ಡಾ. ಮನಮೋಹನ್ ಸಿಂಗ್ ಅವರು, 1991ರಲ್ಲಿ ಲೋಕಸಭೆಯಲ್ಲಿ ಬಜೆಟ್ ಭಾಷಣ ಮಾಡಲು ಎದ್ದು ನಿಂತಾಗ, ದೇಶದ ಅರ್ಥ ವ್ಯವಸ್ಥೆಯು ಸದ್ಯದ ಸ್ಥಿತಿಗತಿಗೆ ಪರಿವರ್ತನೆಗೊಳ್ಳಲಿದೆ ಎಂದು ಯಾರೊಬ್ಬರೂ ತಮ್ಮ ಕಲ್ಪನೆ ಹರಿಯಬಿಟ್ಟಿರಲಿಕ್ಕಿಲ್ಲ ಎಂದು ನಾನು ಬಾಜಿ ಕಟ್ಟಬಲ್ಲೆ. ಈ ಕಾಲಘಟ್ಟದಲ್ಲಿ ಸಿಂಹಾವಲೋಕನ ಮಾಡಿದಾಗ, ಇದೆಲ್ಲ ರಮ್ಯ ಕಥಾನಕವೇನೊ ಎಂಬಂತೆ ಭಾಸವಾಗುತ್ತದೆ.
ಆರ್ಥಿಕ ರಂಗದಲ್ಲಿನ ಊಹೆಗೂ ಮಿಗಿಲಾದ ಬದಲಾವಣೆಗಳಿಗೆ ಸಾಕ್ಷಿಯಾಗಿರುವ ನಾವು, ಈ ಬಗ್ಗೆ ಇದೇನು ಭ್ರಮೆಯೋ ಅಥವಾ ವಾಸ್ತವ ಸಂಗತಿಯೋ ಎಂಬುದನ್ನು ತಿಳಿದುಕೊಳ್ಳಲು ನಮ್ಮ ಮೈ ಚಿವುಟಿಕೊಳ್ಳಬೇಕಾದ ಅಗತ್ಯ ಇಲ್ಲ.
ನಾವು ಇಲ್ಲಿ ಆರ್ಥಿಕ ಸುಧಾರಣಾ ಕ್ರಮಗಳ ನಿಜವಾದ ನಾಯಕ ಅಂದಿನ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರನ್ನೇ ಮರೆತು ಬಿಟ್ಟಿದ್ದೇವೆ. ಹಣಕಾಸು ಖಾತೆ ನಿರ್ವಹಿಸಲು ಮನಮೋಹನ್ ಸಿಂಗ್ ಅವರೇ ಸೂಕ್ತ ಎನ್ನುವ ಮಹತ್ವದ ನಿರ್ಧಾರವನ್ನು `ಪಿವಿಎನ್` ಕೈಗೊಂಡಿದ್ದರು. ಸುಧಾರಣಾ ಕ್ರಮಗಳಿಗೆ ಶ್ರೀಕಾರ ಹಾಕಿದ ಹೆಗ್ಗಳಿಕೆ ಅವರಿಗಷ್ಟೇ ಸಲ್ಲಬೇಕು.
ಆರ್ಥಿಕ ಬದಲಾವಣೆಯನ್ನು ನಮ್ಮ ಮೇಲೆ ಹೇರಲಾಯಿತೇ ಅಥವಾ ಭಾರತೀಯರು ಸ್ವಇಚ್ಛೆಯಿಂದ ಅವುಗಳನ್ನು ಸ್ವಾಗತಿಸಿದರೆ ಎನ್ನುವುದು ಎಂದಿಗೂ ಕೊನೆಗೊಳ್ಳದ ಚರ್ಚಾಸ್ಪದ ವಿಷಯ. ಆದರೆ, ಸುಧಾರಣಾ ಕ್ರಮಗಳ ಫಲಿತಾಂಶ ಮಾತ್ರ ಯಾವತ್ತೂ ಚರ್ಚಾಸ್ಪದವಲ್ಲ.
