Total Pageviews

Saturday, July 30, 2011

ಮೈಮನಗಳನ್ನು ಮರಗಟ್ಟಿಸುವ ಕ್ರಯೊನಿಕ್ಸ್ ತಂತ್ರ

ಸರ್ಕಾರವನ್ನು ಜೀವಂತ ಇಡಲೆಂದು ಇಲ್ಲಿ ಏನೆಲ್ಲ ಯತ್ನ ನಡೆಯುತ್ತಿರುವಾಗ ತುಸು ಆಚಿನ ಜಗತ್ತಿನಲ್ಲಿ ಅಂಥದ್ದೇ ಯತ್ನವೊಂದು ನಡೆದಿದೆ, ನೋಡೋಣ ಬನ್ನಿ.
ಮೊನ್ನೆ ಜುಲೈ 23ರಂದು ರಾಬರ್ಟ್ ಎಟ್ಟಿಂಜರ್ ಗತಿಸಿದ. ಆತನ ಮೃತದೇಹದ ಎದೆಯ ಮೇಲೆ ವೈರು ಎಚ್ಚೆಲ್ಲಾರ್ ಯಂತ್ರವನ್ನು ಹೂಡಿಟ್ಟು ಸ್ವಿಚ್ ಹಾಕಿದರು.

ಯಂತ್ರದ ಮೆತ್ತನ್ನ ಒತ್ತುಮಣೆ ಮೇಲಕ್ಕೆ ಕೆಳಕ್ಕೆ ಚಲಿಸಿದಂತೆ ಶ್ವಾಸಕೋಶ ಕೃತಕವಾಗಿ ಉಬ್ಬುತ್ತ ಇಳಿಯುತ್ತ, ಉಸಿರಾಟ ಮತ್ತೆ ಆರಂಭವಾಯಿತು. ಹೃದಯ ಮೊದಲಿನಂತೆ ದೇಹಕ್ಕೆಲ್ಲ ರಕ್ತವನ್ನು ಪಂಪ್ ಮಾಡತೊಡಗಿತು. ರಕ್ತದೊಂದಿಗೆ ಆಮ್ಲಜನಕ ಮಿದುಳಿಗೂ ಹೋಗುತ್ತಿದ್ದುದರಿಂದ ಅದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಒಂದರ್ಥದಲ್ಲಿ ಜೀವಂತವಾಗಿಯೇ ಉಳಿಯಿತು. ಅರ್ಧಗಂಟೆಯ ನಂತರ ಇನ್ನೊಂದು ಜೋಡಿ ಕೊಳವೆಯನ್ನು ಆ ದೇಹದೊಳಕ್ಕೆ ತೂರಿಸಲಾಯಿತು. ಒಂದರ ಮೂಲಕ ಆ ದೇಹದ ರಕ್ತವನ್ನೆಲ್ಲ ಹೀರಿ ತೆಗೆಯುತ್ತ ಇನ್ನೊಂದರಲ್ಲಿ ಅದೇ ರಕ್ತನಾಳಗಳಿಗೆ ಹೆಪ್ಪುನಿರೋಧಕ ಗ್ಲಿಸರಾಲ್ ದ್ರವವನ್ನು ತುಂಬಿದರು. ಎರಡು ಗಂಟೆಗಳ ನಂತರ ಇಡೀ ದೇಹವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಅದಕ್ಕೆ ನೈಟ್ರೊಜನ್ ಅನಿಲವನ್ನು ತುಂಬಿದರು. ಮೃತದೇಹ ಕ್ರಮೇಣ ಹೆಪ್ಪುಗಟ್ಟುತ್ತ ಅದರ ತಾಪಮಾನ ಶೂನ್ಯದ ಕೆಳಗೆ 120 ಹಿಂಡಿಗ್ರಿ ಸೆಲ್ಸಿಯಸ್ ತಲುಪಿತು. ಇಡೀ ಪೆಟ್ಟಿಗೆಯನ್ನು ಅಮೆರಿಕದ ಮಿಷಿಗನ್ ಪಟ್ಟಣದ ಬಳಿಯ ದೇಹಾಗಾರಕ್ಕೆ ಒಯ್ದು, ಇನ್ನಷ್ಟು ಆಳಶೀತದ 180 ಹಿಂಡಿಗ್ರಿ ಸೆಲ್ಸಿಯಸ್ ಸಾರಜನಕ ದ್ರವದಲ್ಲಿ ಮುಳುಗಿಸಿ ಇಡಲಾಯಿತು.

