ವಿಜ್ಞಾನ ವಿಶೇಷ
ವಿದ್ಯುತ್ ಅಭಾವ; ರಾಜಕೀಯ ಇಚ್ಛಾಶಕ್ತಿಯ ಅಭಾವ
ಆಸ್ಟ್ರೇಲಿಯಾ ಮೂರು ವರ್ಷಗಳ ಹಿಂದೆಯೇ ಬುರುಡೆ ಬಲ್ಬ್‌ಗಳಿಗೆ ನಿಷೇಧ ಹಾಕಿದೆ. ಈಗ ಅನೇಕ ದೇಶಗಳು ಅಂಥ ಬಲ್ಬ್‌ಗಳ ಉತ್ಪಾದನೆಯನ್ನೇ ನಿಲ್ಲಿಸಿವೆ. ಅಮೆರಿಕದಲ್ಲಿ 2007ರಲ್ಲಿ ಹಳೇ ಬಲ್ಬ್ ಬದಲಿಸುವ ಒಂದು ಕ್ರಾಂತಿಯೇ ನಡೆದು ಹೋಯಿತು.
ದಸರಾ ಸ್ವಾಗತಕ್ಕೆ ನಮ್ಮಲ್ಲಿ ಸಿದ್ಧತೆ ನಡೆಯುತ್ತಿದ್ದ ಹಾಗೆ ತಮಿಳುನಾಡಿನಲ್ಲಿ ವಿಭಿನ್ನ ದೀಪೋತ್ಸವಕ್ಕೆ ಸಿದ್ಧತೆ ನಡೆದಿದೆ.
ಅಲ್ಲಿನ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಹಳೇ ಮಾದರಿಯ ಬುರುಡೆ ಬಲ್ಬ್‌ಗಳನ್ನು ತೆಗೆದು ಹೊಸ ‘ಸಿಎಫ್‌ಎಲ್’ಗಳನ್ನು ಹಾಕಬೇಕೆಂದು ನಿರ್ಣಯಿಸಲಾಗಿದೆ.
ಸರ್ಕಾರಿ ಕಚೇರಿಗಳಲ್ಲಷ್ಟೇ ಅಲ್ಲ, ಸರ್ಕಾರಿ ಅನುದಾನ ಪಡೆಯುವ ಸಹಕಾರಿ ಸಂಘಗಳು, ಮುನಿಸಿಪಲ್ ಮತ್ತು ಪಂಚಾಯತಗಳಂಥ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲೂ ಸಿಎಫ್‌ಎಲ್‌ಗಳನ್ನು ಕಡ್ಡಾಯ ಮಾಡಲಾಗಿದೆ.
ಹೀಗೆ ನಾಲ್ಕು ಕೋಟಿ ಬಲ್ಬ್‌ಗಳನ್ನು ಬದಲಿಸುವುದರಿಂದ ಅಲ್ಲಿ ಒಟ್ಟು 1840 ಮೆಗಾವಾಟ್ ವಿದ್ಯುತ್ ಉಳಿತಾಯ ಸಾಧ್ಯವಾಗುತ್ತದೆಂದು ಹೇಳಲಾಗಿದೆ.
ಅದು ಭಾರಿ ಮೊತ್ತದ ಉಳಿತಾಯವೇ ಸರಿ. ಹೋಲಿಕೆಗೆ ಹೇಳುವುದಾದರೆ ನಮ್ಮ ಶರಾವತಿ ನದಿಯ (ಅದು ಈಗ ನದಿಯಾಗಿ ಉಳಿದಿಲ್ಲ, ಆ ಮಾತು ಬೇರೆ) ಎಲ್ಲ ಜನರೇಟರ್‌ಗಳಿಂದ ಉತ್ಪಾದನೆಯಾಗುವ ಒಟ್ಟೂ ವಿದ್ಯುತ್ ಶಕ್ತಿಯ ಮೊತ್ತ 1490 ಮೆಗಾವಾಟ್ ಅಷ್ಟೆ.
ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ಸರ್ಕಾರಿ ಆಜ್ಞೆಯ ಮೂಲಕ ತಮಿಳುನಾಡಿನವರು ಉಳಿತಾಯ ಮಾಡಿದಂತಾಯಿತು.
‘ಒಂದು ಯುನಿಟ್ ಶಕ್ತಿಯನ್ನು ಉಳಿಸಿದರೆ ಒಂದು ಯುನಿಟ್ ಉತ್ಪಾದಿಸಿದಂತೆ’ ಎಂಬ ಮಾತನ್ನು ನೆನಪಿಸಿಕೊಂಡರೆ ಅಲ್ಲಿನವರು ಯಾವ ನಿಸರ್ಗ ಸಂಪತ್ತನ್ನೂ ಮುಳುಗಿಸದೆ, ಯಾವ ನತದೃಷ್ಟರನ್ನೂ ಎತ್ತಂಗಡಿ ಮಾಡದೆ ಅಷ್ಟೊಂದು ವಿದ್ಯುತ್ ಶಕ್ತಿಯನ್ನು ಬಳಕೆಗೆ ತಂದಂತಾಯಿತು.
ಒಟ್ಟಾರೆ ಭೂಮಿಗೆ ಉಪಕಾರವನ್ನು ಮಾಡಿದಂತಾಯಿತು.ಉಪಕಾರ ಹೇಗೆಂದರೆ, ಮಾಮೂಲು ಬುರುಡೆ ಬಲ್ಬ್‌ಗಳಲ್ಲಿ ವಿದ್ಯುತ್ ಹರಿದಾಗ ಅದರ ಶೇಕಡಾ 95 ಪಾಲು ಶಾಖದ ರೂಪದಲ್ಲಿ ವ್ಯಯವಾಗುತ್ತದೆ.
ಅದು ಪಳೆಯುಳಿಕೆ ಇಂಧನದಿಂದ ಬಂದ ವಿದ್ಯುತ್ತಾಗಿದ್ದರೆ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ವಾತಾವರಣಕ್ಕೆ ಸೇರಿಸಿ ಭೂಮಿಯ ತಾಪಮಾನ ಹೆಚ್ಚಳವಾಗಲು ಕಾರಣವಾಗುತ್ತದೆ. ಅದರ ಬದಲಿಗೆ ಸಿಎಫ್‌ಎಲ್ -ಅಂದರೆ ಕಾಂಪಾಕ್ಟ್ ಫ್ಲೂರೋಸೆಂಟ್ ಲ್ಯಾಂಪ್‌ಗಳನ್ನು ಬಳಸಿದರೆ ಶಕ್ತಿಯ ಅಷ್ಟೊಂದು ಅಪವ್ಯಯವಾಗುವುದಿಲ್ಲ.
ಬುರುಡೆ ಬಲ್ಬ್‌ನ ಮೂರರಲ್ಲೊಂದು ಪಾಲು ವಿದ್ಯುತ್ ಶಕ್ತಿಯನ್ನು ಹೀರಿಕೊಂಡು ಸಿಎಫ್‌ಎಲ್ ಅಷ್ಟೇ ಬೆಳಕನ್ನು ನೀಡುತ್ತದೆ. ಅಂಥ ಲ್ಯಾಂಪ್‌ಗಳ ತಾಳಿಕೆಯೂ ಬುರುಡೆ ಬಲ್ಬ್‌ಗಳಿಗಿಂತ ಹತ್ತು ಪಟ್ಟು ಜಾಸ್ತಿಯೇ ಇರುತ್ತದೆ.
ಒಂದು ಬುರುಡೆ ಬಲ್ಬ್ ಬದಲು ಒಂದು ಸಿಎಫ್‌ಎಲ್ ಉರಿಸಿದರೆ ಸರಾಸರಿ 454 ಕಿಲೊಗ್ರಾಮ್ ಕಾರ್ಬನ್ ಡೈಆಕ್ಸೈಡ್ ಅನಿಲ ವಾತಾವರಣಕ್ಕೆ ಸೇರುವುದನ್ನು ತಡೆಗಟ್ಟಬಹುದು ಎಂದು ಶಕ್ತಿತಜ್ಞರು ಹೇಳುತ್ತಾರೆ.