1991ರಲ್ಲಿ ದೇಶದ ಆಯವ್ಯಯ ಪರಿಸ್ಥಿತಿಯು ತುಂಬ ವಿಷಮವಾಗಿತ್ತು. ಅದರಲ್ಲೂ ವಿಶೇಷವಾಗಿ ವಿದೇಶಿ ವಿನಿಮಯ ಮೀಸಲು ಪ್ರಮಾಣವು ಅಪಾಯಕಾರಿಯಾದ ಕೆಳ ಮಟ್ಟದಲ್ಲಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) 1.8 ಶತಕೋಟಿ ಡಾಲರ್‌ಗಳಷ್ಟು ಸಾಲ (ಇಂದಿನ ಲೆಕ್ಕಾಚಾರದಲ್ಲಿ ಅಂದಾಜು ರೂ 8,100 ಕೋಟಿ) ನೀಡಲು ಮುಂದೆ ಬಂದಿತ್ತು. ದೇಶದ ಆರ್ಥಿಕ ನೀತಿ - ನಿಯಮಗಳನ್ನೆಲ್ಲ ಸಮಗ್ರವಾಗಿ ಹೊಸದಾಗಿ ರೂಪಿಸುವ ಅಗತ್ಯ ಇದೆ ಎನ್ನುವುದರ ಸ್ಪಷ್ಟ ಸಂಕೇತ ಇದಾಗಿತ್ತು.
ಸುಧಾರಣಾ ಕ್ರಮಗಳ ಬಗ್ಗೆ ನಾವು ಸರಿಯಾದ ದೃಷ್ಟಿಕೋನ ತಳೆಯಬೇಕಿದ್ದರೆ ನಾವು ಕೆಲವು ದಶಕಗಳ ಹಿಂದಿನ ಭೂತಕಾಲದಲ್ಲಿ ಪಯಣಿಸಬೇಕಾಗುತ್ತದೆ.
ದೇಶ ಒಪ್ಪಿಕೊಂಡಿದ್ದ ಸಮಾಜವಾದದಿಂದ ಪ್ರಭಾವಿತಗೊಂಡಿದ್ದ ಆರ್ಥಿಕ ವಿಚಾರಧಾರೆಯಲ್ಲಿ, ಕೆಲ ಮಟ್ಟಿಗಿನ ನಿಯಂತ್ರಣಕ್ಕೆ ಒಳಪಟ್ಟ ಖಾಸಗಿ ವಲಯದ ನೆರವಿನಿಂದ ಗರಿಷ್ಠ ಮಟ್ಟದ ಆರ್ಥಿಕ ವೃದ್ಧಿ ದರ ಸಾಧ್ಯ ಎನ್ನುವ ಮನೋಭಾವ ಆಡಳಿತಗಾರರಲ್ಲಿ ಮನೆ ಮಾಡಿತ್ತು.
ಸರ್ಕಾರದ ಕಾರ್ಯಾಂಗ ಮತ್ತು ರಾಜಕೀಯ ಮುಖಂಡರು ಇಂತಹ ಧೋರಣೆ ಪಾಲಿಸಲು ಪ್ರಮಾಣ ವಚನ ಸ್ವೀಕರಿಸಿದಂತೆ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದರು.
ಆದರೆ, ಇದರ ಒಟ್ಟಾರೆ ಫಲಿತಾಂಶ ಮಾತ್ರ ಆರ್ಥಿಕ ನೀತಿ ನಿರೂಪಕರ ನಿರೀಕ್ಷೆಗೆ ವ್ಯತಿರಿಕ್ತವಾಗಿತ್ತು.
