Total Pageviews

Saturday, September 3, 2011

ಗುರುದೇವ ರವೀಂದ್ರರ ವಿಚಿತ್ರಲೋಕ

ಸುಮಾರು 1930ರಲ್ಲಿ ಹೀಗಾಯಿತು: ಒಬ್ಬ ವಿಶ್ವಪ್ರಸಿದ್ಧ ವ್ಯಕ್ತಿ ಇದ್ದಕ್ಕಿದ್ದಂತೆ ತಬ್ಬಲಿಯಂತಾದ. ಆತ ಬಂಗಾಳದಲ್ಲಿ ಹುಟ್ಟಿ, 8ನೆಯ ವಯಸ್ಸಿನಲ್ಲಿಯೇ ಕಾವ್ಯರಚನೆಗೆ ತೊಡಗಿದ್ದ. ಸಾಹಿತ್ಯದ, ಕಲೆಯ ಹಲವು ಪ್ರಕಾರಗಳನ್ನು ಶ್ರೀಮಂತಗೊಳಿಸಿ ಅಪಾರ ಕೀರ್ತಿಭಾಜನನಾಗಿದ್ದ.

ಜಗತ್ತಿನ ಐದು ಖಂಡಗಳ 30ದೇಶಗಳನ್ನು ಸುತ್ತಿ ಬಂದು, ಹೋದಹೋದಲ್ಲೆಲ್ಲ ಆಯಾದೇಶಗಳ ಆ ಕಾಲದ ಕವಿ, ಕಲಾವಿದ, ಜ್ಞಾನಿ, ವಿಜ್ಞಾನಿ, ನೇತಾರ, ನಾಯಕರೊಂದಿಗೆ ತಲಸ್ಪರ್ಶಿಯಾದ ಚರ್ಚೆ-ಸಂವಾದಗಳನ್ನು ನಡೆಸಿದ್ದ;

ಅವರಿಂದ ಪ್ರಭಾವಿತನಾಗಿ, ಅವರನ್ನೂ ಪ್ರಭಾವಿಸುತ್ತಾ, ಜಗತ್ತಿನ ಆಗುಹೋಗುಗಳ ಬಗ್ಗೆ, ವಿಶ್ವದ ಏಕತೆಯ ಬಗ್ಗೆ, ಮಾನವನ ಸ್ವಾತಂತ್ರ್ಯದ ಬಗ್ಗೆ, ವಿಶ್ವಶಾಂತಿಯ ಬಗ್ಗೆ ಪ್ರವಚನ ನೀಡುತ್ತಾ, ಧ್ಯಾನಿಸುತ್ತಿದ್ದ.

ಹೀಗೆ ದಿಗ್ಭಿತ್ತಿ ಪರ್ಯಂತ ಕೀರ್ತಿಯನ್ನು ಆರ್ಜಿಸುತ್ತಾ, ಸಮಸ್ತ ಭೂಮಂಡಲದ ಅನಧಿಕೃತ ಸಾಂಸ್ಕೃತಿಕ, ನೈತಿಕ, ತಾತ್ವಿಕ ರಾಯಭಾರಿಯಾಗಿ ಪೃಥ್ವಿಮಂಡಲವನ್ನು ಸುತ್ತಿಬಂದ ಪ್ರಪ್ರಥಮ ಭಾರತೀಯನಾಗಿದ್ದ.

1861ರಲ್ಲಿ ಹುಟ್ಟಿದ ಆತ 1913ರಲ್ಲೇ ನೊಬೆಲ್ ಬಹುಮಾನ ಪಡೆದ ಮೊದಲ ಏಷಿಯನ್ನನಾಗಿದ್ದ. ಆತನ ತೇಜಸ್ವಿ ಮುಖ, ನೀಳವಾದ ಪ್ರಭಾವಿ ಗಡ್ಡ, ಎಲ್ಲೋ ಒಂದು ಕಡೆ ಏಸುಕ್ರಿಸ್ತನ ನೆನಪು ತರುತ್ತಿತ್ತು.

