Total Pageviews

Saturday, October 2, 2010

ಕೊರತೆ ದುಡ್ಡಿನದಲ್ಲ, ಮಾನವೀಯತೆಯದ್ದು



ಇದಕ್ಕಿಂತ ಸಂಪೂರ್ಣ ಭಿನ್ನವಾದ ಇನ್ನೊಂದು ಲೋಕವೂ ಇದೇ ರಾಜ್ಯದಲ್ಲಿದೆ. ತಲಮಾರಿಯ ಶೆಡ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೈತಪ್ಪಿ ಕೆಳಗೆ ಬಿದ್ದ ಅನ್ನದ ಅಗುಳುಗಳನ್ನು ಮಣ್ಣಿನಿಂದ ಒಂದೊಂದಾಗಿ ಆರಿಸಿ ತಟ್ಟೆಗೆ ಸುರಿದುಕೊಳ್ಳುತ್ತಿದ್ದರು.


ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಿಂದಲೋ, ವಿಧಾನಸೌಧದ ಕಾರಿಡಾರ್‌ನಿಂದಲೋ ಯಾರಾದರೂ ನೇರವಾಗಿ ಹಾರಿ ರಾಯಚೂರಿನ ತಲಮಾರಿಗೋ,ಮಾಲ್ಕಪುರಕ್ಕೋ ಹೋಗಿ ಇಳಿದರೆ ಯಾವುದೋ ಬೇರೆ ಗ್ರಹ ಪ್ರವೇಶ ಮಾಡಿಬಿಟ್ಟೆವೇನೋ ಎಂಬ ಅನುಮಾನ ಹುಟ್ಟಿಕೊಂಡರೆ ಅಚ್ಚರಿಯೇನಿಲ್ಲ. ಕಣ್ಣು ಕುಕ್ಕುವ ಶೋರೂಮ್‌ಗಳು, ಮಬ್ಬುಗತ್ತಲಿನ ಬಾರ್-ಪಬ್ಬುಗಳು, ಥಳುಕುಬಳುಕಿನ ಗಂಡು-ಹೆಣ್ಣು ಜೋಡಿಗಳು, ಸಂಪುಟ ವಿಸ್ತರಣೆಯ ಸಂಕಟಗಳು, ಸಚಿವರ ಆತ್ಮಹತ್ಯೆ ಬೆದರಿಕೆಗಳು, ಸಚಿವರಾಗಲು ಹೊರಟವರ ಆಕ್ರಂದನ -ಆಕ್ರೋಶಗಳು, ಅವರ ಅಭಿಮಾನಿಗಳ ಉರುಳುಸೇವೆಗಳು, ಅನ್ನದ ಬದಲಿಗೆ ಭೂಮಿಯನ್ನೇ ನುಂಗುತ್ತಿರುವವರ ಹಾವಳಿಗಳು.....ಇವೆಲ್ಲ ಒಂದು ಲೋಕ.