ಆರ್ಥಿಕ ವೃದ್ಧಿ ದರ ಕೇವಲ ಶೇ 2ರಿಂದ ಶೇ 3ರಷ್ಟಿತ್ತು. ತೀರ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇದು ಶೇ 5ರಷ್ಟಕ್ಕೆ ತಲುಪುತ್ತಿತ್ತು. ಇದರ ಫಲಶ್ರುತಿಯಾಗಿ ಆರ್ಥಿಕ ಪರಿಸ್ಥಿತಿ ಯಾವತ್ತೂ ಸುಧಾರಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಸುಧಾರಣಾ ಕ್ರಮಗಳು ಐತಿಹಾಸಿಕ ಎಂದೇ ಪರಿಗಣಿಸಬೇಕಾಗುತ್ತದೆ.
ಸುಧಾರಣಾ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆ, ಸರ್ಕಾರವು ಎಲ್ಲ ನಿಯಂತ್ರಣ ಕ್ರಮಗಳನ್ನು ನಿಧಾನವಾಗಿ ರದ್ದುಗೊಳಿಸಲು ಆರಂಭಿಸಿತು. ದೇಶದ ಕರೆನ್ಸಿಯನ್ನು (ರೂಪಾಯಿ) ಗಮನಾರ್ಹ ಪ್ರಮಾಣದಲ್ಲಿ (ಶೇ 25ರಷ್ಟು)ಅಪಮೌಲ್ಯಗೊಳಿಸಲಾಯಿತು.
ಇತರ ಬದಲಾವಣೆಗಳಾದ, ಬಡ್ಡಿ ದರ ಇಳಿಕೆ, ಆಮದು - ರಫ್ತು ಸುಂಕಗಳ ಇಳಿಕೆ ಮತ್ತು `ಲೈಸೆನ್ಸ್ ರಾಜ್` ಅನ್ನು ನಿರ್ಮೂಲನೆ ಮಾಡಲು ಮುಂದಾಯಿತು. ಹೀಗೆ ಆರಂಭಿಕ ಹಂತದಲ್ಲಿ ಅಷ್ಟೇನೂ ವಿವಾದಾತ್ಮಕವಲ್ಲದ ಕ್ರಮಗಳಿಗೆ ಕೈಹಾಕಲಾಗಿತ್ತು.
ಇದು ಬದಲಾವಣೆಯ ಮತ್ತು ದೂರ ಪಯಣದ ಮೊದಲ ಹೆಜ್ಜೆಯಾಗಿತ್ತು. ಯಾವುದೇ ಬದಲಾವಣೆ ಅಷ್ಟು ಸುಲಭವಾಗಿರುವುದಿಲ್ಲ ಎನ್ನುವುದು ಅನುಭವ ವೇದ್ಯ.
ಸುಧಾರಣೆಗೆ ಹಲವಾರು ಕಡೆಗಳಿಂದ ತೀವ್ರ ವಿರೋಧ ಕಂಡು ಬರುತ್ತಲೇ ಇರುತ್ತದೆ. ಆರ್ಥಿಕ ಸುಧಾರಣಾ ಕ್ರಮಗಳಿಗೆ ಪ್ರಭಾವಿ ಉದ್ದಿಮೆ ಲಾಬಿಗಳಿಂದಲೇ ವಿರೋಧ ಎದುರಾದದ್ದು ಮಾತ್ರ ಅನಿರೀಕ್ಷಿತವಾಗಿತ್ತು. ಬದಲಾವಣೆ ತರಲು ಗೌಜು ಗದ್ದಲ ನಡೆಸುತ್ತಿದ್ದ ದೊಡ್ಡ ಉದ್ದಿಮೆ ಸಮೂಹಗಳೇ `ಬಾಂಬೆ ಕ್ಲಬ್` ರಚಿಸಿಕೊಂಡು, ಸುಧಾರಣಾ ಕ್ರಮಗಳನ್ನು ನಿಧಾನವಾಗಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಸಲಹೆ ನೀಡಲು ಮುಂದಾಗಿದ್ದವು.
