್ಯದ ಬಿಕ್ಕಟ್ಟು ಕ್ಷಿಪ್ರವಾಗಿ ಇನ್ನಷ್ಟು ಉಲ್ಬಣಗೊಂಡು ಆರ್ಥಿಕ ಹಿಂಜರಿಕೆಯತ್ತ ಮುನ್ನಡೆದರೆ, ಅದರಿಂದ ಯಾರೊಬ್ಬರೂ ಪಾರಾಗಲು ಸಾಧ್ಯವಿಲ್ಲ. ಚೇತರಿಕೆಯ ಬೆನ್ನಲ್ಲೇ ಮತ್ತೆ ಹಿಂಜರಿಕೆಗೆ ಒಳಗಾಗುವ ಪರಿಸ್ಥಿತಿಯು (ಡಬಲ್ ಡಿಪ್) ವಿಪ್ಲವಕಾರಿಯಾಗಿರಲಿದ್ದು, ಅದರಲ್ಲೂ ವಿಶೇಷವಾಗಿ ಅಮೆರಿಕ, ಪಶ್ಚಿಮ ಯೂರೋಪ್ ಮತ್ತು ಜಪಾನ್‌ಗಳಿಗೆ ದೊಡ್ಡ ವಿಪತ್ತು ಎದುರಾಗಲಿದೆ.
ಸದ್ಯದ ಈ ಜಾಗತಿಕ ವಿದ್ಯಮಾನದಿಂದ ಭಾರತದ ಉದ್ದಿಮೆ -ವಹಿವಾಟಿನ ಮೇಲೆಯೂ ಪ್ರತಿಕೂಲ ಪರಿಣಾಮಗಳು ಕಂಡು ಬರಲಿವೆ. ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 30ರಷ್ಟು ಪಾಲು ಹೊಂದಿರುವ ಸರಕು ಮತ್ತು ಸೇವೆಗಳ ರಫ್ತು ವಹಿವಾಟಿನ ಪ್ರಮಾಣ ಕುಸಿಯಲಿದೆ. ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಪ್ರಮಾಣವೂ ಕಡಿಮೆಯಾಗಲಿದೆ. ಹಣವು ವಿದೇಶಗಳಿಗೆ ಮರಳಿ ಹೋಗುವುದರಿಂದ ದೇಶಿ ಷೇರುಪೇಟೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ವಿದೇಶಿ ವಿನಿಮಯ ಮೀಸಲು ಸಂಗ್ರಹದ ಮೊತ್ತ ಮತ್ತು ಹಣಪಾವತಿ ವ್ಯವಸ್ಥೆ ಮೇಲೆಯೂ ಪರಿಣಾಮಗಳು ಕಂಡು ಬರಲಿವೆ.
ಭಾರತದ ಅರ್ಥವ್ಯವಸ್ಥೆಯು ಈಗಾಗಲೇ ಹಲವು ಪ್ರತಿಕೂಲಗಳನ್ನು ಎದುರಿಸುತ್ತಿದೆ. ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಬ್ಯಾಂಕ್ ಬಡ್ಡಿ ದರಗಳು ಸತತವಾಗಿ ಏರುತ್ತಲೇ ಇವೆ.
ಹಲವಾರು ಹಗರಣಗಳು ವಿಶ್ವಕ್ಕೆ ತಪ್ಪು ಸಂದೇಶ ರವಾನಿಸುತ್ತಿವೆ. ಆರ್ಥಿಕ ಸುಧಾರಣೆಗಳನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಉತ್ಸಾಹವೇ ಕಂಡು ಬರುತ್ತಿಲ್ಲ. ಇತ್ತೀಚಿನ ಕೆಲ ಸಕಾರಾತ್ಮಕ ಚಟುವಟಿಕೆ ಹೊರತುಪಡಿಸಿದರೆ ಕೇಂದ್ರ ಸರ್ಕಾರವು ಗಾಢ ನಿದ್ದೆಗೆ ಶರಣಾಗಿರುವಂತೆ ಭಾಸವಾಗುತ್ತಿದೆ. ಪಕ್ಷಪಾತತನದ ಕೆಲ ಹಿತಾಸಕ್ತಿಗಳನ್ನು ರಕ್ಷಿಸಲು ಆರ್ಥಿಕ ವೃದ್ಧಿದರವನ್ನೇ ಬಲಿ ಕೊಡಲಾಗುತ್ತಿದೆ.
ಈ ಕಟು ವಾಸ್ತವ ಸಂಗತಿಯನ್ನು ನಮ್ಮ ಸರ್ಕಾರ ಒಪ್ಪಿಕೊಳ್ಳುವುದೇ ಅಥವಾ ಈಗಲೂ ಮೂರ್ಖರ ಸ್ವರ್ಗದಲ್ಲಿಯೇ ಇರಲು ಬಯಸುವುದೇ. ಈ ಬಿಕ್ಕಟ್ಟನ್ನೂ ಸಮರ್ಥವಾಗಿ ನಿಭಾಯಿಸುವುದಾಗಿ ಚಿಂತಿಸುತ್ತಿದೆಯೇ ಎನ್ನುವ ಪ್ರಶ್ನೆಗಳು ಪ್ರತಿಯೊಬ್ಬರಲ್ಲಿ ಮೂಡಿ ಮರೆಯಾಗುತ್ತಿವೆ.
