Total Pageviews

Tuesday, November 30, 2010

THE BIG STAR

ನಕ್ಷತ್ರಗಳ ಅಂತರಾಳದ ರಹಸ್ಯ ತಿಳಿಯುತ್ತಾ ಬಂದಂತೆ ಅವುಗಳ ಅಗಾಧ ಗಾತ್ರದ ದ್ರವ್ಯರಾಶಿಯ ಪರಿಚಯವೂ ಆಗತೊಡಗಿತು. ನಮಗೆ ಗೊತ್ತಿರುವ ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸಿ ನಕ್ಷತ್ರಗಳ ಕನಿಷ್ಠ ದ್ರವ್ಯರಾಶಿ ಎಷ್ಟಿರಬೇಕು ಎಂದು ತಿಳಿಯಬಹುದು. ಹಾಗೆಯೇ ಗರಿಷ್ಠ ಎಷ್ಟು ಎಂದು ಮೊದಲು ಲೆಕ್ಕ ಹಾಕಿದವರು ಆರ್ಥರ್ ಎಡಿಂಗ್‌ಟನ್.

ಸೌರರಾಶಿಯ ಸುಮಾರು 100 ಪಟ್ಟು ಹೆಚ್ಚು ದ್ರವ್ಯರಾಶಿಯ ನಕ್ಷತ್ರ ಇರಬಹುದು ಎಂದು ಅವರು ಸೂಚಿಸಿದರಾದರೂ 40ಪಟ್ಟು ದ್ರವ್ಯರಾಶಿಯ ನಕ್ಷತ್ರಗಳು ಮಾತ್ರ ಇದುವರೆಗೆ ಪತ್ತೆಯಾಗಿವೆ. ಹಾಗಾದರೆ ಅದಕ್ಕೂ ಹೆಚ್ಚು ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ಉತ್ತರ ಬಹಳ ಕಾಲ ದೊರಕಿರಲಿಲ್ಲ. ಆದರೆ ಕರೀನಾ (ದೇವನೌಕೆ) ನಕ್ಷತ್ರ ಪುಂಜದ ಈಟಾ ಎಂಬ ಗ್ರೀಕ್ ಅಕ್ಷರದ ನಮೂದಿನ ನಕ್ಷತ್ರ ಸವಾಲು ಒಡ್ಡಿತು.


ಇದು ವಾಸ್ತವದಲ್ಲಿ ನಕ್ಷತ್ರವಲ್ಲ. ಒಂದು ನೆಬ್ಯುಲಾ. ಬರಿಗಣ್ಣಿಗೆ ಕಾಣುವುದು. ತ್ರಿಶಂಕು (ಕ್ರಕ್ಸ್) ಮತ್ತು ಕಿನ್ನರ (ಸೆಂಟಾರಸ್) ಈ ಎರಡು ಪುಂಜಗಳ ನಡುವೆ ಹರಡಿರುವ ಆಕಾಶಗಂಗೆಯ ಶಾಖೆಯಲ್ಲಿ ಕಾಣುತ್ತದೆ. ಸಾಕಷ್ಟು ಪ್ರಕಾಶಮಾನವಾಗಿರುವುದರಿಂದ ಬಹಳ ಸುಲಭವಾಗಿಯೇ ಗುರುತಿಸಬಹುದು.

ಇದು ನಮಗೆ (ಕರ್ನಾಟಕಕ್ಕೆ) ಕಾಣುತ್ತದೆ. ಸ್ವಲ್ಪ ಉತ್ತರಕ್ಕೆ ಹೋದರೆ ಕಾಣುವುದಿಲ್ಲ. ಈ ಕಾರಣದಿಂದಲೋ ಏನೋ ಇದು ಐರೋಪ್ಯ ಖಗೋಳಜ್ಞರ ದಾಖಲೆಗಳಲಿಲ್ಲ. ಆದರೆ ನೌಕಾಯಾನ ಆರಂಭವಾದೊಡನೆ ದಕ್ಷಿಣ ಪುಂಜಗಳ ಅದ್ಭುತ ಲೋಕ ಅವರಿಗೆ ಅನಾವರಣವಾಯಿತು. ಸಾಮಾನ್ಯವಾಗಿ ನಾವಿಕರೆಲಾ ್ಲಖಗೋಳಜ್ಞರೂ ಆಗಿರುತ್ತಿದ್ದುದರಿಂದ ಅವರು ತಮ್ಮ ಪರಿಚಯದ ವಸ್ತಗಳನ್ನೇ ದಕ್ಷಿಣದ ಪುಂಜಗಳಿಗೆ ಹೊರೊಲೊಜಿಯಂ, ಟೆಲೆಸ್ಕೋಪಿಯಂ, ಸೆಕ್ಸ್ಟೆಂಟ್ ಹೀಗೆ ಹೆಸರಿಟ್ಟರು. ಕರೀನಾಗೆ ಮೊದಲು ಆರ್ಗಸ್ ಎಂಬ ಹೆಸರಿತ್ತು (ಹಡಗಿನ ಹೆಸರು).