ಆಸ್ಟ್ರೇಲಿಯಾ ಮೂರು ವರ್ಷಗಳ ಹಿಂದೆಯೇ ಬುರುಡೆ ಬಲ್ಬ್‌ಗಳಿಗೆ ನಿಷೇಧ ಹಾಕಿದೆ. ಈಗ ಅನೇಕ ದೇಶಗಳು ಅಂಥ ಬಲ್ಬ್‌ಗಳ ಉತ್ಪಾದನೆಯನ್ನೇ ನಿಲ್ಲಿಸಿವೆ. ಅಮೆರಿಕದಲ್ಲಿ 2007ರಲ್ಲಿ ಹಳೇ ಬಲ್ಬ್ ಬದಲಿಸುವ ಒಂದು ಕ್ರಾಂತಿಯೇ ನಡೆದು ಹೋಯಿತು.
ಒಂದು ಬಲ್ಬ್ ಬದಲಿಸಲು ಹದಿನೆಂಟು ಸೆಕೆಂಡ್ ಸಾಕಾಗಿರುವುದರಿಂದ ’18 ಸೆಕೆಂಡ್ ಚಳವಳಿ’ ಎಂಬ ಹೆಸರಿನೊಂದಿಗೆ ಸರ್ಕಾರಿ ಇಲಾಖೆಗಳು, ವಾಣಿಜ್ಯ-ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು, ಮೇಯರ್‌ಗಳ ಸಂಘ, ಧಾರ್ಮಿಕ ಸಂಸ್ಥೆಗಳು, ಸಿನೆಮಾರಂಗ ಎಲ್ಲವೂ ಕೈಜೋಡಿಸಿ ಒಕ್ಕೊರಲಿನ ಪ್ರಚಾರ ನೀಡಿದ್ದರಿಂದ ಒಂದು ನಿಗದಿತ ಅವಧಿಯಲ್ಲಿ ಬಲ್ಬ್‌ಗಳೆಲ್ಲ ಬದಲಾದವು.
ಯಾವ ಪ್ರಚಾರಕ್ಕೂ ಕಿವಿಗೊಡದ ಗುಗ್ಗುಗಳಿಗೂ ಸರ್ಕಾರ ಆಮಿಷ ಒಡ್ಡಿತ್ತು: ಐದು ಬುರುಡೆ ಬಲ್ಬ್‌ಗಳನ್ನು ಕಳಚಿ ತಂದು ಕೊಟ್ಟವರಿಗೆ ಹೊಸ ಒಂದು ಸಿಎಫ್‌ಎಲ್ ನೀಡುವ ವ್ಯವಸ್ಥೆ ಮಾಡಿತ್ತು. ಇಷ್ಟಕ್ಕೂ ಅಲ್ಲಿನವರಿಗೆ ವಿದ್ಯುತ್ತಿನ ಅಭಾವವೇನೂ ಇರಲಿಲ್ಲ. ಆದರೂ ಬಿಸಿಯಾಗುತ್ತಿರುವ ಭೂಮಿಗೆ ತುಸು ತಂಪು ನೀಡಲೆಂದು ಹಮ್ಮಿಕೊಂಡ ಜನಾಂದೋಲನ ಅದಾಗಿತ್ತು.
ಹೇಗೋ ಈ ಸರಳ ತಾಂತ್ರಿಕ ಕ್ರಾಂತಿ ನಮ್ಮನ್ನು ತಟ್ಟಲೇ ಇಲ್ಲ. ವಿದ್ಯುತ್ ಅಭಾವದ ತುರ್ತು ಸಂಕಟ ಬಂದಾಗಲೆಲ್ಲ ಅಧಿಕಾರದಲ್ಲಿರುವ ನೇತಾ ಮಂದಿ ಪಕ್ಕದ ಈ ರಾಜ್ಯಕ್ಕೋ ದೂರದ ಆ ರಾಜ್ಯಕ್ಕೋ ದೌಡಾಯಿಸಿ ತುರ್ತು ಎರವಲು ತರಲು ಯತ್ನಿಸುತ್ತಾರೆಯೇ ವಿನಾ ಶಕ್ತಿ ಉಳಿತಾಯದತ್ತ ಜನರನ್ನು ಪ್ರೇರೇಪಿಸುವ ಯಾವ ಕೆಲಸವನ್ನೂ ಮಾಡುತ್ತಿಲ್ಲ.