1928ರಲ್ಲಿ ದಕ್ಷಿಣ ಜರ್ಮನಿಯ ಒಂದು ಸುಂದರತಾಣದಲ್ಲಿ ಒಂದು ದೊಡ್ಡ ಶ್ರೋತೃವೃಂದಕ್ಕೆ ತನ್ನ ಗೀತಾಂಜಲಿ ಬಂಗಾಳಿ ಕವಿತೆಗಳ ತಾನೇ ಮಾಡಿದ ಕೆಟ್ಟ ಇಂಗ್ಲಿಷ್ ಅನುವಾದಗಳನ್ನು ಆತ ಓದುತ್ತಿರುವಾಗ ಇಂಗ್ಲಿಷ್ ಬಲ್ಲವನಾಗಿದ್ದ ಒಬ್ಬ ಪತ್ರಕರ್ತ ಬರೆದ:

`ಆ ಕವಿತೆಗಳೇನೋ ನನಗೆ ಹಿಡಿಸಲಿಲ್ಲ. ಅವನ ಮಾತೂ ನನಗೆ ಅರ್ಥವಾಗಲಿಲ್ಲ. ಆದರೆ ಅವನ ಮುಖ, ನೀಳವಾದ ಗಡ್ಡ, ದನಿಯ ಗಾಂಭೀರ್ಯ ಇವನ್ನೆಲ್ಲಾ ಕಂಡಾಗ ಅನಿಸತೊಡಗಿತು: ಇವನೇ ವಿಶ್ವದ ಮುಂದಿನ ಪ್ರವಾದಿ ಇರಬಹುದೇ?` ಆತನೇ ಗುರುದೇವ ರವೀಂದ್ರನಾಥ ಟ್ಯಾಗೋರ್!

1930ರಲ್ಲಿ ತನ್ನ ಇಳಿವಯಸ್ಸಿನಲ್ಲಿ ಅವನನ್ನು ತಬ್ಬಲಿತನ ಆವರಿಸಿತು. ಏರು ಜೋರಿನಲ್ಲಿ ಮೇಳ ನಡೆದಿರಲು ತಂತಿ ಹರಿದ ಹಾಗೆ ಭಾರತದ ಪ್ರತಿನಿಧಿಯಾಗಿ ಜಗತ್ತು ಆತನನ್ನು ಆದರಿಸಿದ್ದರೂ ಭಾರತೀಯತೆಯ, ರಾಷ್ಟ್ರೀಯವಾದದ ಅತಿರೇಕಗಳ ಬಗ್ಗೆ ಎಚ್ಚರವನ್ನು ಕಾಯ್ದುಕೊಂಡಿದ್ದ.

ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ವಿಶ್ವಾತ್ಮಕತೆಯ ಹರಿಕಾರತ್ವವನ್ನು ಆವಾಹಿಸಿಕೊಂಡಿದ್ದ ಆತನಿಗೆ ತನ್ನ ಈ ವರೆಗಿನ ದಾರ್ಶನಿಕ ಚೌಕಟ್ಟಿಗೆ ಸಿಲುಕದ ಒಂದು ಅನುಭವ ಪ್ರಪಂಚವಿರುವುದು ಅನಿರೀಕ್ಷಿತವಾಗಿ ಗೋಚರವಾಯಿತು. ತನ್ನ ಪ್ರವಾದಿತ್ವದ ಕನ್ನಡಕವನ್ನು ಕಳಚಿ ಜಗತ್ತಿನತ್ತ ದೃಷ್ಟಿ ಹಾಯಿಸಿದ ಸಂತನ ಸ್ವಂತ ಮನಸ್ಸು ಶಾಂತಿಯನ್ನು ತೊರೆದು ಅಶಾಂತವಾಯಿತು.

ಈ ವರೆವಿಗೆ ತನ್ನ ಮಾಧ್ಯಮಗಳಾಗಿದ್ದ ಶಬ್ದ, ಧ್ವನಿಗಳಿಗೆ ಹೊರತಾದ ರೂಹುಗಳು ಆತನನ್ನು ಕಾಡತೊಡಗಿದವು. ಅಲ್ಲಿಯವರೆಗೆ ಕವಿ, ಸಂಗೀತಗಾರನಾಗಿದ್ದ ಮಹಾನ್ ಕಲಾವಿದ ಎಪ್ಪತ್ತರ ಇಳಿವಯಸ್ಸಿನಲ್ಲಿ ಚಿತ್ರಕಾರನಾಗಿ ಮರು ಹುಟ್ಟಿದ. ಆ ಮೂಲಕ ಭಾರತೀಯ ಚಿತ್ರಕಲೆಗೂ ಮರುಹುಟ್ಟು ನೀಡಿದ.