ಸುಧಾರಣೆಗಳು ತಮ್ಮ ಏಕಸ್ವಾಮ್ಯಕ್ಕೆ ಧಕ್ಕೆ ತರಲಿವೆ ಎನ್ನುವುದು ಅವುಗಳ ಆತಂಕವಾಗಿತ್ತು. ಎಲ್ಲರಿಗೂ ಸಮಾನ ಅವಕಾಶ ಒದಗಿಸಬೇಕು ಎನ್ನುವ ಈ ಉದ್ದಿಮೆ ಸಂಸ್ಥೆಗಳ ಮನವಿಯ ಹಿಂದೆ ತಮ್ಮೆಲ್ಲ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಹುನ್ನಾರ ಅಡಗಿತ್ತು.
ಆದರೆ, ಸರ್ಕಾರ ದೃಢ ನಿರ್ಧಾರ ಮಾಡಿದಂತಿತ್ತು. ಹಿಂದೆ ಹೆಜ್ಜೆ ಇಡಲು ಬಯಸದ ಸರ್ಕಾರ, ಹಲವಾರು ಅಡಚಣೆಗಳ ಮಧ್ಯೆಯೇ ಸುಧಾರಣಾ ಕ್ರಮಗಳನ್ನು ಮುಂದುವರೆಸಿತ್ತು. ಕೃಷಿ ಮತ್ತು ಕಾರ್ಮಿಕ ವಲಯ ಹೊರತುಪಡಿಸಿ ಅರ್ಥ ವ್ಯವಸ್ಥೆಯ ಉಳಿದೆಲ್ಲ ವಲಯಗಳನ್ನು ಪರಾಮರ್ಶೆಗೆ ಒಳಪಡಿಸಿತ್ತು.
ಆಮದು ಸುಂಕ ಇಳಿಸಲಾಯಿತು. ಆದಾಯ ತೆರಿಗೆ ಮತ್ತು ಅಬಕಾರಿ ಸುಂಕ ಸರಳೀಕರಣಗೊಳಿಸಿತು. ದೇಶದಲ್ಲಿ ಮೊದಲ ಬಾರಿಗೆ ಸೇವಾ ತೆರಿಗೆ ಎನ್ನುವ ಹೊಸ ಪರಿಕಲ್ಪನೆ ಪರಿಚಯಿಸಲಾಯಿತು. ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ನಿರ್ದೇಶನಗಳಿಗೆ ಅನುಗುಣವಾಗಿ ಎಲ್ಲ ಬಗೆಯ ಅಂತರರಾಷ್ಟ್ರೀಯ ವಹಿವಾಟಿಗೆ ಕ್ರಮೇಣ ಅವಕಾಶ ಮಾಡಿಕೊಡಲಾಯಿತು.
ಈ ಎಲ್ಲ ಬದಲಾವಣೆಗಳು ನಿಧಾನವಾಗಿ ಆದರೆ, ಸ್ಥಿರವಾಗಿ ಫಲ ನೀಡತೊಡಗಿದವು. ಸುಧಾರಣಾ ಕ್ರಮಗಳ ಪೈಕಿ, ಹೊಸ ತಲೆಮಾರಿನ ಉದ್ಯಮಿಗಳಿಂದ ಆರಂಭವಾದ ಬಲಿಷ್ಠ ಸೇವಾ ವಲಯದ ಉದಯವು ಮಹತ್ವದ ಬೆಳವಣಿಗೆಯಾಗಿತ್ತು. ಮಾಹಿತಿ ತಂತ್ರಜ್ಞಾನ (ಐ.ಟಿ) ರಂಗದ ಅನೇಕ ದೈತ್ಯ ಸಂಸ್ಥೆಗಳು ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಿದವು. `ಭಾರತದಲ್ಲಿ ತಯಾರಾದ ಸರಕು` (made in India) ಎನ್ನುವ ಬ್ರಾಂಡ್‌ಗೆ ಎಲ್ಲೆಡೆ ಭಾರಿ ಮನ್ನಣೆ ದೊರೆಯಿತು. ಇತರ ಉದ್ಯಮಗಳೂ ಇದೇ ಯಶೋಗಾಥೆ ಮತ್ತು ಖ್ಯಾತಿಯ ಪ್ರಯೋಜನ ಪಡೆದುಕೊಂಡವು.