ಮುಂದೆ 50, 100 ಅಥವಾ 500 ವರ್ಷಗಳ ನಂತರವೂ ಈತನ ದೇಹ ಹಾಗೆಯೇ ಇರುತ್ತದೆ. ವೈದ್ಯವಿಜ್ಞಾನ- ತಂತ್ರಜ್ಞಾನ ಇನ್ನಷ್ಟು ಮುಂದುವರೆದು, ಮೃತದೇಹಗಳಿಗೆ ಜೀವ ತುಂಬುವ ಸಾಮರ್ಥ್ಯ ಅದಕ್ಕೆ ಬಂದಾಗ ಎಟ್ಟಿಂಜರ್‌ನ ದೇಹವನ್ನು ಶೀತಲ ಪೆಟ್ಟಿಗೆಯಿಂದ ಹೊರಕ್ಕೆ ತೆಗೆದು ರಕ್ತವನ್ನು ತುಂಬಬಹುದು. ನಿದ್ದೆಯಿಂದ ಎಚ್ಚೆತ್ತಂತೆ ಎಟ್ಟಿಂಜರ್ ಮತ್ತೆ ಮೇಲೇಳಬಹುದು. ಮಾಧ್ಯಮಮಿತ್ರರ ಕ್ಯಾಮರಾಗಳತ್ತ ಕೈಬೀಸಿ...

ಮುಂದೊಂದು ದಿನ ಮತ್ತೆ ಬದುಕಿ ಬರುವ ಆಸೆಯಿಂದ ಇಂದು ಅಮೆರಿಕ, ಬ್ರಿಟನ್, ರಷ್ಯ ದೇಶಗಳಲ್ಲಿ ಅನೇಕರು ಈ ಬಗೆಯ ಶೀತಸಂಸ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಮೆರಿಕದ `ಕ್ರಯೊನಿಕ್ಸ್` ಸಂಸ್ಥೆಯ ದೇಹಾಗಾರದಲ್ಲಿ ಸುಮಾರು 70 ಕಳೇವರಗಳು ಭವಿಷ್ಯದ ಭಾಗ್ಯಕ್ಕಾಗಿ ಕಾಯುತ್ತಿವೆ. ಅವರಲ್ಲಿ ರಾಬರ್ಟ್ ಎಟ್ಟಿಂಜರ್ ಬಗ್ಗೆ ಮಾಧ್ಯಮಗಳು ವಿಶೇಷ ಆಸಕ್ತಿ ತಾಳಲು ಕಾರಣ ಏನೆಂದರೆ, ಆತನೇ ಈ ಕ್ರಯೊನಿಕ್ಸ್‌ನ ಸಂಸ್ಥಾಪಕನೂ ಮುಖ್ಯಸ್ಥನೂ ಆಗಿದ್ದ. ಮಿಷಿಗನ್ ಪ್ರಾಂತದ ಕ್ಲಿಂಟನ್ ಟೌನ್‌ಶಿಪ್ ಎಂಬಲ್ಲಿ ಸ್ಥಾಪಿಸಲಾಗಿರುವ ಶವಾಗಾರದಲ್ಲಿ ಎಟ್ಟಿಂಗರ್ ದೇಹವನ್ನು ಇದೀಗ ಮಲಗಿಸಿದ ಪೆಟ್ಟಿಗೆಯ ಪಕ್ಕದಲ್ಲೇ ಆತನ ತಾಯಿಯ ದೇಹವೂ ಇದೆ; ಮೊದಲ ಪತ್ನಿ ಹಾಗೂ ಎರಡನೆಯ ಪತ್ನಿಯ ದೇಹಗಳನ್ನೂ ಅಮಾನತಿನಲ್ಲಿ ಇಡಲಾಗಿದೆ.