ಆ ಚಿತ್ರಗಳು ಚಿತ್ರಗಳ ಹಾಗೆಯೇ ಇರಲಿಲ್ಲ. ಹಾಗೆಂದು ಭಾರತೀಯ ಚಿತ್ರಕಲಾ ಪಂಡಿತರು ಮುಖ ಸಿಂಡರಿಸಿಕೊಂಡರು. ಅವರಿಗೆ ಆ ಚಿತ್ರಗಳು ಅಸ್ತವ್ಯಸ್ತ ಗೆರೆಗಳ ಹಾಗೆ, ಶಾಯಿ ಚೆಲ್ಲಿದಾಗ ಉಂಟಾಗುವ ಕಲೆಗಳ ಹಾಗೆ ಕಂಡವೇ ಹೊರತು ಕಲಾಕೃತಿಗಳಾಗಿ ತೋರಲಿಲ್ಲ. ವಿಶ್ವಕವಿಯ ಈ ಬಾಲಿಶ ಅವಾಂತರಗಳು ಅವರಿಗೆ ಮುಜುಗರ ಉಂಟು ಮಾಡಿದವು.

ಅವರು ಕೇಳಿದರು: `ಚಿತ್ರಕಲೆಗೆ ಕೈಹಾಕುವ ಮೊದಲು ನಿಮಗೆ ಈ ಕ್ಷೇತ್ರದಲ್ಲಿ ಯಾವ ಥರದ ತರಬೇತಿಯಾಗಿತ್ತು?` ಅದಕ್ಕೆ ರವೀಂದ್ರನಾಥ ಟ್ಯಾಗೋರರು ಹಾಕಿದ ಮರುಪ್ರಶ್ನೆ: `30 ವರ್ಷಗಳ ಹಿಂದೆ ಹಿಂದೆ ನಾನು ಸಂಗೀತಕ್ಕೆ ಕೈ ಹಾಕಿದಾಗ ಆ ಮೊದಲು ನನಗೆ ಯಾವ ತರಬೇತಿ ಇತ್ತು? 8ನೆಯ ವಯಸ್ಸಿನಲ್ಲಿ ಕವಿತೆ ರಚಿಸತೊಡಗಿದಾಗ ಅದಕ್ಕಿಂತಾ ಮುಂಚೆ ನನಗೆ ಯಾವ ತರಬೇತಿ ಇತ್ತು?`ಹೀಗೆ ಟ್ಯಾಗೋರರು ಸ್ವ ಸಮರ್ಥನೆಯ ನಿರಾಕರಣೆಯನ್ನೇ ಸ್ವಸಮರ್ಥನೆಯನ್ನಾಗಿ ಬಳಸಿಕೊಂಡರು.

ಭಾರತೀಯರು ಇಷ್ಟಪಡದ ಆ ಚಿತ್ರಗಳನ್ನು ವಿದೇಶಿ ವಿದ್ವಾಂಸರು ಮೆಚ್ಚಿ ಮಾತಾಡಿದಾಗ ಚಿತ್ರಕಲಾ ಪಂಡಿತರಿಗೆ ಆ ವಿಚಿತ್ರ ಚಿತ್ರಲೋಕ ನುಂಗಲಾರದ, ಉಗುಳಲಾರದ ತುಪ್ಪವಾಯಿತು.