ಸಿಎಫ್‌ಎಲ್ ಬಳಕೆಯನ್ನು ಕೊಂಡಾಡುವ ಇಲ್ಲವೇ ಪ್ರೋತ್ಸಾಹಿಸುವ ಒಂದಾದರೂ ಜಾಹೀರಾತನ್ನು ರೇಡಿಯೊ ಅಥವಾ ಟಿವಿ ಅಥವಾ ಪತ್ರಿಕೆಗಳಲ್ಲಿ ನಾವು ನೋಡಿದ್ದೇವೆಯೆ? ಸೂಕ್ತ ಮಾಹಿತಿ ನೀಡಿದರೆ ಸಿಎಫ್‌ಎಲ್‌ಗಿಂತ ಇನ್ನೂ ಜಾಸ್ತಿ ದಕ್ಷತೆಯುಳ್ಳ, ಇನ್ನೂ ದುಬಾರಿಯ ಎಲ್‌ಇಡಿ (ಲೈಟ್ ಎಮಿಟಿಂಗ್ ಡಯೋಡ್) ಲ್ಯಾಂಪ್‌ಗಳನ್ನೂ ಜನರು ಕೊಳ್ಳುತ್ತಾರೆ.
ಅಂಥ ಏನಾದರೂ ಕಾಳಜಿ ಇದ್ದಿದ್ದರೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮದ್ಯ ಹಂಚುವ ಬದಲು ಸಿಎಫ್‌ಎಲ್ ಅಥವಾ ಎಲ್‌ಇಡಿ ದೀಪಗಳನ್ನೇ ಉಚಿತ ವಿತರಣೆ ಮಾಡಬಹುದಿತ್ತು. ಹಾಗೇನಾದರೂ ಮಾಡಿದ್ದಿದ್ದರೆ ಒಂದು ಅಕ್ರಮ ಕೆಲಸದ ಮೂಲಕವೂ ಜನಕಲ್ಯಾಣ ಮತ್ತು ಲೋಕಕಲ್ಯಾಣದ ಕೆಲಸ ನಡೆದುಹೋಗುತ್ತಿತ್ತು.
ಆದರೆ ಕತ್ತಲಿನ ವ್ಯವಹಾರದಲ್ಲೇ ಭರವಸೆ ಇದ್ದವರಿಗೆ ಬೆಳಕು ಬೀರುವ ದೀಪದ ಕಡೆ ಗಮನ ಯಾಕೆ ಹೋದೀತು?
ವಿದ್ಯುತ್ತಿನ ತೀವ್ರ ಅಭಾವವಿದ್ದಾಗಲೇ ಜನಪರವಾದ ಬದಲೀ ತಂತ್ರಜ್ಞಾನವನ್ನು ಜಾರಿಗೆ ತರುವ ಕೆಲಸ ಸುಲಭವಾಗುತ್ತದೆ. ಆದರೆ ನಮ್ಮಲ್ಲಿ ಅಂಥ ಅವಕಾಶವನ್ನೂ ಜನವಿರೋಧಿ ಬೃಹತ್ ಯೋಜನೆಗಳ ಸ್ವಾಗತಕ್ಕೆಂದೇ ಬಳಸಿಕೊಳ್ಳಲಾಗುತ್ತದೆ.