ಕ್ರಯೊನಿಕ್ಸ್ (ಶೀತವಿಜ್ಞಾನ) ತುಂಬ ರೋಚಕ ಸಾಧ್ಯತೆಗಳನ್ನು ತೆರೆಯುತ್ತದೆ. ಭವಿಷ್ಯದ ಅಚ್ಚರಿಗಳ ಬಗ್ಗೆ ಊಹಾಕತೆಗಳನ್ನು ಬರೆಯುವವರಿಗೆ ಇದು ಹುಲುಸಾದ ಕ್ಷೇತ್ರವಾಗಿದೆ. ಸುಮಾರು 240 ವರ್ಷಗಳ ಹಿಂದೆ, 1773ರಲ್ಲಿ ಅಮೆರಿಕ ದೇಶದ ಸಂಸ್ಥಾಪಕರಲ್ಲೊಬ್ಬನೆಂದು ಖ್ಯಾತಿ ಪಡೆದಿದ್ದ ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ ಇಂಥದೊಂದು ಕನಸು ಕಂಡಿದ್ದ. ತನ್ನ ಕಳೇವರವನ್ನು `ಮದೈರಾ`ದಲ್ಲಿ ಮುಳುಗಿಸಿ ಇಟ್ಟರೆ ಮುಂದೊಂದು ದಿನ ವಿಜ್ಞಾನಿಗಳು ಅದನ್ನು ಹೊರತೆಗೆದು ಬಿಸಿಲಲ್ಲಿಟ್ಟು ಉಸಿರು ಕೊಡಲು ಸಾಧ್ಯವಿದೆ..` ಎಂದು ಆತ ಬರೆದಿದ್ದ. ಕಳೇವರವನ್ನು ರಕ್ಷಿಸಿ ಇಡುವ ತಂತ್ರಜ್ಞಾನ ಅಂದು ಲಭ್ಯವಿದ್ದಿದ್ದರೆ ನಾಳೆ ಫ್ರಾಂಕ್ಲಿನ್ ಎದ್ದು ಬರುವುದೇ ಅತ್ಯಮೋಘ ಸುದ್ದಿಯಾಗುತ್ತಿತ್ತು.

ಬೇರೆಯವರ ವಿಷಯ ಬಿಡಿ. ನೀವೇ 120 ವರ್ಷಗಳ ನಂತರ ಮತ್ತೆ ಬದುಕಿ ಬರುವಂತಾದರೆ ಏನೆಲ್ಲ ಥ್ರಿಲ್ ಅನುಭವಿಸಬಹುದು. ಅಷ್ಟೊತ್ತಿಗೆ ತಮ್ಮ ಮುತ್ತಜ್ಜನಿಗೇ ಮರುಜೀವದ ಮೊದಲ ಅವಕಾಶ ಬೇಕೆಂದು ಇಂದಿನ ರೆಡ್ಡಿಗಳ, ರಾಜಾಗಳ ಅಥವಾ ಅಂಥದ್ದೇ ಸೂಪರ್ ಧನಿಕ ಕ್ರೀಡಾತಾರೆಗಳ ವಂಶಸ್ಥರು ವಿಜ್ಞಾನಿಗಳ ಮೇಲೆ ಪ್ರಭಾವ ಬೀರಿದರೆ, ನಿಮ್ಮ ಮರುಜನ್ಮದ ಸರದಿ 500 ವರ್ಷಗಳ ನಂತರ ಬಂದೀತು.