ರವೀಂದ್ರ ಭಕ್ತರಿಗೂ ಹಾಗೆಯೇ ಅನಿಸಿರಬಹುದು. `ಕೊಥಾಯ್ ಆಲೋ ಕೊಥಾಯ್ ಓರೇ ಆಲೋ` (ಎಲ್ಲಿ ಬೆಳಕು, ಹೇಳು ಎಲ್ಲಿದೆ ಬೆಳಕು?) ಎಂದು ನೊಬೆಲ್ ಪುರಸ್ಕೃತ `ಗೀತಾಂಜಲಿ`ಯಲ್ಲಿ ಕೇಳಿದ ಆ ಬೆಳಕಿನ ಪೂಜಾರಿಯೆಲ್ಲಿ? ಕತ್ತಲಿನಿಂದ ಕೆತ್ತಿದ ಹಾಗೆ ಕಾಣುವ ಈ ಕರಾಳ ಚಿತ್ರಲೋಕದ ಕಾಳಾಮುಖನೆಲ್ಲಿ? `ಸೊಕೊಲ್ ಆಕಾಶ್ ಸೊಕೊಲ್ ಧೊರಾ ಆನೊಂದೇ ಹೋಶಿತೇ ಭರಾ, ಜೆ ದಿಕ್ ಪಾನೇ ನೊಯನ್ ಮಿಲೇ ಭಾಲೋ ಶೊಬಾಯ್ ಭಾಲೋ? (ಸಕಲ ಆಕಾಶ-ಧರೆಗಳು ಬೆಳಕಿನಿಂದ ತುಳುಕುತ್ತಿವೆ: ಯಾವ ದಿಶೆಯಲ್ಲಿ ಕಣ್ಣು ಹಾಯಿಸಿದರೂ ಎಲ್ಲವೂ ಚೆಲುವಾಗಿದೆ) ಎಂದ ಆ ಸೌಂದರ್ಯಾರಾಧಕ ಎಲ್ಲಿ ಹೋದ?

ಜೀವಜಡ ಲೋಕಗಳ ಭ್ರೂಣಗಳಲ್ಲಿ ಇನ್ನೂ ಸಂಚಿತ ರೂಪು ಲಾವಣ್ಯಗಳನ್ನು ತಾಳದ ಈ ವಿಕೃತಾಕೃತಿಗಳನ್ನು ಭ್ರೂಣಪಾತ ಮಾಡಿದ ಈ ಅ ಸೌಂದರ್ಯದ ಆವಾಹಕ ಎಲ್ಲಿಂದ ಬಂದ?

1913ರಲ್ಲಿ ಟ್ಯಾಗೋರರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ಈ ಘಟನೆಯಲ್ಲಿ ಟ್ಯಾಗೋರರ ಮಿತ್ರನಾಗಿದ್ದ ಐರಿಷ್ ಕವಿ ಯೇಟ್ಸ್‌ನ ನೆರವು ಬಹುಮುಖ್ಯ ಪಾತ್ರ ವಹಿಸಿತ್ತು. ಆತ `ಗೀತಾಂಜಲಿ`ಯ ಮೊದಲ ಇಂಗ್ಲಿಷ್ ತರ್ಜುಮೆಗೆ ಮುನ್ನುಡಿ ಬರೆದು ಆ ಕವಿತೆಗಳನ್ನು ಕೊಂಡಾಡಿದ್ದ. ಮುಪ್ಪಾಗುವ ಹೊತ್ತಿಗೆ ಯೇಟ್ಸ್‌ನಿಗೆ ಟ್ಯಾಗೋರರ ಕಾವ್ಯದ ಬಗ್ಗೆ, ಭಾರತೀಯ ಕಾವ್ಯದ ಬಗ್ಗೆ ಒಂದು ಬಗೆಯ ಭ್ರಮನಿರಸನ ಉಂಟಾಯಿತು.

ಟ್ಯಾಗೋರರ ಕಾವ್ಯವನ್ನೂ ಒಳಗೊಂಡು ಭಾರತೀಯ ಕಾವ್ಯ ದುರಂತಾನುಭವಗಳನ್ನು ಎದುರಿಸುವುದರಲ್ಲಿ ವಿಫಲವಾಗಿದೆಯೆನಿಸಿತು. (ಬಹುಶಃ ಯೇಟ್ಸ್ `ಮಹಾಭಾರತ`ದ ಕೊನೆಯ ಸ್ವರ್ಗಾರೋಹಣ ಪರ್ವವನ್ನು ಓದಿರಲಿಲ್ಲ).


ಭಾರತೀಯ ಕಾವ್ಯದಲ್ಲಿ ದುರಂತದ ಅಭಾವವಿದೆ ಎಂಬುದು ಚರ್ಚಾಸ್ಪದ. ಆದರೆ ಟ್ಯಾಗೋರರ 1930ರ ಪೂರ್ವ ಸೃಷ್ಟಿಯ ಬಗ್ಗೆ ಇದು ಬಹುಶಃ ನಿಜ. ಕಡೆಯ ಪಕ್ಷ `ಗೀತಾಂಜಲಿ`ಯ ವಿಷಯದಲ್ಲಿ ಇದು ಖಂಡಿತಾ ನಿಜ.