ಗುಂಡ್ಯ ಜಲವಿದ್ಯುತ್ ಯೋಜನೆಯಿರಲಿ, ಸೂಪರ್ ಥರ್ಮಲ್, ಅಲ್ಟ್ರಾ ಥರ್ಮಲ್ ಇರಲಿ, ಪರಮಾಣು ಸ್ಥಾವರಗಳೇ ಇರಲಿ, ಪ್ರತಿಭಟನೆಗಳ ಇಕ್ಕಟ್ಟಿನಲ್ಲಿ ಬರಬೇಕಾದ ಯೋಜನೆಗಳು ರಾಜಮಾರ್ಗದಲ್ಲೇ ಸಾಗಿ ಬರುವಂತಾಗುತ್ತವೆ.
ಕೃತಕವೊ ಅಸಲಿಯೊ, ಅಂತೂ ಪದೇ ಪದೇ ಪವರ್ ಕಟ್‌ನಿಂದ ರೋಸಿ ಹೋಗಿರುವ ಬಹುಪಾಲು ಜನಸ್ತೋಮ ಅದೆಂಥ ಜನಮಾರಕ ಯೋಜನೆಯನ್ನೂ ಸ್ವಾಗತಿಸುವಂತಾಗುತ್ತದೆ.
ಹಾಗೆ ನೋಡಿದರೆ ನಮ್ಮಲ್ಲಿ ಬದಲೀ ಜನಪರ ಶಕ್ತಿಮೂಲಗಳಿಗೆ ಅಭಾವವೇನೂ ಇಲ್ಲ. ಅಂಥ ಹತ್ತಾರು ಪ್ರಸ್ತಾವನೆಗಳು ಎಲ್ಲೋ ಕಡತಗಳಲ್ಲಿ ಹೂತು ಕೂತಿವೆ. ಅಭಾವವೇನಿದ್ದರೂ ರಾಜಕೀಯ ಇಚ್ಛಾಶಕ್ತಿಯದೇ. ಸರ್ಕಾರದ್ದೇ ಅಂದಾಜಿನ ಪ್ರಕಾರ ಪ್ರತಿ ವರ್ಷವೂ ಸಾವಿರ ಮೆಗಾವಾಟ್‌ನಷ್ಟು ವಿದ್ಯುತ್ ಶಕ್ತಿಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯಲು ಸಾಧ್ಯವಿದೆ.
ಗಾಳಿಶಕ್ತಿಯಿಂದ ಸದ್ಯಕ್ಕೆ 1383 ಮೆಗಾವಾಟ್ ಸ್ಥಾಪಿತ ಸಾಮರ್ಥ್ಯವಿದೆ. ಅದನ್ನು ಹತ್ತು ಪಟ್ಟು ಹೆಚ್ಚಿಸಲು ಸಾಧ್ಯವಿದೆ. ಹದಿನೇಳು ಸಕ್ಕರೆ ಕಾರ್ಖಾನೆಗಳು ತ್ಯಾಜ್ಯ ಶಾಖದಿಂದ 535 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ಇನ್ನೂ 37 ಕಾರ್ಖಾನೆಗಳ ಮನವೊಲಿಸಬೇಕಿದೆ. ಸೌರಶಕ್ತಿಗಂತೂ ಆಕಾಶವಿದ್ದಷ್ಟೂ ಅವಕಾಶವಿದೆ. ಆದರೆ ಸೌರ ವಿದ್ಯುತ್‌ಗೆ ಕೆಪಿಸಿಯ ಕೊಡುಗೆ ಇದುವರೆಗೆ ಕೇವಲ ಮೂರು ಮೆಗಾವಾಟ್ ಅಷ್ಟೆ.
ಮಾತೆತ್ತಿದರೆ ನಮ್ಮಲ್ಲಿ ‘ಸೌರಶಕ್ತಿಯ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ, ಪರಿಣತರು ಲಭ್ಯವಿಲ್ಲ’ ಎಂದೆಲ್ಲ ನೆಪಗಳು ಕೇಳಬರುತ್ತವೆ. ಆದ್ಯತೆ ನೀಡಿದರೆ ತಾನೆ ಅವೆಲ್ಲ ಲಭ್ಯವಾಗುವುದು? ಕೆಪಿಸಿಗೆ ಮೂವತ್ತು ವರ್ಷಗಳ ಹಿಂದೆ ನೇಮಕಗೊಂಡ ಎಂಜಿನಿಯರ್‌ಗಳು ಈಗಲೂ ಹಳೇಕಾಲದ ಯಂತ್ರಯುಗದಲ್ಲೇ ಇದ್ದಾರೆ.