ಆಗಂತೂ ಅದು ಇನ್ನೂ ಥ್ರಿಲ್ಲಿಂಗ್!
ವಿಜ್ಞಾನಿಗಳಲ್ಲಿ ಅನೇಕರು ಗಂಭೀರವಾಗಿ ಈ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಣಿಗಳ ಪ್ರಪಂಚದಲ್ಲಿ ಇಂಥ ಕೆಲವು ಉದಾಹರಣೆಗಳಿವೆ. ಕೆನಡಾದ ಒಂಟಾರಿಯೊ ಸರೋವರದ ಪಕ್ಕದಲ್ಲಿ ವಾಸಿಸುವ ಮರಗಪ್ಪೆ ಚಳಿಗಾಲದಲ್ಲಿ ಪೂರ್ತಿ ಹೆಪ್ಪುಗಟ್ಟಿ ಕಲ್ಲಿನಂತಾಗುತ್ತದೆ. ವಸಂತಕಾಲ ಬಂದಾಗ ಅದರ ದೇಹದಲ್ಲಿ ಹೆಪ್ಪುಗಟ್ಟಿದ್ದ ರಕ್ತವೆಲ್ಲ ಕರಗಿದಾಗ ಹೃದಯ ಮತ್ತೆ ಮಿಡಿಯತೊಡಗುತ್ತದೆ. ಕೆಲವೇ ಗಂಟೆಗಳಲ್ಲಿ ಕಪ್ಪೆ ಮತ್ತೆ ಕುಪ್ಪಳಿಸುತ್ತದೆ. ಟಾರ್ಡಿಗ್ರೇಡ್ ಹೆಸರಿನ ಸಾಗರತಳದ ಜೀವಿಯೊಂದು ನೂರು ವರ್ಷಗಳ ನಂತರವೂ ಜೀವತಳೆದು ಬರುತ್ತದೆ. ಪ್ರಕೃತಿಯಲ್ಲಷ್ಟೇ ಅಲ್ಲ, ಲ್ಯಾಬಿನ ದ್ರವಸಾರಜನಕದಲ್ಲಿ ಅದೆಷ್ಟೊ ಜೀವಿಗಳನ್ನು ಅದ್ದಿಟ್ಟರೂ ವರ್ಷಗಳ ಮೇಲೆ ಮತ್ತೆ ಜೀವತಳೆಯುತ್ತವೆ. ಹಿಮಸರೋವರಗಳಲ್ಲಿ ಮುಳುಗಿ ಸತ್ತವರಿಗೆ ಮತ್ತೆ ಜೀವ ಬರಿಸಿದ ಅದೆಷ್ಟೊ ಉದಾಹರಣೆಗಳಿವೆ. ಮನುಷ್ಯರಲ್ಲೂ ಅಂಗಾಂಗ ಕಸಿಗಾಗಿ ಬೇರೊಬ್ಬರ ದೇಹಭಾಗವನ್ನು ಹೆಪ್ಪುಗಟ್ಟಿಸಿ ದೂರದಿಂದ ತಂದು ಯಶಸ್ವಿಯಾಗಿ ಜೋಡಣೆ ಮಾಡಲಾಗುತ್ತದೆ. ವೀರ್ಯಾಣು, ಅಂಡಾಣುಗಳ ಬ್ಯಾಂಕ್‌ಗಳು ತಲೆಯೆತ್ತಿವೆ. ಪ್ರನಾಳ ಶಿಶುಗಳ ಸೃಷ್ಟಿಗೆಂದು ವೀರ್ಯಾಣು ಮತ್ತು ಅಂಡಾಣುವನ್ನು ಗಾಜಿನ ಬಟ್ಟಲಲ್ಲಿ ಮಿಲನ ಮಾಡಿಸುತ್ತಾರಷ್ಟೆ? ಅವು ಯುಗ್ಮಕಣವಾಗಿ ಬೆಸೆದುಕೊಂಡಾಗ ಫ್ರಿಜ್‌ನಲ್ಲಿ ಹೆಪ್ಪುಗಟ್ಟಿಸಿ ಇಟ್ಟು ಸೂಕ್ತ ಸಮಯದಲ್ಲಿ ಮತ್ತೆ ಹೆಣ್ಣಿಗೆ ಗರ್ಭಾಧಾನ ಮಾಡುತ್ತಾರೆ. ಈ ವ್ಯವಸ್ಥೆ ಬೆಂಗಳೂರಿನಲ್ಲೇ ಕೆಲವು ಆಸ್ಪತ್ರೆಗಳಲ್ಲೂ ಇದೆ.