ಹೀಗೆ ಭಾರತಕ್ಕೆ ಬಂದ ಅನೇಕ ಐರೋಪ್ಯರು ವಿಶೇಷವಾಗಿ ದಕ್ಷಿಣದ ಪುಂಜಗಳನ್ನು ಅಭ್ಯಸಿಸಿ ವರದಿ ಮಾಡಿದರು. ಈಟಾ ಆರ್ಗಸ್ ಇದ್ದಕ್ಕಿದ್ದಂತೆ ಪ್ರಕಾಶಮಾನವಾಗಿದ್ದು 1846ರಲ್ಲಿ. ಆಗ ಬೆಂಗಳೂರಿನ ದಂಡು ಪ್ರದೇಶದಲ್ಲಿದ್ದ ಜಾನ್ ಹರ್ಷೆಲ್ (ವಿಲಿಯಂ ಹರ್ಷೆಲ್‌ನ ಮೊಮ್ಮೊಗ) ಇದನ್ನು ವೀಕ್ಷಿಸಿದ್ದು ಇದೇ ನವೆಂಬರ್ ತಿಂಗಳಿನ 22-23- 24 ಈ ದಿನಗಳಲ್ಲಿ. ತನ್ನ ಪುಟ್ಟ ದೂರದರ್ಶಕದಿಂದ ಆತ ನೆಬ್ಯುಲಾವನ್ನು ಕಂಡು ರೇಖಾ ಚಿತ್ರ ರಚಿಸಿರುವುದು ಸಹ ವರದಿಯಲ್ಲಿದೆ. ಆತ ರಾಯಲ್ ಸೊಸೈಟಿಯ ವರದಿಗಳಲ್ಲಿ ದಾಖಲಿಸಿರುವಂತೆ ಸ್ಥಳದ ಹೆಸರು ‘ಹೈ ಗ್ರೌಂಡ್ಸ್’.

ಈಗ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯ ಇರುವ ಪ್ರದೇಶ. ಇಲ್ಲಿ 156 ವರ್ಷಗಳ ಹಿಂದೆ ಮೊದಲ ಬಾರಿಗೆ ದೂರದರ್ಶಕದ ಬಳಕೆಯಿಂದ ವೀಕ್ಷಣೆ ನಡೆಯಿತು; ಅಷ್ಟೇ ಅಲ್ಲ ಅದರ ದಾಖಲೆ ಲಭ್ಯವಿದೆ ಎಂಬುದೇ ವಿಶೇಷ.

ಅಂದು ವರದಿಯಾದ ಸ್ಫೋಟ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದಲೂ ದಾಖಲಾಯಿತು. ಅಂದಿನಿಂದ ಇಂದಿನವರೆಗೆ ಎಲ್ಲ ಖಗೋಳಜ್ಞರ ಮತ್ತು ಹವ್ಯಾಸೀ ವೀಕ್ಷಕರಿಗೆ ಪ್ರಮುಖ ಆಕರ್ಷಣೆಯಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಈಟಾ ಕರೀನಾ ಎಂಬುದು ನಾಲ್ಕಾರು ಭಾರೀ ದ್ರವ್ಯ ರಾಶಿಯ ಹೊಸ ನಕ್ಷತ್ರಗಳ ಉಗಮಸ್ಥಾನ. ಒಂದೊಂದೂ ಸೌರರಾಶಿಯ ನೂರು ಪಟ್ಟು ಇರಬಹುದು. ಆದ್ದರಿಂದಲೇ ಅದು 8000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದರೂ ಬರಿಗಣ್ಣಿಗೂ ಕಾಣುವಷ್ಟು ಪ್ರಕಾಶಮಾನವಾಗಿದೆ.

No comments:

Post a Comment