ಅವರು ನಿಭಾಯಿಸುವ ಟರ್ಬೈನ್‌ಗಳೂ ಅಷ್ಟೇ ಹಳೇ ಕಾಲದವಾಗಿವೆ. ಅವರ ಆಸಕ್ತಿಗಳೆಲ್ಲ ಹಳೇ ಕಾಲದ ಅದೇ ಹೈಡೆಲ್, ಅದೇ ಥರ್ಮಲ್ ಯಂತ್ರಗಳ ಉಸ್ತುವಾರಿಗೆ ಮಲೆತು ನಿಂತಿವೆ.
ನಿರ್ಣಾಯಕ ಅಧಿಕಾರವೆಲ್ಲ ಅವರ ಮುಷ್ಟಿಯಲ್ಲಿದೆಯೇ ವಿನಾ ಹೊಸ ಪೀಳಿಗೆಯ ಎಂಜಿನಿಯರ್‌ಗಳಿಗೆ ಯಾವ ಆದ್ಯತೆಯೂ ಇಲ್ಲ.
ಇನ್ನು ನಾಳಿನ ಪೀಳಿಗೆಯ ಪ್ರತಿಭಾವಂತರನ್ನು ಗುರುತಿಸುವ, ಅವರಿಗೆ ಸ್ಕಾಲರ್‌ಶಿಪ್ ಕೊಟ್ಟು ಓದಿಸಿ ಮುಂಗಡ ಬುಕಿಂಗ್ ಮಾಡಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ದೂರದರ್ಶಿತ್ವದ ಯೋಜನೆಗಳಂತೂ ದೂರದ ಮಾತು.
ಅಂಥ ಯುವ ಎಂಜಿನಿಯರ್‌ಗಳೇ ಇಂದು ಸುಧಾರಿತ ದೇಶಗಳ ಅಸಲೀ ಚಾಲನಶಕ್ತಿಯಾಗಿದ್ದಾರೆ. ಬಿಸಿಲಿನ ಶಕ್ತಿಯಿಂದ 250-300 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಕ್ಯಾಲಿಫೋರ್ನಿಯಾದಲ್ಲ ಇದೀಗ ಸಾವಿರ ಮೆಗಾವಾಟ್ ಗುರಿಯೊಂದಿಗೆ ಕೆಲಸ ಆರಂಭವಾಗಿದೆ.
ಅದು ನಮಗೆ ಪರಿಚಿತವಿರುವ ಸೌರ ಫಲಕವೂ ಅಲ್ಲ. ಅಲ್ಲಿ ಸಿಲಿಕಾನ್ ಬಿಲ್ಲೆಗಳ ಬದಲು ಬಾಣಲೆಯಂಥ ಸಾಲು ಸಾಲು ಸಂಗ್ರಾಹಕಗಳಲ್ಲಿ ಬಿಸಿಲನ್ನು ಶೇಖರಿಸಿ, ಅದರ ಶಾಖದಿಂದ ಉಗಿ ಹೊಮ್ಮುವಂತೆ ಮಾಡಿ, ಚಕ್ರ ತಿರುಗಿಸಿ ವಿದ್ಯುತ್ ಶಕ್ತಿಯನ್ನು ಪಡೆಯುತ್ತಾರೆ.
ಸಿಲಿಕಾನ್ ಬಿಲ್ಲೆಗಳಿಗೂ ಈಗ ನ್ಯಾನೊ ತಂತ್ರಜ್ಞಾನದ ಮಾಯಾಸ್ಪರ್ಶ ಸಿಕ್ಕಿದೆ. ಅವುಗಳ ದಕ್ಷತೆ ಹೆಚ್ಚಿದೆ. ಬಿಸಿಲೇ ಅಪರೂಪವೆನಿಸಿದ ಜರ್ಮನಿ, ಸ್ವೀಡನ್‌ಗಳಲ್ಲಿ ಮನೆಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಸೇರಿಸಲು ಅನುವು ಮಾಡಿಕೊಡಲಾಗುತ್ತಿದೆ.