ಇದಕ್ಕಿಂತ ಸಂಪೂರ್ಣ ಭಿನ್ನವಾದ ಇನ್ನೊಂದು ಲೋಕವೂ ಇದೇ ರಾಜ್ಯದಲ್ಲಿದೆ. ತಲಮಾರಿಯ ಶೆಡ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೈತಪ್ಪಿ ಕೆಳಗೆ ಬಿದ್ದ ಅನ್ನದ ಅಗುಳುಗಳನ್ನು ಮಣ್ಣಿನಿಂದ ಒಂದೊಂದಾಗಿ ಆರಿಸಿ ತಟ್ಟೆಗೆ ಸುರಿದುಕೊಳ್ಳುತ್ತಿದ್ದರು. ಇದನ್ನು ತಕ್ಷಣ ಶೂಟ್ ಮಾಡಲು ಮುನ್ನುಗ್ಗಿದ ರಾಯಚೂರಿನ ನಮ್ಮ ಪೋಟೋಗ್ರಾಫರ್ ಶ್ರೀನಿವಾಸ ಇನಾಮ್‌ದಾರ್ ಯಾಕೋ ಮನಸ್ಸಾಗದೆ ಕೈಸೋತವರಂತೆ ಕ್ಯಾಮೆರಾ ಕೆಳಗಿಳಿಸಿದರು. ಕೊಳಕು ನೀರು ಕುಡಿದು ಮೈಯೆಲ್ಲ ಕಜ್ಜಿ ಎದ್ದ ಮಗನ ಬಟ್ಟೆ ಬಿಚ್ಚಿ ತೋರಿಸುತ್ತಿದ್ದ ಮಾಲ್ಕಪುರದ ಮಹಿಳೆಯೊಬ್ಬರು ‘ನಮ್ ಮೈಮೇಲೂ ಅದೇರಿ..’ಎಂದಾಕ್ಷಣ ನಾನು ಮುಖ ತಿರುಗಿಸಿ ಹೊರಟುಬಂದಿದ್ದೆ. ‘ಉಣ್ಣೋದೇ ಬೇಡ ಅನಿಸಿಬಿಟ್ಟಿದೆ, ಉಂಡ್‌ಮೇಲೆ ಸಂಡಾಸ್‌ಗೆ ಹೋಗಲು ಕತ್ತಲಾಗೋ ವರೆಗೆ ಕಾಯ್‌ಬೇಕಲ್ಲಾ’ ಎಂದು ಬಿಸಿನಾಳಕೊಪ್ಪದ ಮಹಿಳೆಯೊಬ್ಬರು ಹೆಣ್ಣಿನ ಸಹಜ ಮುಜುಗರವನ್ನೂ ಬಿಟ್ಟು ಹೇಳಿಕೊಂಡಿದ್ದರು..... ಒಂದಿಷ್ಟು ಮನುಷ್ಯತ್ವ ಉಳಿಸಿಕೊಂಡಿರುವ ಯಾವುದೇ ವ್ಯಕ್ತಿಯ ಮನಸ್ಸು ಕಲಕುವ ದೃಶ್ಯಗಳು ಇವು. ಈ ಪರಿಸ್ಥಿತಿ ಇನ್ನೂ ಹಸಿಹಸಿಯಾಗಿರುವಾಗಲೇ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಹಿರಿಯ ಅಧಿಕಾರಿಗಳು ಈ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರಲ್ಲಿ ಯಾರ ಮನಸ್ಸನ್ನು ಇದು ಕಲಕದೆ ಹೋಯಿತೇ? ಕಲಕಿದ್ದರೆ ಹೀಗೇಕಾಗಿದೆ?

ಇವು ಒಂದೆರಡು ಕುಟುಂಬಗಳ ಕತೆ ಅಲ್ಲ, ಕೇಳುವ, ನೋಡುವ ಮನಸ್ಸಿದ್ದರೆ ಕಳೆದ ವರ್ಷ ಅತಿವೃಷ್ಟಿಗೀಡಾದ ಹದಿನಾಲ್ಕು ಜಿಲ್ಲೆಗಳಲ್ಲಿ ಇಂತಹ ಏಳು ಲಕ್ಷ ಕತೆಗಳಿವೆ. (ಸರ್ಕಾರವೇ ಲೆಕ್ಕ ಹಾಕಿರುವ ಪ್ರಕಾರ ನೆರೆಹಾವಳಿಯಿಂದಾಗಿ ಕಷ್ಟ-ನಷ್ಟಕ್ಕೆಡಾದ ಕುಟುಂಬಗಳ ಸಂಖ್ಯೆ ಏಳು ಲಕ್ಷ) ಇವರಲ್ಲಿ ಯಾರಿಗೂ ಹೊಸಮನೆಯ ಆಸರೆ ಸಿಕ್ಕಿಲ್ಲ, ಹಳೆಮನೆಗಳು ದುರಸ್ತಿಯಾಗಿಲ್ಲ. ಎಲ್ಲರೂ ಕುಸಿದುಬಿದ್ದ ಮನೆಗಳಲ್ಲಿ ಇಲ್ಲವೇ ಸರ್ಕಾರ ಕಟ್ಟಿಕೊಟ್ಟ ಕೊಟ್ಟಿಗೆಯಂತಹ ಶೆಡ್‌ಗಳಲ್ಲಿ ದಿನ ದೂಡುತ್ತಿದ್ದಾರೆ. ಈ ನಡುವೆ ಮತ್ತೆ ಮಳೆ ಹುಯ್ಯತ್ತಿದೆ. ಇದು ಬಡತನದ ಕ್ರೌರ್ಯ. ರಾಜಕೀಯದ ಕ್ರೌರ್ಯದ ಬಗ್ಗೆ ಸಚಿವ ಪದವಿ ವಂಚಿತರೊಬ್ಬರು ಅಲವತ್ತುಕೊಳ್ಳುತ್ತಿದ್ದರು. ಅವರಿಗಾಗಲಿ,ಅವರಿಗಾಗಿ ಕಣ್ಣೀರು ಸುರಿಸುತ್ತಿರುವವರಿಗಾಗಲಿ ಇದೆಲ್ಲ ಅರ್ಥವಾಗಲಾರದು.