ವಿಶ್ವದಾದ್ಯಂತ ಭಾರತವನ್ನು ಗುರುತಿಸುವ ಮಹತ್ವದ ಬೆಳವಣಿಗೆಯೂ ಕಂಡು ಬಂದಿತು. ದೇಶದ ಉದ್ದಿಮೆ ರಂಗದ ಬಗ್ಗೆ ಸಕಾರಾತ್ಮಕ ವರ್ಚಸ್ಸೂ ರೂಪುಗೊಂಡಿತು.
ಉದ್ದಿಮೆ ವಲಯದಲ್ಲಿನ ಯಶಸ್ಸಿನ ಹಲವಾರು ನಿದರ್ಶನಗಳು ಬೆಳಕಿಗೆ ಬರಲು ಆರಂಭಿಸಿದವು. ಈ ಯಶಸ್ಸಿನಿಂದ ಪ್ರೇರಣೆ ಪಡೆದ ದೇಶಿ ಉದ್ದಿಮೆ ಸಂಸ್ಥೆಗಳು ವಿಶ್ವದ ಇತರ ಭಾಗಗಳಲ್ಲಿನ ಉದ್ದಿಮೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಕ್ರಿಯಾಶೀಲಗೊಂಡವು.
ಟಾಟಾ, ಬಿರ್ಲಾ, ಮಿತ್ತಲ್, ಅಂಬಾನಿ ಮತ್ತಿತರ ಬೃಹತ್ ಉದ್ದಿಮೆ ಸಮೂಹಗಳು ವಿದೇಶಗಳಲ್ಲಿ ಉದ್ದಿಮೆಗಳನ್ನು ವಿಸ್ತರಿಸಲು ಕ್ರಮ ಕೈಗೊಂಡವು. ಜಾಗತಿಕ ಮಾನ್ಯತೆ ಪಡೆದ ಕೆಲ ಬ್ರಾಂಡ್‌ಗಳನ್ನೂ ದೇಶಿ ಉದ್ದಿಮೆಗಳು ತಮ್ಮ ಕೈವಶ ಮಾಡಿಕೊಂಡವು.
ಈ ಮಧ್ಯೆ, ಮೂಲ ಸೌಕರ್ಯ, ವಿದ್ಯುತ್, ರಸ್ತೆ, ಶಿಕ್ಷಣ, ಬ್ಯಾಂಕಿಂಗ್, ವಿಮೆ, ದೂರಸಂಪರ್ಕ, ಆರೋಗ್ಯ, ನಾಗರಿಕ ವಿಮಾನಯಾನ ಮತ್ತಿತರ ವಲಯಗಳನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಯಿತು. ಇದರಿಂದ ದೇಶಿ ಮತ್ತು ವಿದೇಶಿ ಸಂಸ್ಥೆಗಳು ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತೇಜನ ದೊರೆಯಿತು.
ಭಾರತವು ಏಕಾಏಕಿ ವಿದೇಶಿ ಬಂಡವಾಳ ಹೂಡಿಕೆದಾರರ ಅಚ್ಚುಮೆಚ್ಚಿನ ತಾಣವಾಗಿ ಗಮನ ಸೆಳೆಯತೊಡಗಿತು. ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಗಳು (ಎಫ್‌ಐಐ) ದೇಶದೊಳಗೆ ಪ್ರವಾಹೋಪಾದಿಯಾಗಿ ಹರಿದು ಬರಲು ಆರಂಭಿಸಿದವು.