`ಗೀತಾಂಜಲಿ`ಯ ಲೋಕದಲ್ಲಿ ವಿರಹವಿದೆ, ನೋವಿದೆ, ನಿರಾಶೆಯಿದೆ. ಆದರೆ ನಿರ್ಗುಣ ಭಕ್ತಿಯ ಲೋಕದಲ್ಲಿ ದುರಂತಕ್ಕೆ ಜಾಗವಿಲ್ಲ. ಆಲ್ಲಿನ ನರಕದಲ್ಲೂ ಸ್ವರ್ಗದ ನೆರಳಿದೆ. ದುರಂತದಲ್ಲೂ ಅಗಲಿ ಕೂಡುವ ಸುಖದ ಭರವಸೆಯಿದೆ. ಇಲ್ಲಿನ ಕೊರಡು ಮತ್ತೆ ಖಂಡಿತಾ ಕೊನರುತ್ತದೆ.

ಆದರೆ ಟ್ಯಾಗೋರರ ಚಿತ್ರಲೋಕದಲ್ಲಿ ವಿಶ್ವಚೈತನ್ಯದ ಆ ಪ್ರಭೆ ಮಾಯವಾಗಿದೆ. ಅವರು ರಚಿಸಿದ ಸುಮಾರು ಇನ್ನೂರು ಚಿತ್ರಗಳಲ್ಲಿ ಸೌಂದರ್ಯದ ಹುಡುಕಾಟವೂ ಇಲ್ಲ.

ಅಲ್ಲಿರುವುದು ಸೌಂದರ್ಯ-ವಿಕೃತಿಗಳನ್ನು ದಾಟಿದ, ಸುಖಾಂತ-ದುಃಖಾಂತಗಳನ್ನು ತೆಗಳದ ಮರುಜನ್ಮದ, ಮರುಹುಟ್ಟಿನ ದಾಹ, ತಹತಹ. ಗತದ ಸಂಕೋಲೆಗಳಿಂದ ಬಿಡುಗಡೆ ಪಡೆದ ನವನಿರ್ಮಿತಿಯ ಶಕ್ತಿ. ಮೈನವಿರೇಳಿಸುವುದು, ಮನಕಲಕುವುದು ಇದರ ಉದ್ದೇಶವಲ್ಲ, ಅಥವಾ ಹೊರಲೋಕದ ಆಕೃತಿಗಳನ್ನು ಹಿಡಿದಿಡುವುದೂ ಅಲ್ಲ.

ಅಂತರಾಳಗಳಲ್ಲಿ ನಿಂತ ನೀರುಗಳನ್ನು ಕೆದಕಿ ಮನತಳದ ಅಪೂರ್ಣ, ಆಕಾರ-ನಿರಾಕಾರಗಳ ನಡುವೆ ತುಯ್ಯುತ್ತಿರುವ ಜಡಜೀವಗಳನ್ನು ಮಂದಬೆಳಕಿನಲ್ಲಿ ಕಾಣಿಸುವ ಈ ವಿಚಿತ್ರಚಿತ್ರಲೋಕದ ಬಗೆ ಬೇರೆ.

ಅದು ಸೊಬಗಿನ ಸೋನೆಯಲ್ಲ. ಆದಿಮ ವಿವರಗಳ ಅನಾವರಣ. ಇದನ್ನು ಬೆಳಗುವವನು ಪ್ರಕಾಶ ಸ್ವರೂಪದ ಸೂರ್ಯನಲ್ಲ; ನಿದ್ದೆ ಎಚ್ಚರಗಳ ನಡುವೆ ಸುಳಿಯುವ ಆದಿತ್ಯ.