ಕಳೆದ ವರ್ಷ ಮಳೆ ಸುರಿಯಲಾರಂಭಿಸಿ ಮನೆಗಳು ಮುಳುಗಲಾರಂಭಿಸಿದ ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೊದಲು ಕೇಂದ್ರ ಸರ್ಕಾರದ ಜತೆಯಲ್ಲಿ ಜಗಳಕ್ಕೆ ನಿಂತದ್ದು ದುಡ್ಡಿಗಾಗಿ. ಅದರ ನಂತರ ಡಬ್ಬಿಹಿಡಿದುಕೊಂಡು ಜನರ ಬಳಿ ಹೋದರು, ಉದ್ಯಮಿಗಳನ್ನು ಬೇಡಿಕೊಂಡರು. ಇವರಲ್ಲಿ ಯಾರೂ ಇಲ್ಲ ಅನ್ನಲಿಲ್ಲ. ಶಕ್ತಿ ಮೀರಿ ಕೊಟ್ಟರು, ನಿರೀಕ್ಷೆ ಮೀರಿ ದೇಣಿಗೆ ಹರಿದುಬಂತು. ಸರ್ಕಾರ ಹಣಕ್ಕಾಗಿ ಗೋಗರೆಯುತ್ತಿರುವುದನ್ನು ನೋಡಿದಾಗ ಪರಿಹಾರ ಕಾರ್ಯಕ್ಕೆ ಹಣದ ಕೊರತೆಯೇ ಅಡ್ಡಿಯಾಗಿದೆಯೇನೋ ಎಂಬ ಸಾಮಾನ್ಯ ಭಾವನೆ ಜನರಲ್ಲಿ ಮೂಡಿತ್ತುಈಗಂತೂ ಹಣದ ಕೊರತೆ ಇಲ್ಲ, ಸರ್ಕಾರ ಕೂಡಾ ಇದನ್ನು ಹೇಳುತ್ತಿಲ್ಲ. ಹೀಗಿದ್ದರೂ ಸಂತ್ರಸ್ತರು ನೆಲೆ ಇಲ್ಲದೆ ಯಾಕೆ ನರಳಾಡುತ್ತಿದ್ದಾರೆ?

ಸಂತ್ರಸ್ತರಿಗಾಗಿ ನಿರ್ಮಾಣಗೊಳ್ಳುತ್ತಿರುವ 41,948 ಮನೆಗಳಲ್ಲಿ ಮುಕ್ಕಾಲು ಪಾಲು ಮನೆಗಳನ್ನು ಕಟ್ಟುತ್ತಿರುವವರು ದಾನಿಗಳು. ಅವುಗಳಿಗೆ ಬೇಕಾದ ಜಮೀನನ್ನಷ್ಟೇ ಸರ್ಕಾರ ನೀಡಿದೆ. ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಶೆಡ್‌ಗಳಿಗೆ ಬೇಕಾದ ತಗಡುಶೀಟುಗಳಿಂದ ಹಿಡಿದು ಸಂತ್ರಸ್ತರಿಗೆ ಬೇಕಾದ ಆಹಾರ, ಬಟ್ಟೆಬರೆ, ಪಾತ್ರೆಪಗಡದವರೆಗೆ ಎಲ್ಲವನ್ನೂ ನೀಡಿದ್ದು ರಾಜ್ಯದ ಅನಾಮಧೇಯ ದಾನಿಗಳು. ನಿಜ ಸಂಗತಿ ಏನೆಂದರೆ ಹಣದ ಕೊರತೆ ಒಂದು ವರ್ಷದ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಕೊರತೆ ಮಾನವೀಯತೆ ಮತ್ತು ದೂರದೃಷ್ಟಿಯದ್ದು.