2008ರವರೆಗಿನ ಅವಧಿಯಲ್ಲಿನ ಜಾಗತಿಕ ಆರ್ಥಿಕ ಬೆಳವಣಿಗೆಯೂ ಭಾರತದ ಆರ್ಥಿಕ ಮುನ್ನಡೆಗೆ ಸಾಕಷ್ಟು ಪ್ರಮಾಣದಲ್ಲಿ ನೆರವಾಯಿತು. ಆ ಸಂದರ್ಭದಲ್ಲಿ, ಭಾರತದಲ್ಲಿನ ಆರ್ಥಿಕ ಪ್ರಗತಿಯ ತೀವ್ರತೆ ಅದೆಷ್ಟರ ಮಟ್ಟಿಗೆ ಇತ್ತು ಎಂದರೆ, ತೀಕ್ಷ್ಣ ಸ್ವರೂಪದ ಜಾಗತಿಕ ಹಣಕಾಸು ಬಿಕ್ಕಟ್ಟು ಮತ್ತು ಅದನ್ನು ಹಿಂಬಾಲಿಸಿದ ಆರ್ಥಿಕ ಹಿಂಜರಿಕೆಯು ವಿಶ್ವದ ಪ್ರಮುಖ ದೇಶಗಳನ್ನು ಹಿಂಡಿ ಹಿಪ್ಪೆ ಮಾಡಿದ್ದರೂ, ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದೇ ಹೋಯಿತು.
ಅರ್ಥವ್ಯವಸ್ಥೆ ಮತ್ತು ಸಾಮಾಜಿಕ ಸ್ಥಿತಿಗತಿ ತೋರುವ ಹಲವಾರು ಅಂಕಿ ಅಂಶಗಳು, ಭಾರತದ ಆರ್ಥಿಕ ಯಶೋಗಾಥೆಗೆ ಕನ್ನಡಿ ಹಿಡಿಯುತ್ತವೆ. ಅವುಗಳನ್ನು ಆಧರಿಸಿ ಹೇಳುವುದಾದರೆ, ದೇಶದ ಅರ್ಥ ವ್ಯವಸ್ಥೆಯು ಅತ್ಯುತ್ತಮ ಸಾಧನೆ ತೋರಿಸುತ್ತಿದೆ.
ಆರ್ಥಿಕತೆಯಲ್ಲಿ ಚೇತೋಹಾರಿಯಾದ ವಾತಾವರಣ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸದ್ಯಕ್ಕೆ ಸುಧಾರಣಾ ಕ್ರಮಗಳು ನಿಧಾನಗೊಂಡಿವೆ ಎನ್ನುವುದು ಮಾತ್ರ ಕಳವಳಕಾರಿ ಬೆಳವಣಿಗೆಯಾಗಿದೆ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಯುಪಿಎ) ಸರ್ಕಾರವು ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಕಳೆದ ಆರೇಳು ವರ್ಷಗಳಲ್ಲಿ ಯಾವುದೇ ದೊಡ್ಡ ಪ್ರಮಾಣದ ಸುಧಾರಣಾ ಕ್ರಮಗಳು ಜಾರಿಗೆ ಬಂದಿಲ್ಲ.
ಕಳೆದ ಎರಡು ದಶಕಗಳಲ್ಲಿ ಜಾರಿಗೆ ಬಂದಿರುವ ಬಹುತೇಕ ಆರ್ಥಿಕ ಸುಧಾರಣಾ ಕ್ರಮಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿಯೇ ಇವೆ. ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಸುಧಾರಣೆಗಳ ಸ್ಥಿತಿಗತಿ ಇನ್ನೂ ಶೋಚನೀಯವಾಗಿಯೇ ಇದೆ.
ಸದ್ಯಕ್ಕೆ, ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರವು ಇನ್ನಷ್ಟು ವಿಳಂಬ ಮಾಡದೇ ಹೊಸ ಸುಧಾರಣಾ ಕ್ರಮಗಳ ಜಾರಿಗೆ ತಕ್ಷಣಕ್ಕೆ ಮುಂದಾಗಬೇಕಾಗಿದೆ. ಇಲ್ಲದಿದ್ದರೆ ನಮ್ಮ ಅರ್ಥ ವ್ಯವಸ್ಥೆಯು ಈ ಹಿಂದಿನ ನಿಧಾನ ಗತಿಯ ಬೆಳವಣಿಗೆಯ ಜಡತ್ವಕ್ಕೆ ಮರಳಿದೆ.
No comments:
Post a Comment