ಸಾಹಿತ್ಯದಲ್ಲಿ ಭಾರತೀಯ ನವೋದಯದ ಶಿಲ್ಪಿಯಾದ ಟ್ಯಾಗೋರ್ ಚಿತ್ರಕಲೆಯಲ್ಲಿ ಭಾರತೀಯ ಆಧುನಿಕತೆಯ ಹರಿಕಾರರಾಗಿ ಕಾಣುತ್ತಾರೆ. ದೃಶ್ಯಾನುಭವವನ್ನು ಶಬ್ದಗಳ ಮೂಲಕ ತೆರೆದಿಡುವಲ್ಲಿ ಸಿದ್ಧಹಸ್ತರಾದ ಟ್ಯಾಗೋರರ ಮತ್ತೊಂದು ಪ್ರತಿಭೆ ಅವರ ಚಿತ್ರಕಲೆಯಲ್ಲಿ ಮುನ್ನೆಲೆಗೆ ಬರುತ್ತದೆ. ಅದು ಶಬ್ದಪೂರ್ವ ರೂಹುಗಳ ವಿಸ್ಮೃತಿ. ಇದೇ ಅಲ್ಲವೇ ಆಧುನಿಕ ಕಲೆಯ ನಿರ್ವಚನ? ಕೈಡಿಸ್ಕಿ, ಪಿಕಾಸೋ, ಡಾಲಿ ಮುಂತಾದವರು ಕ್ರಮಿಸಿದ್ದು ಈ ಹಾದಿಯನ್ನೇ.

ಅವರೆಲ್ಲರನ್ನೂ ಟ್ಯಾಗೋರರ ಚಿತ್ರಕಲೆ ನೆನಪಿಸುತ್ತದಾದರೂ, ಅವರು ಯಾರಲ್ಲಿಯೂ ಅವರ ಚಿತ್ರಕಲೆಯ ಪೂರ್ವಮಾದರಿಗಳಿಲ್ಲ. ಅಥವಾ ಟ್ಯಾಗೋರರ ಸಾಹಿತ್ಯಿಕ ಕೃತಿಗಳಲ್ಲೂ ಅವುಗಳ ಪೂರ್ವ ಸೂಚನೆಗಳಿಲ್ಲ.

ಜಗತ್ತನ್ನು ಭಿನ್ನವಾಗಿ ನೋಡತೊಡಗಿದ ಅವರ ಕಲ್ಪನೆಯ ಕಣ್ಣು ತನ್ನನ್ನೂ ತಾನೇ ಭಿನ್ನವಾಗಿ ಚಿತ್ರಿಸುತ್ತದೆ. ಇದಕ್ಕೆ ಉದಾಹರಣೆಯಾಗಿದೆ 1932ರಲ್ಲಿ ಅವರು ರಚಿಸಿದ ಸ್ವಂತ ಮುಖಚಿತ್ರ. ಅವರ ತಾರುಣ್ಯದ ಮುಖ ಇಲ್ಲಿ ಪೂರ್ತಿ ಕಪ್ಪಾಗಿದೆ. ಅಸ್ತವ್ಯಸ್ತ ಕೆದರಿದ ಕೂದಲು, ಉದ್ದನೆಯ ಕುರುಚಲು ಗಡ್ಡ ಕತ್ತಲಿಗಿಂತ ಕಪ್ಪಾಗಿವೆ.

ಕತ್ತರಿಯನ್ನು ಎಂದೂ ಕಾಣದಂತಿರುವ ಮೀಸೆಯೂ ಅಲ್ಲಿದೆ. ಹಣೆಯ ಭಾಗದಲ್ಲಿ, ಬಲಗಣ್ಣಿನಲ್ಲಿ ನೀಳವಾದ ಮೂಗಿನಲ್ಲಿ ತುಟಿಯಂಚಿನಲ್ಲಿ ಎಲ್ಲೋ ಒಂದಿಷ್ಟು ಬೆಳಕಿನ ಸೂಚನೆಯಿದೆ. ಆ ಕಣ್ಣುಗಳು ಹೊರ ಲೋಕದ ಕಡೆ ನೋಡುತ್ತಲೇ ಇಲ್ಲ. ತಮ್ಮನ್ನು ತಾವೇ ಈಕ್ಷಿಸಿಕೊಳ್ಳುತ್ತಿವೆ.

ಆ ಮುಖದ ಹಿಂದೆ ಮಲಿನವಾದ ಹೊನ್ನಿನಂತೆ ಕಾಣುವ ಭಿತ್ತಿಯಿದೆ. ಆದರೆ ಅದಕ್ಕೂ ಈ ಕಪ್ಪುಮುಖದ ಕೌತುಕಕ್ಕೂ ಯಾವ ಅಂಟು-ನಂಟೂ ಇಲ್ಲ.ಟ್ಯಾಗೋರರ ಮುಖಚಿತ್ರಗಳು, ವ್ಯಕ್ತಿಚಿತ್ರಗಳು ಹೆಚ್ಚೂ ಕಡಿಮೆ ಇದೇ ಬಗೆಯವು.