ಅಂದಮೇಲೆ ತಡವೇಕೆ, `ನನಗೂ ಅಂಥದ್ದೆೀ ಶೀತಸಂಸ್ಕಾರ ಬೇಕು, ವಿಳಾಸ ಕೊಡಿ` ಎಂದು ಫೋನ್ ಎತ್ತಬೇಡಿ. ಇದು ತುಂಬಾ ಖರ್ಚಿನ ವಿಷಯ. ಶವವನ್ನು ಪೆಟ್ಟಿಗೆಗೆ ಸೇರಿಸುವ ಮೊದಲು 20-30 ಸಾವಿರ ಡಾಲರ್ ಕೊಡಬೇಕು. ನಂತರವೂ ಪ್ರತಿವರ್ಷ ನಿರ್ವಹಣಾ ವೆಚ್ಚವೆಂದು 300 ಡಾಲರ್ ಕೊಡುತ್ತಿರಬೇಕು- ಅನಿರ್ದಿಷ್ಟ ಕಾಲ. ಹಾಗೆಂದು ನಿರಾಶೆಪಡುವ ಅಗತ್ಯವೂ ಇಲ್ಲ. ಇಡೀ ದೇಹವನ್ನು ರಕ್ಷಿಸಿ ಇಡುವ ಬದಲು ಕೇವಲ ಮಿದುಳನ್ನಷ್ಟೇ ಶೀತದ್ರವದಲ್ಲಿ ಇಡುವ, ಕಡಿಮೆ ವೆಚ್ಚದ ವ್ಯವಸ್ಥೆಯೂ ಇದೆ. ರಷ್ಯದ ಕ್ರಯೊರುಸ್ ಸಂಸ್ಥೆ ಈ ವ್ಯವಸ್ಥೆಗೇ ಆದ್ಯತೆ ನೀಡುತ್ತದೆ. ಗತಿಸಿದವರ ಮಿದುಳನ್ನು ಮಾತ್ರ ಪುಟ್ಟ ಶೀತಕೋಶದಲ್ಲಿ ಇಟ್ಟು, ದೇಹದ ಉಳಿದ ಭಾಗವನ್ನು ಸಂಪ್ರದಾಯದಂತೆ ದಫನ ಮಾಡಬಹುದು. ಹಣದ ಉಳಿತಾಯದೊಂದಿಗೆ ಇದರಲ್ಲಿ ಅನೇಕ ಇತರ ಲಾಭಗಳೂ ಇವೆ. ಈಗಿನ ದೇಹ ಹೇಗೂ ಮುದಿಯಾಗಿದೆ. ಅದಕ್ಕೆ ಭವಿಷ್ಯದಲ್ಲಿ ಮತ್ತೆ ಜೀವಂತ ಬರಿಸಿದರೂ ಹೀರೋ/ಯಿನ್ ಆಗಲು ಸಾಧ್ಯವಿಲ್ಲ.

ವೃದ್ಧಾಪ್ಯ ಹಾಗೇ ಉಳಿದಿರುತ್ತದೆ. ಅದರ ಬದಲು ಮಿದುಳನ್ನು ಮಾತ್ರ ಕಾದಿರಿಸಿದರೆ ಮುಂದೆ ಅದರಲ್ಲಿನ ನರಕೋಶಗಳನ್ನೇ ಯುವ ದೇಹಕ್ಕೊ, ಜೈವಿಕ ಕಂಪ್ಯೂಟರ್‌ಗೊ ಅಥವಾ ಬಯೊನಿಕ್ಸ್ ದೇಹಕ್ಕೊ ಜೋಡಿಸಿದರೆ, ಇಂದಿನ ಜ್ಞಾನ, ನೆನಪು, ಭಾವನೆಗಳೆಲ್ಲ ಆಗಲೂ ಇರುತ್ತದೆಂಬುದು ಇವರ ವಾದ. ಹೊಸ ಶರೀರ, ಹಳೇ ಬುದ್ಧಿ ಇದ್ದರೆ ಕೇಳುವುದೇನು, ಪಕ್ಷಾಂತರಿ ರಾಜಕಾರಣಿಯಂತೆ ಲಾಭವೇ ಲಾಭ.

ಸತ್ತವರು ಮುಂದೆಂದೊ ಮತ್ತೆ ಬದುಕಿ ಬರುವಂತೆ ಮಾಡಲು ಭವಿಷ್ಯದಲ್ಲಿ ಸಾಧ್ಯವಿದೆ ಎಂದು ವಿಜ್ಞಾನದ ವಿವಿಧ ಶಾಖೆಗಳಿಗೆ ಸೇರಿದ 61 ತಜ್ಞರು ಒಟ್ಟಾಗಿ ಹೇಳಿಕೆ ನೀಡಿದ್ದಾರೆ ನಿಜ. ಆದರೆ ಹೀಗೆ ಮಾಡುವುದನ್ನು ನೈತಿಕ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ವಿರೋಧಿಸುವವರೂ ಇದ್ದಾರೆ. ಅದು ವಿಕಾಸಧಾರೆಯನ್ನು ಹಿಮ್ಮಗ ತಿರುಗಿಸಿದ ಹಾಗೆ ಆಗುವುದರಿಂದ ನಿಸರ್ಗವಿರೋಧಿ ಕೃತ್ಯವೆಂತಲೂ ಹೇಳುವವರಿದ್ದಾರೆ. ಇನ್ನು ಇಂದಿನ ಮಿದುಳನ್ನು ಮುಂದೊಂದು ದಿನ ಬೇರೊಂದು ದೇಹದಲ್ಲಿಟ್ಟು ಚೇತರಿಕೆ ಕೊಡುವ ಬಗ್ಗೆ ವಿಜ್ಞಾನಿಗಳಲ್ಲೂ ವಿಶ್ವಾಸವಿಲ್ಲ. ತನ್ನ ಸ್ವಂತದ್ದೇ ದೇಹದಲ್ಲಿ ಶೂನ್ಯಸ್ಥಿತಿಯಲ್ಲಿರುವ ಅರುಣಾ ಶಾನಭಾಗಳ ಮಿದುಳಿಗೆ ಚೇತರಿಕೆ ಕೊಡುವುದೂ ಇಂದಿನ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಅದಕ್ಕೆ ಹಣದ ಕೊರತೆಯೇ ಕಾರಣವೆಂದು ಹೇಳುವುದಾದರೆ ಮುಂದೆಯೂ ಆ ವಾತಾವರಣ ಬದಲಾಗಲಿಕ್ಕಿಲ್ಲ. ಶೀತದ್ರವದಲ್ಲಿ ತೇಲುತ್ತಿರುವ ಯಾವುದೋ ಒಂದೆರಡು ಹೆಣಗಳಿಗೆ ಕೇವಲ ಕುತೂಹಲಕ್ಕೆಂದು ವಿಜ್ಞಾನಿಗಳು ಜೀವ ಬರಿಸಬಹುದು. ಮುತ್ತಜ್ಜನನ್ನು ಬದುಕಿಸಲು ಯಾವ ಮರಿಮಗ ಕೋಟಿಗಟ್ಟಲೆ ಡಾಲರ್ ಕೊಡುತ್ತಾನೆ?

ಇದೇ ಕಾರಣಕ್ಕೇ ಇರಬೇಕು, ಇದುವರೆಗೆ ಯಾವುದೇ ದೊಡ್ಡ ಜೀವಿಯನ್ನು ಹಾಗಿರಲಿ, ಒಂದು ಓತಿಕ್ಯಾತವನ್ನೂ ಕೊಂದು ಬದುಕಿಸಿದ ಉದಾಹರಣೆ ಇಲ್ಲ. ಆ ನಿಟ್ಟಿನಲ್ಲಿ ಸಂಶೋಧನೆಗೆ ಹತ್ತಾರು ವಿವಿಧ ಶಾಖೆಗಳ ಪರಿಣತರು ಬೇಕಾಗುತ್ತದೆ.

ಸರ್ಕಾರವಾಗಲೀ ಔಷಧ ಕಂಪನಿಯಾಗಲೀ ಹಣ ತೊಡಗಿಸುತ್ತಿಲ್ಲ. ಅಮೆರಿಕದ ನಾಸಾ ಸಂಸ್ಥೆ ಸಂಶೋಧನೆ ನಡೆಸಿದ್ದರೂ ಅದು ಅನ್ಯಗ್ರಹಕ್ಕೆ ಹೊರಡುವವರಿಗಾಗಿ ವಿನಾ ಇದೇ ಗ್ರಹದಲ್ಲಿ ಠಿಕಾಣಿ ಹೂಡುವವರಿಗೆ ಅಲ್ಲ. ಮೇಲಾಗಿ ಎಟ್ಟಿಂಜರ್‌ನಂಥ 92ರ ಹಿರಿಯರನ್ನು ಮತ್ತೆ ಬದುಕಿಸಿದರೆ ಅಲ್ಪಕಾಲದಲ್ಲೇ ಆತ ಈ ಪೆಟ್ಟಿಗೆಯಿಂದ ಇನ್ನೊಂದು ಪೆಟ್ಟಿಗೆಗೆ ರವಾನೆಯಾಗಬಹುದು. ಸಮಾಜಕ್ಕೇನು ಲಾಭ? ಇನ್ನು ಶವರಕ್ಷಣೆಗೆಂದು ಕ್ರಯೊನಿಕ್ಸ್‌ನಂಥ ಮೂರು ನಾಲ್ಕು ಕಂಪೆನಿಗಳಿಗೆ ನೀಡುವ ಹಣವೆಲ್ಲ ಶೀತಕಗಳ ಹಾಗೂ ಸಿಬ್ಬಂದಿಯ ಉಸ್ತುವಾರಿಗೇ ವೆಚ್ಚವಾಗುತ್ತಿದೆ.

ಆದರೂ ಭವಿಷ್ಯದ ಬಗ್ಗೆ ಆಶಾವಾದಿಗಳಾದವರು ಎಟ್ಟಿಂಜರ್ ಹಿಂದೆ ಹೊರಟಿದ್ದಾರೆ. ಇದುವರೆಗೆ ಸುಮಾರು ಇನ್ನೂರು ದೇಹಗಳನ್ನು ಶೀತಲೀಕರಿಸಿ ಇಡಲಾಗಿದ್ದು, ಇನ್ನು ಏಳೆಂಟು ನೂರು ಜನ ತಮ್ಮನ್ನೂ ಹೆಪ್ಪುಗಟ್ಟಿಸಿ ಇಡಬೇಕೆಂದು ಉಯಿಲು ಬರೆದು ಹಣವನ್ನು ಮೀಸಲಿಟ್ಟಿದ್ದಾರೆ. ವೀರ್ಯಬ್ಯಾಂಕ್‌ಗಳಂತೆ (ಆದರೆ ತದ್ವಿರುದ್ಧ ಉದ್ದೆೀಶದ) ಇದೂ ಒಂದು ಬಿಸಿನೆಸ್ ಆಗುತ್ತಿದೆ. ನಿಮಗೆ ಹಣದ ಸಮಸ್ಯೆಯೆ?