2008ರ ಮತ್ತು ಸದ್ಯದ ಪರಿಸ್ಥಿತಿ ಭಿನ್ನವಾಗಿದ್ದು, ಹಿಂದಿನ ಸ್ಥಿತಿಗತಿಗೆ ಹೋಲಿಕೆ ಮಾಡುವುದೂ ಅಪಾಯಕಾರಿ ಧೋರಣೆಯಾಗಿದೆ. ಇದುವರೆಗೆ ನೆನೆಗುದಿಗೆ ಬಿದ್ದಿರುವ ಕಾರ್ಮಿಕ ಕಾಯ್ದೆ ಸುಧಾರಣೆ, ಭೂ ಕಾಯ್ದೆ, ಗಣಿಗಾರಿಕೆ ಕಾಯ್ದೆ, ಕೃಷಿ ಸುಧಾರಣೆ, ಕಲ್ಲಿದ್ದಲು ನೀತಿ, ಪರಿಸರ ಸ್ನೇಹಿ ನೀತಿ ಮುಂತಾದವುಗಳನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ.
ಬಂಡವಾಳ ಹೂಡಿಕೆ ನಿಯಂತ್ರಣಕ್ಕೆ ಸಂಬಂಧಿಸಿದ ವಿವಾದಗಳನ್ನು ಪರಿಷ್ಕರಿಸಿ ಇನ್ನಷ್ಟು ಸರಳಗೊಳಿಸಬೇಕಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೇರ ತೆರಿಗೆ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದ ಅಡೆತಡೆಗಳನ್ನೂ ನಿವಾರಿಸಿಕೊಂಡು ಕನಿಷ್ಠ ಮುಂದಿನ ಹಣಕಾಸು ವರ್ಷದಿಂದಲಾದರೂ ಜಾರಿಗೆ ತರುವ ಅಗತ್ಯ ಇದೆ. ವಿದ್ಯುತ್ ಮತ್ತು ಮೂಲಸೌಕರ್ಯ ರಂಗಗಳಿಗೂ ಹೆಚ್ಚು ಗಮನ ಹರಿಸಬೇಕು. ಹೀಗೆ ಸುಧಾರಣೆಗಳ ಪಟ್ಟಿ ಕೊನೆಗೊಳ್ಳುವುದೇ ಇಲ್ಲ.
ಅರ್ಥಶಾಸ್ತ್ರಜ್ಞನೇ `ಯುಪಿಎ-2` ಸರ್ಕಾರದ ಮುಖ್ಯಸ್ಥರಾಗಿರುವಾಗ, ಸರ್ಕಾರದ ಕಲ್ಲೆದೆಯು ಪ್ರತಿಯೊಬ್ಬರ ಎದೆಗುಂದಿಸುತ್ತದೆ. ಇತ್ತೀಚೆಗೆ ಪ್ರಮುಖ ನಿಯತಕಾಲಿಕೆ ನಡೆಸಿದ ಜನಾಭಿಪ್ರಾಯ ಸಂಗ್ರಹವು ಕೂಡ ಈ ಆತಂಕ ದೃಢೀಕರಿಸುತ್ತದೆ. ಸದ್ಯಕ್ಕೆ ವಿಶ್ವದಾದ್ಯಂತ ಕಂಡು ಬರುತ್ತಿರುವ ಕಳವಳಕಾರಿ ವಿದ್ಯಮಾನಗಳು ಎಲ್ಲ ದೇಶಗಳಿಗೆ ಪಾಠವಾಗಬಲ್ಲುದೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಪ್ರತಿಯೊಂದು ದೇಶವೂ ಸಾಕಷ್ಟು ಪಾಠ ಕಲಿಯಲು ಸಾಧ್ಯವಿದೆ.
ಆರ್ಥಿಕ ಉಚ್ಛ್ರಾಯ ಸ್ಥಿತಿಯು ದೀರ್ಘಕಾಲ ಇರಲಾರದು. ಅಮೆರಿಕ ಮತ್ತು ಯೂರೋಪ್ ದೇಶಗಳು ತೀವ್ರ ಸ್ವರೂಪದ ಸಾಲದ ಬಿಕ್ಕಟ್ಟಿಗೆ ಸಿಲುಕಲಿವೆ ಎಂದು 30 ವರ್ಷಗಳ ಹಿಂದೆ ಯಾರೊಬ್ಬರೂ ಊಹೆ ಕೂಡ ಮಾಡಿರಲಿಲ್ಲ.
ದೂರದೃಷ್ಟಿ ಇಲ್ಲದ ಸರ್ಕಾರಗಳು ದಶಕಗಳ ಹಿಂದೆ ಹಲವಾರು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದವು. ದೀರ್ಘಾವಧಿಯಲ್ಲಿ ಇವು ಊರ್ಜಿತವಾಗಲೇ ಇಲ್ಲ. ಇವೆಲ್ಲ ರಾಜಕೀಯ ನಿರ್ಧಾರಗಳಾಗಿದ್ದು, ಅವುಗಳ ಆರ್ಥಿಕ ಪರಿಣಾಮಗಳು ದೀರ್ಘಾವಧಿಯಲ್ಲಿ ಗೋಚರಿಸುತ್ತವೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ದೊಂಬಿಗಳು ಕೂಡ ಇಂತಹ ನಿರ್ಧಾರಗಳು ಸರಿಯಲ್ಲ ಎನ್ನುವುದನ್ನು ರುಜುವಾತು ಪಡಿಸಿವೆ. ಒಟ್ಟಾರೆ, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ಬೆಳವಣಿಗೆಗಳು ಮತ್ತು ಬೀಸುವ ಗಾಳಿಯ ದಿಕ್ಕುಗಳನ್ನು ಆಧರಿಸಿ, ಭಾರತ ಕೂಡ ಅದಕ್ಕೆ ಪ್ರತಿತಂತ್ರ ಹೆಣೆದು ತಕ್ಷಣ ಕಾರ್ಯೋನ್ಮುಖವಾಗಬೇಕಾಗಿದೆ. ಇಲ್ಲದಿದ್ದರೆ ಆನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ.
No comments:
Post a Comment