ಅವುಗಳ ಕಣ್ಣುಗಳು ಹೊರಗಡೆ ನೋಡುತ್ತಿಲ್ಲ. ಅವೆಲ್ಲವೂ ಮುಮ್ಮಗ್ಗುಲಿನ ರೂಪುಗಳನ್ನು ಸೆರೆ ಹಿಡಿಯುವ ಕ್ಯಾಮರಾಗಳಿಗೆ ನಿಲುಕದೆ, ಒಮ್ಮಗ್ಗುಲಿನ ಅಥವಾ ಇಮ್ಮಗ್ಗುಲಿನ ಗೊತ್ತಿನಲ್ಲಿ ಮೂಡಿದವು. ಅವೆಲ್ಲವೂ ಅತೃಪ್ತಿಯಿಂದ ತಪ್ತವಾಗಿವೆ. ಅವಕ್ಕೆ ಶಾಂತಿಯ ಸೋಂಕೂ ಇಲ್ಲ. ಬೆಳಕಿನ ಭರವಸೆಯಿಲ್ಲ. ಟ್ಯಾಗೋರರು ಚಿತ್ರಿಸಿದ ದ ಒಂದೇ ಒಂದು ಮುಖ ಹೊರಗಡೆ ಅಂದರೆ ನಮ್ಮ ಕಡೆ ನೋಡುತ್ತಿದೆ.

ಅದು ಒಬ್ಬ ಸಂನ್ಯಾಸಿಯ ಚಿತ್ರ. ಅವನ ದೇಹದ ಮೇಲ್ಭಾಗ ಮಂದಗತ್ತಲಿನಲ್ಲಿ ಮುಳುಗಿದೆ. ಹೇಳಬೇಕಾದ್ದನ್ನು ಹೇಳಲೋ ಬೇಡವೋ ಅನ್ನುವ ಹಾಗೆ ನಮ್ಮ ಕಡೆ ನೋಡುತ್ತಿದ್ದಾನೆ. ಪ್ರಕ್ಷುಬ್ಧನಾಗಿದ್ದಾನೆ. ಅವನು ಬುದ್ಧನೂ ಅಲ್ಲ, ಮಹಾವೀರನೂ ಅಲ್ಲ.

ಟ್ಯಾಗೋರರ ಪ್ರಕೃತಿಚಿತ್ರಗಳಿಗೂ ಅವರ ಪ್ರಕೃತಿ ಕಾವ್ಯಕ್ಕೂ ಅದೆಂತಹ ವ್ಯತ್ಯಾಸ? ಅವರ ಚಿತ್ರಲೋಕದ ಮರಗಿಡಗಳೂ, ಗಿರಿಕಣಿವೆಗಳೂ, ಆಕೃತಿಗಳೂ ಸೂರ್ಯಚಂದ್ರರಿಗಿಂತ ಹಳೆಯ ಮಂದಬೆಳಕಿನಲ್ಲಿ ಇನ್ನೂ ರೂಪು ತಾಳುತ್ತಿರುವುದರಿಂದ ಅವು ಒಂದರಿಂದ ಒಂದು ಇನ್ನೂ ಬಿಡಿಬಿಡಿಯಾಗಿಲ್ಲ. ಇಮ್ಮಗ್ಗುಲಿನ ಗೊತ್ತಿನಿಂದ ಹೊರಬಂದು ತಮ್ಮ ಸ್ವರೂಪವನ್ನೂ ಇನ್ನೂ ಪಡೆದುಕೊಳ್ಳುವುದರಲ್ಲಿವೆ.