ವಿಮೆ ಮಾಡಿಸಿದರೆ ಪಾಲಿಸಿಯೇ ಎಲ್ಲ ವೆಚ್ಚವನ್ನೂ ನೋಡಿಕೊಳ್ಳುತ್ತದೆ ಎಂದು ಅಲ್ಕೋರ್ ಸಂಸ್ಥೆ ವಾದಿಸುತ್ತದೆ (ಹೆಚ್ಚಿನ ವಿವರಗಳು ಅಮೆರಿಕದ ಚ್ಝ್ಚಟ್ಟ.ಟ್ಟಜ ಅಥವಾ ರಷ್ಯದ ಝ್ಟೇಜಿಟ್ಟ್ಠ.್ಟ್ಠ ವೆಬ್‌ಸೈಟ್‌ಗಳಲ್ಲಿವೆ; ಯೂ ಟ್ಯೂಬ್‌ನಲ್ಲಿ ಸಾಕಷ್ಟು ಸಾಕ್ಷ್ಯಚಿತ್ರಗಳಿವೆ). ವಿಶ್ವಾಸಾರ್ಹ ಬ್ಯಾಂಕಿನಲ್ಲಿ ನಿಮ್ಮ ಹೆಸರಿನಲ್ಲಿ ಅಲ್ಪ ಮೊತ್ತದ ಹಣ ಜಮಾ ಇದ್ದರೂ ಬಡ್ಡಿಗೆ ಬಡ್ಡಿ ಸೇರಿ ದೊಡ್ಡ ಮೊತ್ತವೇ ಆಗುತ್ತದೆ. ಬೆಂಜಮಿನ್ ಫ್ರಾಂಕ್ಲಿನ್ ಇನ್ನೂರು ವರ್ಷಗಳ ಮುದ್ದತು ಇಟ್ಟು ಸಾವಿರ ಡಾಲರ್ ಇಟ್ಟಿದ್ದು ಈಚೆಗೆ ಅದು ಐವತ್ತು ಲಕ್ಷ ಡಾಲರ್ ಆಗಿತ್ತು -ಮಧ್ಯೆ ಮಧ್ಯೆ ಕೆಲವು ಪಾಲನ್ನು ಸಮಾಜ ಕಲ್ಯಾಣಕ್ಕೆ ಬಳಸಿದ ನಂತರವೂ. ಹಣದ ವಿಚಾರದಲ್ಲಿ ಅದೆಲ್ಲ ಹೌದು. ಆದರೂ ವಿವಿಧ ಮಾಧ್ಯಮಗಳಲ್ಲಿನ ಪ್ರಚಾರ ವೈಖರಿ ನೋಡಿದರೆ ಇದು ಶೀತವಿಜ್ಞಾನವೊ ಅಥವಾ ಪೀತವಿಜ್ಞಾನವೊ ಎಂಬ ಸಂಶಯ ಬರುವಂತಿದೆ.

ಅಲ್ಲವೆ ಮತ್ತೆ? ಭವಿಷ್ಯವನ್ನು ನೋಡಲೆಬೇಕೆಂಬ ಆಸೆ ಇದ್ದರೆ ಇನ್ನೂ ಉತ್ತಮ ಮಾರ್ಗವಿದೆ. ವೃದ್ಧಾಪ್ಯವೆಂಬ ಕಾಯಿಲೆಯೇ ಬಾರದಂತೆ ತಡೆದರೆ ಸಾಕಲ್ಲ? ಆ ವಿಧಾನಗಳ ಬಗ್ಗೆ ವಿಜ್ಞಾನಿಗಳು ತುರುಸಿನ ಸಂಶೋಧನೆ ನಡೆಸುತ್ತಿದ್ದಾರೆ. ಅದರ ಭವಿಷ್ಯ ಆಶಾದಾಯಕವಾಗಿದ್ದು ಮುಂದೊಮ್ಮೆ ಅದನ್ನು ಚರ್ಚಿಸೋಣ. ಅದುವರೆಗೆ ರಸ್ತೆ ವಿಭಜಕಗಳಿಂದ, ಗಣಿಸ್ಫೋಟಗಳಿಂದ ಹಾಗೂ ಆಸ್ಪತ್ರೆಗಳಿಂದ ದೂರ

No comments:

Post a Comment