ಭಾರತದಂತಹ ದೇಶದಲ್ಲಿ ಲಿಂಗಸೂಕ್ಷ್ಮತೆ ಮತ್ತು ಜಾತಿ-ವರ್ಗ ಸೂಕ್ಷ್ಮತೆಯ ಅರಿವಿಲ್ಲದೆ ರೂಪಿಸುವ ಯೋಜನೆಗಳು ಸಫಲವಾಗುವುದು ಕಷ್ಟ. ರಾಜ್ಯ ಸರ್ಕಾರದ ನೆರೆಸಂತ್ರಸ್ತರ ಪುನರ್ವಸತಿ ಯೋಜನೆಯಲ್ಲಿಯೂ ಈ ಲೋಪಗಳೂ ಆಗಿವೆ. ಇದಕ್ಕೆ ಉತ್ತಮ ಉದಾಹರಣೆ-ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್‌ಗಳು. ಸರ್ಕಾರ ಸಂವೇದನಾಶೀಲವಾಗಿದ್ದರೆ, ಸ್ವಲ್ಪ ಮಾನವೀಯವಾಗಿ ಯೋಚಿಸಿದ್ದರೆ ಮನೆ ನಿರ್ಮಿಸುವಾಗಲೇ ಅದಕ್ಕೊಂದು ಸ್ನಾನದ ಮನೆ, ಹತ್ತು ಮನೆಗಳಿಗೊಂದಾದರೂ ಶೌಚಾಲಯ ಕಟ್ಟಬಹುದಿತ್ತು.. ಇದಕ್ಕಾಗಿ ಕೋಟಿ ರೂಪಾಯಿ ಖರ್ಚಾಗುತ್ತಿರಲಿಲ್ಲ.

ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಬಲಿಯಾಗಿರುವವರು ನೆರೆಹಾವಳಿ ಪ್ರದೇಶದ ಮಹಿಳೆಯರು. ‘ಅವರು ಮೊದಲು ಕೂಡಾ ಬಯಲಿಗೆ ಹೋಗ್ತಿದ್ದರು, ಒಂದಷ್ಟು ದಿನ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಬಿಡಿ ’ ಎಂದು ಅಧಿಕಾರಿಗಳು ಉಡಾಫೆಯಾಗಿ ಮಾತನಾಡುತ್ತಾರೆ. ‘ಒಂದಷ್ಟು ದಿನ ಮರ್ಯಾದೆ ಬಿಟ್ಟು ಬದುಕಲಿಕ್ಕೆ ಆಗುತ್ತದ್ದೇನ್ರಿ’ ಎಂದು ಮಹಿಳೆಯರು ಕೇಳುತ್ತಾರೆ. ಆ ‘ಒಂದಷ್ಟು ದಿನಗಳ’ ಅವಧಿ ಕೂಡಾ ಈಗ ವರ್ಷವಾಗುತ್ತಿದೆ.

ಸಂತ್ರಸ್ತರಾದವರಲ್ಲಿ ಹೆಚ್ಚಿನ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು.ಹಳ್ಳಿಗಳಲ್ಲಿ ಸಾಮಾನ್ಯವಾಗಿ ಊರ ಮಧ್ಯಭಾಗದಲ್ಲಿ ಸ್ವಲ್ಪ ಎತ್ತರ ಪ್ರದೇಶದಲ್ಲಿ ಮೇಲ್ಜಾತಿ ಜನ ಮನೆಕಟ್ಟಿಕೊಂಡಿದ್ದರೆ, ಊರಿನಿಂದ ಹೊರಗೆ ತಗ್ಗುಪ್ರದೇಶದಲ್ಲಿ ಈ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಿರುತ್ತವೆ. ಇದರಿಂದಾಗಿ ನೆರೆಹಾವಳಿಯಿಂದ ನೆಲಸಮವಾಗಿರುವ ಹೆಚ್ಚಿನ ಮನೆಗಳು ದಲಿತ ಮತ್ತು ಕೆಳಜಾತಿಗಳ ಕುಟುಂಬಗಳದ್ದು.ಪರಿಹಾರ ವಿತರಣೆ ಮತ್ತು ಹೊಸ ಮನೆಗಳ ಹಂಚಿಕೆಯಲ್ಲಿಯೂ ಹೆಚ್ಚಿನ ಅನ್ಯಾಯವಾಗಿರುವುದು ದಲಿತ ಕುಟುಂಬಗಳಿಗೆ.ದಲಿತ ಕುಟುಂಬಗಳ ಜತೆಯಲ್ಲಿ ವಾಸಿಸಲು ಮೇಲ್ಜಾತಿ ಜನ ನಿರಾಕರಿಸಿದ ಕಾರಣಕ್ಕಾಗಿಯೇ ಹಲವಾರು ಕಡೆಗಳಲ್ಲಿ ನಿವೇಶನಗಳ ಆಯ್ಕೆ ಮತ್ತು ಮನೆ ನಿರ್ಮಾಣ ವಿಳಂಬವಾಗಿವೆ.