ಇದೀಗ ಚೀನಾ ಪ್ರವಾಸ ಮುಗಿಸಿ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಲಹೆಗಾರರಿಗೆ ಗೊತ್ತಾಗಿರಬೇಕು, ಅಮೆರಿಕವನ್ನೂ ಹಿಂದಿಕ್ಕಿ ಚೀನಾ ದೇಶ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೇರಿದೆ.
ದೊಡ್ಡ ಪ್ರಮಾಣದ ಸೌರಶಕ್ತಿ ಸ್ಥಾವರ, ಗಾಳಿಶಕ್ತಿಯ ಕಂಬಸಾಲು ಇವನ್ನೆಲ್ಲ ಬಿಡಿ, ಹೂಡಿಕೆದಾರರು ಇಂದಲ್ಲ ನಾಳೆ ಹಣ ತೊಡಗಿಸಿ, ದೊಡ್ಡ ಪ್ರಮಾಣದಲ್ಲೇ ವಿದ್ಯುತ್ ಉತ್ಪಾದನೆಗೆ ತೊಡಗಬಹುದು.
‘ಜವಾಹರಲಾಲ್ ನೆಹರೂ ರಾಷ್ಟ್ರೀಯ ಸೌರಯೋಜನೆ’ ಅಡಿಯಲ್ಲಿ ಚೀನಾದಿಂದ ಸೌರಘಟಕಗಳನ್ನು ತಂದು ಸ್ಥಾಪಿಸಬಹುದು. ಅದು ಈಗಿನ ಗ್ರಿಡ್ ಜಾಲಕ್ಕೆ ಸೇರ್ಪಡೆಯಾಗಿ ಯಾವುದೋ ನಗರದ ಥಳುಕಿನ ಮಾಲ್‌ಗೊ ಅನುಕೂಲಸ್ಥರ ಉದ್ಯಮ ಘಟಕಕ್ಕೊ ಸೇರುತ್ತದೆ; ಅದರಲ್ಲೂ ಶೇಕಡಾ 30ರಷ್ಟು ತಂತಿಯಲ್ಲೇ ಸೋರುತ್ತದೆ.
ರಾಜ್ಯದ ಜನ ಸಾಮಾನ್ಯರ ಬದುಕಿನ ಬಗ್ಗೆ ನಿಜವಾದ ಕಳಕಳಿ ಇದ್ದವರು ಹಳ್ಳಿಗಳಲ್ಲಿ ‘ಗ್ರಿಡ್‌ಮುಕ್ತ’ ವಿದ್ಯುತ್ತಿನ ವ್ಯವಸ್ಥೆ ಮಾಡಬೇಕು. ಗ್ರಾಮಗಳಲ್ಲೇ ಸಿಗುವ ಕೃಷಿ ತ್ಯಾಜ್ಯ, ಜೈವಿಕ ಇಂಧನ, ನೀರಿನ ಝರಿ, ಬಿಸಿಲು, ಬೀಸುಗಾಳಿಯಂಥ ಶಕ್ತಿಮೂಲಗಳನ್ನು ದುಡಿಸಿಕೊಂಡು ಸ್ಥಳೀಯ ಮಟ್ಟದಲ್ಲೇ ಚಿಕ್ಕ, ಕಿಲೊವಾಟ್ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ.
ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಜೈವಿಕ ಇಂಧನ ಕಾರ್ಯಪಡೆಯನ್ನು ಬಿಟ್ಟರೆ ಇತರ ಶಕ್ತಿಮೂಲಗಳನ್ನು ದುಡಿಸಿಕೊಳ್ಳುವ ಕೆಲಸವೆಲ್ಲ ನಿತ್ರಾಣ ಸ್ಥಿತಿಯಲ್ಲಿವೆ.