ಅವರ ನಾಟಕೀಯ ಘಟನೆಗಳ ವಿ-ಚಿತ್ರಣವೂ ವಿಲಕ್ಷಣ. ಹಲವು ಪಾತ್ರಗಳು ಇನ್ನೂ ಮನುಷ್ಯಾಕೃತಿಯನ್ನು ಪಡೆಯಲು ನಿರಾಕರಿಸುತ್ತಿವೆ. ಅವು ಇನ್ನೂ ಬರಿಯ ಆಕಾರಗಳು, ಗೆರೆಗಳು ಅಥವಾ ಜ್ಯಾಮಿತಿಯ ಅಚ್ಚುಗಳು. ಒಂದು ಪಾತ್ರ ಮರದ ಗೊಂಬೆಯಂತಿದೆ. ಇಲ್ಲಿನ ಮಹಿಳೆಯರು ಪೂರ್ಣದೇಹಿಗಳಾಗುತ್ತಿಲ್ಲ.


ಈ ಪ್ರಕಾರದ ಅತ್ಯಂತ ಸ್ತುತ್ಯ ಚಿತ್ರ ಮ್ಯಾಕ್‌ಬೆತ್‌ನ ಮೂವರು ಮಾಟಗಾತಿಯರದು. ಅವರು ಕತ್ತಲಿಗೆ ಹೆದರಿ ಓಡುತ್ತಿರುವ ಚಂದ್ರನ ಓಡುಬೆಳಕಿನಲ್ಲಿ ನೆರಳುಗಳಂತೆ ಕುಣಿಯುತ್ತಿರುವ ಕಪ್ಪನೆಯ ಕೇಶರಾಶಿಯಂತಿದ್ದಾರೆ.

ಟ್ಯಾಗೋರರ ಚಿತ್ರಲೋಕದಲ್ಲಿ ಇನ್ನೂ ಅನೇಕ ವಿಚಿತ್ರಗಳಿವೆ. ಅಲ್ಲೊಂದು ಹೆಣ್ಣು ಗಂಡಿನ ಜೋಡಿಯಿದೆ. ಜ್ಯಾಮಿತಿಯ ಚಹರೆರಹಿತ ಆಕಾರಗಳಾಗಿರುವ ಅವರು ತ್ರಿಕೋನಾಕೃತಿಯಲ್ಲಿ ಬಂದಿಯಾಗಿ, ಅವರು ಪಿಟೀಲಾಗಿ ಪರಸ್ಪರರ ಕೈಗಳಲ್ಲಿ ಮಾರ್ಪಡುತ್ತಿದ್ದಾರೆ.

ವಿಚಿತ್ರಲೋಕವನ್ನು ವಿ-ರಚಿಸುವ ಪ್ರಕ್ರಿಯೆಯ ಕ್ರೂರ ತಿಳಿಹಾಸ್ಯದ ಪ್ರತೀಕಗಳಾಗಿ ಅವರು ಕಾಣುತ್ತಾರೆ. ಇನ್ನೊಂದೆಡೆ ಅಂದಚಂದಗಳಿಗಿಂತ ಹಳೆಯದಾದ ಹೆಣ್ಣಿನ ಮುಖದ ಪೂರ್ವಾಕೃತಿಯೊಂದು ಕತ್ತಲಲ್ಲಿ ಕರಗುತ್ತಿರುವ ನಿಸರ್ಗ ವಿವರಗಳಲ್ಲಿ ಕರಗಿಹೋಗುತ್ತಿದೆ.

ರಚನೆಗಳು ವಿರಚನೆಗೊಳ್ಳುವ, ಹೊತ್ತುಗೊತ್ತುಗಳಿಗಂತಲೂ ಪೂರ್ವದ ಟ್ಯಾಗೋರರ ವಿ-ಚಿತ್ರ ಪ್ರಪಂಚದಲ್ಲಿ ಸಾಂಪ್ರದಾಯಿಕ ಸೌಂದರ್ಯವಿಲ್ಲ, ನಿಜ. ಆದರೆ ಅದಕ್ಕೆ ತನ್ನದೇ ಆದ ಬೆಡಗುಗಳಿವೆ, ಬೆರಗುಗಳಿವೆ.

ಟ್ಯಾಗೋರರ ನೂರಾ ಐವತ್ತನೆಯ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಅವರ ಸಾರ್ವಜನಿಕ ಆಯಾಮಕ್ಕೆ ಹೊರತಾದ ಈ ಖಾಸಗಿ ಚಿತ್ರಲೋಕದ ಮರುಹುಟ್ಟನ್ನೂ ನೆನಪಿಸಿಕೊಳ್ಳುವ ಜರೂರು ಇದೆ.

No comments:

Post a Comment