ಜಮೀನು ಹೊಂದಿರುವ ಮೇಲ್ಜಾತಿ ಜನರದ್ದು ಇನ್ನೊಂದು ಬಗೆಯ ಗೋಳು. ಇವರ ಮನೆ ಹಳೆಯದ್ದಾಗಿರಬಹುದು, ಆದರೆ ಅವುಗಳು ಕೊಟ್ಟಿಗೆ, ಅಂಗಳ, ಬಣವೆ, ತಿಪ್ಪೆಗುಂಡಿ ಎಲ್ಲವನ್ನೂ ಒಳಗೊಂಡಿದ್ದ ವಿಶಾಲ ಮನೆ.ಗುಡಿಸಲು ಇದ್ದವರೇ ಇರಲಿ, ಹೊಲಮನೆ ಇದ್ದವರೇ ಇರಲಿ, ಎಲ್ಲರಿಗೂ 300 ಚದರ ಅಡಿಯ ಮನೆಗಳನ್ನು ಸರ್ಕಾರ ನಿರ್ಮಿಸುತ್ತಿದೆ. ಆ ಮನೆಗಳಲ್ಲಿ ರೈತರು ಹೇಗೆ ಬಾಳ್ವೆ ಮಾಡಲು ಸಾಧ್ಯ? ರೈತರ ಮೇಲೆ ಆಣೆ ಇಟ್ಟು ಅಧಿಕಾರಕ್ಕೆ ಬಂದವರಿಗೆ ಕನಿಷ್ಠ ರೈತರ ಬದುಕಿನ ಪರಿಚಯವಾದರೂ ಬೇಡವೇ?

ವಿಧಾನಸೌಧದಲ್ಲಿಯೇ ಸರ್ಕಾರ ಇಲ್ಲ ಎನ್ನುವವರಿದ್ದಾರೆ. ನೆರೆಹಾವಳಿಗೀಡಾದ ಬಳ್ಳಾರಿ, ರಾಯಚೂರು, ಬಾಗಲಕೋಟೆ,ಗದಗ ಜಿಲ್ಲೆಗಳ 35 ಊರುಗಳಲ್ಲಿ ಒಂದು ವಾರ ಕಾಲ ಸುಮಾರು 1200 ಕಿ.ಮೀ. ಸುತ್ತಿದ ನನಗೆ ಒಂದೇ ಒಂದು ಕಡೆ ಸರ್ಕಾರ ಇದೆ ಎನ್ನುವ ಸುಳಿವು ಸಿಗಲಿಲ್ಲ. ತಹಶೀಲ್ದಾರಗಳು ಬಿಡಿ, ಕನಿಷ್ಠ ಒಬ್ಬ ಜಿಲ್ಲಾ ಪಂಚಾಯತ್ ಎಂಜಿನಿಯರ್ ಇಲ್ಲವೇ ಗ್ರಾಮಲೆಕ್ಕಿಗನಾದರೂ ಕಣ್ಣಿಗೆ ಬೀಳುವುದು ಬೇಡವೇ? ಮನೆಗಳನ್ನು ಖಾಸಗಿಯವರು ನಿರ್ಮಿಸಿದರೂ ಅದರ ಗುಣಮಟ್ಟದ ಮೇಲ್ವಿಚಾರಣೆ ಸರ್ಕಾರದ್ದೇ ಆಗಿದೆ. ಇದಕ್ಕಾಗಿಯೇ ಪ್ರತಿಯೊಬ್ಬ ಜಿಲ್ಲಾಧಿಕಾರಿಗಳು ನವಗ್ರಾಮ ನಿರ್ಮಾಣವಾಗುತ್ತಿರುವ ಕಡೆಗಳಲ್ಲಿ ಜಿಲ್ಲಾ ಪಂಚಾಯತ್ ಎಂಜಿನಿಯರ್‌ಗಳನ್ನು ಮೇಲುಸ್ತುವಾರಿಗೆ ನೇಮಿಸಿದ್ದಾರೆ.

ದಾನಿಗಳು ಮನೆ ನಿರ್ಮಾಣದ ಹೊಣೆಯನ್ನು ಯಾವುದೋ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. ಅವರು ಹಾಕಿದ್ದೇ ಪಾಯ, ಕಟ್ಟಿದ್ದೇ ಗೋಡೆ. ಹೇಳುವವರಿಲ್ಲ, ಕೇಳುವವರಿಲ್ಲ. ಸರ್ಕಾರದ ಪಾಲಿನ ಮನೆಗಳ ನಿರ್ಮಾಣವನ್ನು ಹೆಚ್ಚಿನ ಕಡೆ ಭೂ ಸೇನಾ ನಿಗಮಕ್ಕೆ ವಹಿಸಲಾಗಿದೆ. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಾಗಿ ಕುಖ್ಯಾತಿ ಪಡೆದಿರುವ ಈ ನಿಗಮದ ಬಗ್ಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂಬ ಖ್ಯಾತಿಯ ಎಸ್.ಎಂ.ಜಾಮದಾರ್ ಅವರಿಗೆ ಯಾಕೋ ಇನ್ನಿಲ್ಲದ ಪ್ರೀತಿ.ಇದನ್ನೆಲ್ಲ ಸಂತ್ರಸ್ತರು ಅಸಹಾಯಕರಾಗಿ ನೋಡುತ್ತಿದ್ದಾರೆ. ಇದಕ್ಕಾಗಿಯೇ ಅವರು ‘ಸತ್ರೆ ಇಲ್ಲೇ ಸಾಯ್ತೆವಿ, ಅಲ್ಲಿ ಹೋಗಿ ಯಾಕೆ ಸಾಯ್ಬೆಕು? ಎಂದು ಕೇಳುತ್ತಿರುವುದು.

ಪರಿಹಾರ ಹಂಚಿಕೆಯಲ್ಲಿ, ಮನೆಗಳ ನಿರ್ಮಾಣದಲ್ಲಿ, ಭೂಮಿ ಖರೀದಿಯಲ್ಲಿ ಅಕ್ರಮಗಳಾಗಿರುವ ದೂರು ವ್ಯಾಪಕವಾಗಿವೆ.ಇದರ ಅರ್ಥ ಅಕ್ರಮದ ಹಣವೆಲ್ಲ ಮುಖ್ಯಮಂತ್ರಿಗಳು ಇಲ್ಲವೇ ಸಚಿವರ ಖಾತೆಗೆ ಜಮೆ ಆಗಿದೆ ಎಂದಲ್ಲ. ಕೆಳಹಂತಗಳಲ್ಲಿಯೇ ಹೆಚ್ಚಿನ ಅಕ್ರಮಗಳು ನಡೆದಿರುವುದು. ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಹುದ್ದೆಗಳನ್ನು ಪಡೆದುಕೊಂಡಿರುವುದು ‘ಪೇಮೆಂಟ್ ಸೀಟು’ಗಳ ಮೂಲಕವೇ. ಆದ್ದರಿಂದ ಅವರ ಮೇಲೆ ಯಾರಿಗೂ ನಿಯಂತ್ರಣ ಇಲ್ಲ.ಹೂಡಿರುವ ಬಂಡವಾಳದ ವಸೂಲಿಗೆ ನಿಂತಿರುವ ಅವರಿಗೆ ನೆರೆ ಬಂದರೇನು, ಬರ ಬಿದ್ದರೇನು. ಎಲ್ಲವನ್ನೂ ತಮ್ಮ ಅನುಕೂಲಕ್ಕಾಗಿ ಪರಿವರ್ತಿಸಲು ಅವರಿಗೆ ಗೊತ್ತು. ‘ಒಳ್ಳೆಯ ಬರಗಾಲ ಎಂದರೆ ಎಲ್ಲರಿಗೂ ಪ್ರೀತಿ’ ಎಂದಿದ್ದರು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್. ಒಳ್ಳೆಯ ನೆರೆ ಎಂದರೂ ಎಲ್ಲರಿಗೂ ಪ್ರೀತಿ.

‘ವಿಪತ್ತು ನಿರ್ವಹಣೆ’ಎನ್ನುವುದೇ ನಮಗೆ ಹೊಸದು. ನೆರೆ ಬಂದರೆ ಮೊದಲು ಒಂದಷ್ಟು ಗಂಜಿಕೇಂದ್ರಗಳನ್ನು ತೆರೆಯುವುದು, ನಂತರ ಒಂದಷ್ಟು ಪರಿಹಾರ ಕೊಡುವುದು, ಕೊನೆಗೊಂದಷ್ಟು ಮನೆ ಕಟ್ಟಿಕೊಡುವುದಷ್ಟೇ ವಿಪತ್ತು ನಿರ್ವಹಣೆ ