Total Pageviews

Saturday, August 27, 2011

ಅಡುಗೆ ಉತ್ಪನ್ನವಲ್ಲ; ಅದೊಂದು ಅಭಿವ್ಯಕ್ತಿ, ಬೆಡಗು

`ಅನ್ನ ದೇವರ ಮುಂದೆ ಇನ್ನು ದೇವರು ಇಲ್ಲ` ಎಂಬುದು ಎಲ್ಲರಿಗೂ ಗೊತ್ತಿರುವುದೇ. ಅದು ಪ್ರಾಥಮಿಕ ಜರೂರಿ. ಲೈಂಗಿಕ ಅಗತ್ಯಗಳು ಪೂರೈಸದಿದ್ದರೆ ಬದುಕು ಕಠಿಣವಾಗಬಹುದು. ಆದರೆ ಅದಿಲ್ಲದೆ ಹೋದರೂ ಬದುಕಬಹುದು. ಹಸಿವನ್ನು ನೀಗಿಸಿಕೊಳ್ಳದಿದ್ದರೆ ಎಷ್ಟು ಕಾಲ ಬದುಕಬಹುದು? `ಆಮರಣಾಂತ ಉಪವಾಸ ಮಾಡುತ್ತೇನೆ` ಎಂದು ಬಡಾಯಿ ಕೊಚ್ಚಿಕೊಂಡವರೂ ಐದು ದಿವಸ ಊಟ ಮಾಡದಿದ್ದರೆ ಆಸ್ಪತ್ರೆ ಸೇರುತ್ತಾರೆ. ಆದ್ದರಿಂದಲೇ ಸರ್ವಜ್ಞ ಹೇಳಿದ: `ಮೇಟಿಯಿಂ ರಾಟಿ ನಡೆವುದಲ್ಲದೆ ದೇಶದಾಟವೇ ಕೆಡುಗು`. ಮೊದಲು ಮೇಟಿ, ಮೇಟಿಯಿದ್ದರೆ ಊಟ. ಆಮೇಲೆ ರಾಟಿ, ರಾಟಿಯಿದ್ದರೆ ಬಟ್ಟೆ. ಆಮೇಲೆ ಮಿಕ್ಕಿದ್ದು. ಪ್ರಾಣಿಗಳಿಗೆ ಮೇಟಿ ರಾಟಿಗಳಿಲ್ಲದಿದ್ದರೂ ಆಹಾರ ಸಿಗುತ್ತದೆ. ಯಾವಾಗ ತಾನು ತಂದ ಶಿಕಾರಿಯನ್ನು ಕಾಡು ಮನುಷ್ಯ ಬೇಯಿಸಿಕೊಂಡು ತಿನ್ನತೊಡಗಿದನೋ ಆವಾಗಿನಿಂದ ಜೈವಿಕವಾದ ಹಸಿವನ್ನು ನೀಗಿಸಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕವಾದ ರುಚಿಯನ್ನೂ ಬಯಸತೊಡಗಿದ. ಆಹಾರದಲ್ಲಿ ರುಚಿ ಮುಖ್ಯವಾಗತೊಡಗಿತು. ಅಡಿಗೆಯ ಕಲೆ ಬೆಳೆಯತೊಡಗಿ, ರುಚಿಯೆಂಬುದು ಕಾಲದೇಶಗಳನುಸಾರ ಹಲವು ರೂಪಗಳನ್ನು, ಸಾಧ್ಯತೆಗಳನ್ನು ಪಡೆದುಕೊಳ್ಳತೊಡಗಿತು. ಆಹಾರಕ್ಕೆ ರುಚಿಯನ್ನು ತಂದು ಕೊಡುವ ಕಲೆಯೇ ಅಡಿಗೆ. ನಾಗರಿಕತೆ ಬೆಳೆದ ಹಾಗೆ ರುಚಿ ಹೆಚ್ಚು ಹೆಚ್ಚು ವೈವಿಧ್ಯಮಯವಾಗುತ್ತಾ ಬಂದಿದೆ.

ರುಚಿಯಿಲ್ಲದ ಆಹಾರವನ್ನು ಸೇವಿಸುವ ಸಂಸ್ಕೃತಿ ಬಹುಶಃ ಎಲ್ಲಿಯೂ ಇಲ್ಲ. ಕ್ಷಾಮ ಡಾಮರ ಪ್ರವಾಹ ಮೊದಲಾದ ನೈಸರ್ಗಿಕ ದುರಂತಗಳ, ಯುದ್ಧ, ಕ್ರಾಂತಿ ಮುಂತಾದ ಮಾನವನಿರ್ಮಿತ ಎಡವಟ್ಟುಗಳ ಸಂದರ್ಭದಲ್ಲಿ ರುಚಿಕಟ್ಟಿನ ಆಹಾರ ಸಿಗದಿದ್ದಾಗ ಏನನ್ನಾದರೂ ತಿಂದು ಬದುಕಲಿಚ್ಛಿಸುತ್ತದೆ ಜೀವ. `ಹಾಲುಂಡು ಬದುಕೋ ಜೀವ ಅಂದರೆ ಅಮೇಧ್ಯ ಉಂಡಾದರೂ ಬದುಕತೇನಂತು ಜೀವ` ಎಂಬುದು ಕನ್ನಡದ ನಾಣ್ನುಡಿಗಳಲ್ಲೊಂದು. ಪ್ರವಾಸಕಥನವೊಂದರಲ್ಲಿ ಹಡಗೊಂದು ಬಿರುಗಾಳಿಗೆ ಸಿಕ್ಕಿ ಹಾದಿ ತಪ್ಪಿ, ತಂದಿದ್ದ ಆಹಾರ ಖಾಲಿಯಾಗಿ ಹಸಿವಿನಿಂದ ಯಾತ್ರಿಗಳು ಒಬ್ಬೊಬ್ಬರಾಗಿ ಸಾಯತೊಡಗುತ್ತಾರೆ. ಉಳಿದವರು ಸತ್ತವರ ಹೆಣಗಳನ್ನು ರಕ್ಷಿಸಿ ಅವನ್ನು ಹಂಚಿಕೊಂಡು ತಿನ್ನುತ್ತಾ ಜೀವ ಹಿಡಿಯುತ್ತಾರೆ.

ಜಗತ್ತಿನ ಸಂಸ್ಕೃತಿಗಳ ನೈತಿಕ ನಡವಳಿಕೆಗೆ ಮೂಲ ವ್ಯಾಕರಣವೇನಾದರೂ ಇದೆಯೇ ಎಂದು ಹುಡುಕುತ್ತಿದ್ದ ಫ್ರಾನ್ಸ್‌ನ ಮಾನವಶಾಸ್ತ್ರಜ್ಞ ಲಿವಿ ಸ್ತ್ರಾಸ್. ಭಾಷೆಯೆಂಬುದು ಪ್ರಾಣಿ ಮತ್ತು ಮನುಷ್ಯರ ನಡುವಣ ಮುಖ್ಯವಾದ ನಡುಗೆರೆ. ಹಾಗಿದ್ದಲ್ಲಿ ಭಾಷೆಯ ಬುನಾದಿಯಾದ ವ್ಯಾಕರಣದಂತಹ ನಿಯಮಗಳ ಏರ್ಪಾಡು ನಡವಳಿಕೆಯಲ್ಲೂ ಇರಬೇಕು. ಸಾಂಸ್ಕೃತಿಕ ಬದುಕಿನ ಎರಡು ಕ್ಷೇತ್ರಗಳಲ್ಲಿ ಈ ತೆರನ ನಿಯಮಬದ್ಧತೆ ಉಂಟು. ಒಂದು, ಕೂಟದ ವಿಷಯದಲ್ಲಿ. ಪ್ರಾಣಿ ಜಗತ್ತಿನಲ್ಲಿ ಯಾರು ಯಾರೊಡನೆಯಾದರೂ ಕೂಡಬಹುದು. ಮಾನವ ಸಮಾಜಗಳಲ್ಲಿ ಹಾಗಲ್ಲ. ಯಾರು ಯಾರೊಡನೆ ಕೂಡಬೇಕೆನ್ನುವ ನಿಯಮಗಳು ಮನುಷ್ಯಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇಂಥಾ ನಿಯಮಗಳು ಸಮಾಜದಿಂದ ಸಮಾಜಕ್ಕೆ ಬದಲಾಗುತ್ತಿರುತ್ತವೆ. ಭಾರತದಂತಹ ಜಾತಿಸಮಾಜಗಳಲ್ಲಿ ಜಾತಿಯಿಂದ ಜಾತಿಗೂ ಬದಲಾಗುತ್ತಿರುತ್ತವೆ. ಬಹುಪತಿತ್ವ ಟಿಬೆಟ್ಟಿನಲ್ಲಿ ಸಹಜ. ಇನ್ನು ಕೆಲವೆಡೆ ಅಲ್ಲ. ಹಾಗೆಯೇ ಬಹುಪತ್ನಿತ್ವ ಕೆಲವು ಸಮಾಜಗಳಲ್ಲಿ ಮಾನ್ಯ. ಇನ್ನು ಕೆಲವು ಸಮಾಜಗಳಲ್ಲಿ ಅಲ್ಲ. ಸ್ತ್ರಾಸನ ಪ್ರಕಾರ ಇನ್ಸೆಸ್ಟ್‌ನ ವಿರೋಧ ಬಹುತೇಕ ಸಮಾಜಗಳ ಲೈಂಗಿಕ ನಡವಳಿಕೆಯ ಆಧಾರ. ಗ್ರೀಕರ `ಈಡಿಪಸ್` ಕತೆಯಲ್ಲಿ ಈಡಿಪಸ್ ತಾಯಿಯನ್ನು ಕೂಡಿದ ಇನ್ಸೆಸ್ಟ್‌ನ ಘಟನೆ ಅವನ ಪತನಕ್ಕೆ ಕಾರಣವಾಗುತ್ತದೆ.

ಟಾಮಸ್ ಮಾನ್‌ನ ಕಾದಂಬರಿ `ಹೋಲಿ ಸಿನ್ನರ್`ನ ಕಥಾ ನಾಯಕ ಗೊತ್ತಿಲ್ಲದೆ ತನ್ನ ತಂಗಿಯನ್ನು ಕೂಡಿದ ಪಾಪಕ್ಕಾಗಿ ದಶಕಗಟ್ಟಲೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾನೆ.

ಕೂಟದ ವಿಷಯದಲ್ಲಿರುವಂತೆ ಊಟದ ವಿಷಯದಲ್ಲೂ ಮಾನವರ ನಡವಳಿಕೆ ನಿಯಮಬದ್ಧವಾಗಿರುತ್ತದೆ. ಯಾವ ಆಹಾರವನ್ನು ಹೇಗೆ ಸೇವಿಸಬೇಕು, ಯಾವ ಸಂದರ್ಭದಲ್ಲಿ ಸೇವಿಸಬೇಕು, ಯಾರೊಡನೆ ಸೇವಿಸಬೇಕು- ಈ ವಿಚಾರಗಳಲ್ಲಿ ಅಲಿಖಿತ ನಿಯಮಗಳು ಬೇರೆಬೇರೆ ಸಮಾಜಗಳಲ್ಲಿರುತ್ತವೆ. ಉದಾಹರಣೆಗೆ, ನರಮಾಂಸ ಭಕ್ಷಣೆ ಕೆಲವು ಸಮುದಾಯಗಳಲ್ಲಿ ಚಾಲ್ತಿಯಲ್ಲಿದೆಯಂತೆ. ಆದರೆ ಅದು ಕೆಲವು ಸಂದರ್ಭಗಳಲ್ಲಿ ಮಾತ್ರ. ರುಮೇನಿಯದ ಮಾನವಶಾಸ್ತ್ರಜ್ಞ ಮರ್ಚಿಯ ಎಲಿಯದೆ ಒಂದು ಪ್ರದೇಶದಲ್ಲಿನ ಆಚರಣೆಯನ್ನು ತನ್ನ ಕ್ಷೇತ್ರಕಾರ್ಯದಲ್ಲಿ ದಾಖಲಿಸಿದ್ದಾನೆ. ಅಲ್ಲಿನ ವಾರ್ಷಿಕ ಆಚರಣೆಯಲ್ಲಿ ನೆಲದ ಫಲವಂತಿಕೆ ಹೆಚ್ಚುವುದೆಂಬ ನಂಬುಗೆಯಿಂದ ಯುವಕನೊಬ್ಬನನ್ನು ಬಲಿಕೊಡುವ ಪ್ರತೀತಿಯಂತೆ. ಆ ಬಲಿಯ ನಂತರ ಕೊಲ್ಲಲಾದ ಯುವಕನ ಶರೀರದ ಮಾಂಸವನ್ನು ಇಡೀ ಸಮುದಾಯದ ಜನ ಹಂಚಿಕೊಂಡು ತಿನ್ನುತ್ತಾರೆ. ಆದರೆ ಈ ರೀತಿಯ ನಡವಳಿಕೆ ಆ ವಿಶೇಷ ಆಚರಣೆಯ ಸಂದರ್ಭದಲ್ಲಿ ಮಾತ್ರ. ಉಳಿದಂತೆ ನಿಷಿದ್ಧ. ವರ್ಜ್ಯವಾದುದನ್ನು ತಿಂದಾಗ ದುರಂತ ಸರಣಿಯೇ ಆರಂಭವಾಗುವುದಕ್ಕೆ ಸಂಕೇತ ಗ್ರೀಕ್ ಪುರಾಣಗಳ ಇನ್ನೊಂದು ಕತೆ.

ಗ್ರೀಕರ ಮೊದಲ ನಾಟಕಕಾರ ಏಸ್ಖಲಸ್ಸನ ಮೂರು ದುರಂತ ನಾಟಕಗಳಾದ ಆಗಮೆಮ್ನಾನ್, ಕಿಯಿರೋಫೋನೆ ಮತ್ತು ಯೂಮನೈಡಿಸ್ ನಾಟಕಗಳಲ್ಲಿ ತಂದೆ ಮಗಳನ್ನು ಬಲಿಕೊಟ್ಟ ತಪ್ಪಿಗೆ ಹೆಂಡತಿ ಗಂಡನನ್ನು ಕೊಲ್ಲುತ್ತಾಳೆ; ಆ ತಪ್ಪಿಗೆ ದಂಡನೆಯಾಗಿ ಕೊಲೆಯಾದವನ ಮಗ ತಾಯನ್ನು ಕೊಲ್ಲುತ್ತಾನೆ; ಆ ಪಾಪದ ಪರಿಣಾಮವಾಗಿ ತಾಯಿ ರಕ್ತದ ಪಿಶಾಚಿಗಳು ಮಗನನ್ನು ಕೊಲ್ಲಲು ಅಣಿಯಾಗುತ್ತವೆ.

ನ್ಯಾಯದೇವಿ ಅಥೀನಾಳ ಮಧ್ಯಪ್ರವೇಶದಿಂದ ಈ ದುರಂತಗಳ ಮಾಲೆ ಕೊನೆಗೊಳ್ಳುತ್ತದೆ. ಈ ಎಲ್ಲ ಅನರ್ಥಗಳ ಮುನ್ನುಡಿಯಾಗುವ ಘಟನೆಯೆಂದರೆ ಅಣ್ಣನೊಬ್ಬ ತಮ್ಮನಿಗೆ ಅವನ ಮಗನ ಮಾಂಸವನ್ನೇ ಮೋಸಮಾಡಿ ಉಣ ಬಡಿಸುವುದು. ಹೀಗಾಗಿ ಊಟದ ಬಗೆಗಿನ ನಿಯಮಪಾಲನೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಮುಖ್ಯವೆನ್ನುವುದಕ್ಕೆ ನಿದರ್ಶನವಾಗಿ ಹಲವು ಕತೆಗಳನ್ನು ಮಾನವ ಸಮಾಜ ಕಟ್ಟಿ ಕೊಟ್ಟಿದೆ. ಆದರೆ ಈ ಎಲ್ಲ ನಿಯಮಗಳೂ ಸಾಮಾಜಿಕವಾದುವೇ ಹೊರತು ನೈಸರ್ಗಿಕವಲ್ಲ. ಉತ್ತರ ಭಾರತದ ಮಂದಿ ಮೊದಲು ರೊಟ್ಟಿ ತಿಂದು ಅನ್ನ ಊಟ ಮಾಡುವುದನ್ನು ಕಂಡರೆ ನನ್ನಂಥ ಕೆಲವು ದಕ್ಷಿಣ ಭಾರತೀಯರಿಗೆ ಕಷ್ಟವಾಗುತ್ತದೆ.

ಆದರೆ ಅವರಮಟ್ಟಿಗೆ ಅದು ಸಹಜ. ದೇಶ ನೋಡಿ ಕೋಶ ಓದಿ ಅನುಭವ ವಿಸ್ತಾರವಾಗುವ ತನಕ ನಾವೆಲ್ಲಾ ನಮ್ಮ ಗುಂಪಿನ ರಿವಾಜುಗಳನ್ನು, ನಡವಳಿಕೆಗಳನ್ನು ಪ್ರಕೃತಿ ನಿಯಮಗಳೆಂಬಂತೆ ನಂಬುತ್ತೇವೆ.

ಚೀನದ ಸತ್ಪ್ರಜೆಗಳು ಹಾವು ತಿನ್ನುವುದನ್ನು ನೋಡಿದಾಗ ಭಾರತದ ಸತ್ಪ್ರಜೆಯೊಬ್ಬನಿಗೆ ಏನೆನ್ನಿಸಬೇಡ? ಅಥವಾ ಜಪಾನಿಗರು ಹಸಿಮೀನನ್ನು ಆನಂದದಿಂದ ತಿನ್ನುವುದನ್ನು ಕಂಡಾಗ ಬೇರೆ ನಾಡುಗಳವರಿಗೆ ಹೇಗೆನಿಸಬೇಡ? ಅಲಂಕಾರದ ಕಲ್ಪನೆಯಂತೆ ರುಚಿಯ ಕಲ್ಪನೆಯೂ ಸಮುದಾಯವಿಶಿಷ್ಟ.

ಜಗತ್ತನ್ನೆಲ್ಲಾ ಸುತ್ತಿ ಬಂದ ಚಿಲಿಯ ಕವಿ ಪಾಬ್ಲೋ ನೆರುಡಾ ಚೀನಾದ ಅಡುಗೆ ಸರ್ವಶ್ರೇಷ್ಠವೆನ್ನುತ್ತಾನೆ. ಯಾಕೆಂದರೆ ಚೀನಾದ ಅಡುಗೆಯಲ್ಲಿ ಮೂರು ರೀತಿಯ ವಿಶೇಷಗಳಿವೆ: ಆಕರ್ಷಕ ರಂಗು, ಆಕರ್ಷಕ ಗಂಧ ಮತ್ತು ಆಕರ್ಷಕ ರುಚಿ. ಆದರೆ ಯಾವ ರಂಗು, ಗಂಧ, ರುಚಿ ಆಕರ್ಷಕವೆನ್ನುವುದೂ ಸಂಸ್ಕೃತಿವಿಶಿಷ್ಟ. ಉದಾಹರಣೆಗೆ, ಮಣಿಪುರದ ಅಡಿಗೆಯಲ್ಲಿ ಒಣಮೀನನ್ನು ಒಂದು ಸಾಂಬಾರ ಪದಾರ್ಥವೆಂಬಂತೆ ಬಳಸುತ್ತಾರೆ. ಅದರ ವಾಸನೆ ಇತರರಿಗೆ ದುರ್ಗಂಧ. ಆದರೆ ಮಣಿಪುರಿಗಳಿಗೆ ಅದು ಚಂದ. ಅಲ್ಲದೆ ಮಣಿಪುರಿಗಳು ಎಳೆ ಬಿದಿರಿನಿಂದ (ಕಳಲೆ) ಒಂದು ವಿಶೇಷವಾದ ಪಲ್ಯ ತಯಾರಿಸುತ್ತಾರೆ. ಅದಕ್ಕೆ ಮೊದಲು ಅದನ್ನು ಮಾದಕದ್ರವ್ಯದಲ್ಲಿ ನೆನೆ ಹಾಕುತ್ತಾರೆ. ಆಮೇಲೆ ಅವರಿಗೆ ಅತ್ಯಂತ ಪ್ರಿಯವಾದ ಈ ಖಾದ್ಯ ತಯಾರಾಗಿತ್ತದೆ. ಅವರಿಗದು ಪ್ರಾಣಪ್ರಿಯ; ನಮಗದು ಹಿಂಸೆ.
ನೆರುಡಾನಷ್ಟೇ ಜಗತ್ತು ಸುತ್ತಿದ್ದ ಮೆಕ್ಸಿಕನ್ ಕವಿ, ಸಾಂಸ್ಕೃತಿಕ ಇತಿಹಾಸಕಾರ ಅಕ್ತೇವಿಯೋ ಪಾಜ್. ಅವನ ಪ್ರಕಾರ ಜಗತ್ತಿನ ಆಹಾರಗಳಲ್ಲಿ ಎರಡು ಬಗೆಗಳು ಮುಖ್ಯ. ಮೊದಲನೆಯ ಬಗೆ ಬಿಡಿಬಿಡಿಯಾದ ಆಹಾರ. ಪಶ್ಚಿಮ ದೇಶಗಳ ಆಹಾರ ಈ ಬಗೆಯದು. ಉದಾಹರಣೆಗೆ ಸ್ಯಾಂಡ್‌ವಿಚ್, ಹಾಟ್ ಡಾಗ್ ಮುಂತಾದ ಇಂದಿನ ಯುವಪೀಳಿಗೆಯ ಸುರಭೋಜನಗಳನ್ನು ತೆಗೆದುಕೊಳ್ಳಿ. ಇವುಗಳಲ್ಲಿ ಆಹಾರದ್ರವ್ಯಗಳನ್ನು ಒಂದರಮೇಲೊಂದಾಗಿ, ಅಥವಾ ಒಂದರೊಳಗೊಂದಾಗಿ ಜೋಡಿಸಿರುತ್ತಾರೆ. ಇವುಗಳನ್ನು ಅಗಿದು ತಿಂದಾಗ, ಅವುಗಳ ಚೂರುಗಳು ಜೊಲ್ಲಿನೊಡನೆ ಸೇರಿದಾಗ ರುಚಿ ಹತ್ತುತ್ತದೆ. ಆದರೆ ಭಾರತ, ಚೀನಾ ಮುಂತಾದ ಪೌರ್ವಾತ್ಯ ದೇಶಗಳ ಖಾದ್ಯಗಳು ದ್ರವ್ಯಗಳ ಕಲೆಸುವಿಕೆಯಿಂದ ಉಂಟಾದವು.

ಉದಾಹರಣೆಗೆ ಭಾರತದ ಪಲಾವು, ಬಿರಿಯಾನಿ ಅಥವಾ ಚೀನಾದ ಕೋಳಿಮಾಂಸಗಳನ್ನು ತಗೆದುಕೊಳ್ಳಿ. ಇವುಗಳ ದ್ರವ್ಯಗಳು ಒಟ್ಟಿಗೆ ಬೆಂದು ಒಂದರ ರುಚಿ ಇನ್ನೊಂದರೊಳಗೆ ಸೇರಿ ಹೊಸ ರುಚಿಯೊಂದು ತಿನ್ನುವ ಮೊದಲೇ ನಿರ್ಮಾಣವಾಗಿರುತ್ತದೆ. ಆದ್ದರಿಂದ ಪೌರ್ವಾತ್ಯರ ಅಡಿಗೆಯ ರುಚಿ ಹೆಚ್ಚು ಸಂಕೀರ್ಣವಾದುದು. ಆದರೆ ಪಾಜ್ ಹೇಳುವ ಪೌರ್ವಾತ್ಯ-ಪಾಶ್ಚಿಮಾತ್ಯ ನಡುಗೆರೆಗಳೂ ಅಷ್ಟು ಸ್ಪಷ್ಟವಲ್ಲ. ಜಪಾನು ಪಾಶ್ಚಿಮಾತ್ಯ ದೇಶವೇನಲ್ಲ. ಆದರೆ ಅಲ್ಲಿನ ಅಡಿಗೆ ಚೀನಾ ಮತ್ತು ಭಾರತಕ್ಕಿಂತ ಪಾಶ್ಚಿಮಾತ್ಯರ ಅಡಿಗೆಗೆ ಹತ್ತಿರ. ಸ್ವೀಡನ್ನಿನ ಹಲವು ಬಗೆಯ ಮೀನಿನ ಉಪ್ಪಿನಕಾಯಿಗಳು ಇದೇ ರೀತಿ ಭಾರತದ ಅಡುಗೆಗೆ ಹತ್ತಿರವಾಗಿವೆ. ಆದ್ದರಿಂದ ಜಗತ್ತಿನ ಆಹಾರ ಪದ್ಧತಿಯ ಬಗ್ಗೆ ನಾವು ಮಾಡುವ ಎಲ್ಲ ಸರಳೀಕರಣಗಳಿಗೂ ಮಿತಿಗಳುಂಟು, ಅಪವಾದಗಳುಂಟು. ಭಾರತದ ಅಡಿಗೆಯ ಬಗ್ಗೆ ಪಾಶ್ಚಿಮಾತ್ಯರ ಒಂದು ತಗಾದೆಯೆಂದರೆ ನಮ್ಮ ಆಹಾರಗಳಲ್ಲಿ ಮಸಾಲೆಗಳದೇ ಮೇಲುಗೈಯಾಗಿ ತರಕಾರಿ ಮತ್ತು ಮಾಂಸಗಳ ವಿಶಿಷ್ಟ ರುಚಿಗೆ ಜಾಗವೇ ಇಲ್ಲವೆನ್ನುವುದು.

ಆಹಾರದಲ್ಲಿ ರುಚಿಯನ್ನು ತರುವುದು ನಿಜಕ್ಕೂ ಒಂದು ಕಲೆ. ಇಂದು ಅಡುಗೆಯನ್ನು ವ್ಯವಸ್ಥಿತವಾಗಿ ಕಲಿಸುವ ಕೋರ್ಸುಗಳಿವೆ, ಶಾಲೆಗಳಿವೆ. ಇಂತಹ ವಿಷಯಗಳಲ್ಲಿ ತಜ್ಞರಾದವರು ದೊಡ್ಡ ದೊಡ್ಡ ಹೋಟಲುಗಳಲ್ಲಿ ನೌಕರಿ ಪಡೆಯುತ್ತಾರೆ. ಆದರೆ ಇವರು ಮಾಡುವ ಅಡುಗೆ ಹೆಚ್ಚು ರುಚಿಕಟ್ಟಾಗಿರುತ್ತದೆ ಎಂಬುದಕ್ಕೆ ನನಗೆ ಪುರಾವೆಗಳು ಸಿಕ್ಕಿರುವುದು ಕಡಿಮೆ. ಈ ರೀತಿಯ ಯಾವುದೇ ತರಬೇತಿ ಪಡೆಯದವರು ಅತ್ಯಂತ ರುಚಿಯಾದ ಅಡಿಗೆ ಮಾಡುವುದನ್ನು ನಾನು ಕಂಡಿದ್ದೇನೆ, ಉಂಡಿದ್ದೇನೆ. ಒಂದೊಂದು ರೀತಿಯ ಖಾದ್ಯಕ್ಕೆ ಬೇಕಾದ ದ್ರವ್ಯಗಳು ಬೇರೆಬೇರೆ, ನಿಜ. ಆದರೆ ಆ ಎಲ್ಲಾ ದ್ರವ್ಯಗಳಿದ್ದ ಮಾತ್ರಕ್ಕೇ ಅಡಿಗೆ ರುಚಿಕರವಾಗುವುದೆಂಬ ಖಾತರಿಯಿಲ್ಲ. ಎಲ್ಲ ಕಲೆಗಳಲ್ಲಿರುವ ಹಾಗೆ ಅಡಿಗೆಯಲ್ಲೂ ಕೌಶಲ್ಯ ಮುಖ್ಯ. ಆದರೆ ಈ ಕೌಶಲ್ಯ ಬರುವುದು ಯಾತರಿಂದ? ತರಬೇತಿಯಿಂದಲೋ, ಅನುಭವದಿಂದಲೋ? ಹೇಳುವುದು ಕಷ್ಟ. ಈ ಎರಡೂ ಇಲ್ಲದ ಕೆಲವರು ಅಡುಗೆಗೆ ಕೈ ಹಾಕಿದಾಗ ಈ ಎರಡೂ ಇದ್ದವರಿಗಿಂಥಾ ರುಚಿಯಾದ ಅಡಿಗೆ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ. ಉದಾಹರಣೆಗೆ ಹಿಮಾಲಯದಲ್ಲಿ ಅಲೆದಾಡುವ ಸಾಧುಗಳು ಬೀಡುಬಿಟ್ಟ ಕಡೆ ಸಿಕ್ಕಸಿಕ್ಕ ದ್ರವ್ಯಗಳಿಂದ ಅಡಿಗೆ ಮಾಡುತ್ತಾರೆ. ಅವರ ಸರಳವಾದ ಅಡಿಗೆ ಸಪ್ತತಾರಾ ಹೋಟಲುಗಳ ರುಚಿಯನ್ನೂ ಮೀರಿಸುತ್ತದೆ.

ಇಂದು ಅಡುಗೆಯ ತಂತ್ರಜ್ಞಾನವೂ ಸಂಕೀರ್ಣವಾಗಿ ಬೆಳೆದಿದೆ. ಸೌದೆಯಿದ್ದ ಕಡೆ ಇದ್ದಿಲು ಬಂತು, ಲಿಪ್ಕೊ ಬಂತು, ಗ್ಯಾಸ್ ಬಂತು, ವಿದ್ಯುತ್ತು ಬಂತು. ಈ ತಂತ್ರಜ್ಞಾನಗಳ ಪರಿಣಾಮವಾಗಿ ಅಡಿಗೆ ಹಿಂದಿಗಿಂತಲೂ ಸುಲಭವಾಗಿದೆಯೇ ಹೊರತು, ರುಚಿಯಲ್ಲಿ ಪ್ರಗತಿಯಾಗಿದೆಯೆಂದು ಹೇಳಬರುವುದಿಲ್ಲ.

ಎಷ್ಟಾದರೂ ಅಡಿಗೆ ಅಂತಿಮವಾಗಿ ಒಂದು ಕಲೆ. ಅದರ ರುಚಿ ಕಲೆಗಳ ರಸದಷ್ಟೇ ನಿಗೂಢ. ಅಡಿಗೆ ಕೇವಲ ಉತ್ಪನ್ನವಲ್ಲ. ಅದೊಂದು ಅಭಿವ್ಯಕ್ತಿ, ಒಂದು ಬೆಡಗು.

No comments:

Post a Comment