ನಮ್ಮ ದೇಶದ ಬಹುತೇಕ ಎಲ್ಲ ಯೋಜನೆಗಳ ಹಕೀಕತ್ತು ಏನೆಂದರೆ ಅವು ಹಳ್ಳಿಗಳನ್ನು ಹಿಂದಕ್ಕಟ್ಟಿ ನಗರಗಳನ್ನು ಮುನ್ನಡೆಸುವ ನಿಟ್ಟಿನಲ್ಲೇ ಸಾಗುತ್ತವೆ. ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ, ಶೈತ್ಯಾಗಾರಗಳಿಗೆ, ಗೃಹ ಕೈಗಾರಿಕೆಗಳಿಗೆ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲದೆ ಜನ ರೋಸಿದ್ದಾರೆ.
ಆರೋಗ್ಯ ಕೇಂದ್ರಗಳ ಶೀತಲ ಪೆಟ್ಟಿಗೆಗಳಲ್ಲಿಟ್ಟ ಲಸಿಕೆಗಳು ಹಾಳಾಗಿ, ಔಷಧಗಳೂ ವಿಷವಾಗುತ್ತಿವೆ. ಗ್ರಾಮ ಮಟ್ಟದಲ್ಲೇ ವಿದ್ಯುತ್ ಉತ್ಪಾದಿಸಬಲ್ಲ ತಂತ್ರಜ್ಞಾನಕ್ಕೆ ಉತ್ತಮ ಮಾದರಿಗಳನ್ನು ಹುಡುಕಲೆಂದು ನಾವು ಬ್ರಝಿಲ್‌ಗೋ ಚೀನಾಕ್ಕೋ ಹೋಗಬೇಕಾಗಿಲ್ಲ.
ನಾಗಾಲ್ಯಾಂಡ್‌ನಲ್ಲಿ ಬಿದಿರಿನ ಒಣ ಬೊಂಬು ಮತ್ತು ಕಸಕಡ್ಡಿಗಳಿಂದಲೇ ಮೂರು ನಾಲ್ಕು ಹಳ್ಳಿಗಳಿಗೆ ಸಾಲುವಷ್ಟು ವಿದ್ಯುತ್ ಶಕ್ತಿಯನ್ನು ಪಡೆಯಲಾಗುತ್ತಿದೆ. ಪುಣೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಕರಗಿಸಿ ಇಂಧನ ತೈಲವನ್ನು ಉತ್ಪಾದಿಸುವ ಕೆಲಸ ಆರಂಭವಾಗಿದೆ.
ವಿದ್ಯುತ್ ಉಳಿಸಬಲ್ಲ ನಾನಾ ಬಗೆಯ ಎಲ್‌ಇಡಿ ದೀಪಗಳನ್ನು ಉತ್ಪಾದಿಸಿದ ಬೆಂಗಳೂರಿನ ಯುವಕರು ಅವನ್ನು ಹಳ್ಳಿಗಳಿಗೆ ತಲುಪಿಸಲೆಂದು ವಿಧಾನಸೌಧಕ್ಕೆ ವರ್ಷವಿಡೀ ಅಲೆದು ಕೈಚೆಲ್ಲಿ ಕೂತಿದ್ದಾರೆ. ಕೇಳಿದರೆ, ‘ಕರ್ನಾಟಕ ವರ್ಸ್ಟ್ ಸರ್, ಸರ್ಕಾರದ ಸಹವಾಸಾನೇ ಬೇಡ’ ಎನ್ನುತ್ತಾರೆ.
ವಿಧಾನಸೌಧದಲ್ಲಿ ‘ಪವರ್’ ವ್ಯಾಖ್ಯೆ ಬೇರೆಯೇ ಇದೆ. ಅದು ಜನರನ್ನು ತಲುಪುವ ಪವರ್ ಆಗಲು ಇನ್ನೆಷ್ಟು ವರ್ಷ ಬೇಕೊ.
No comments:
Post a Comment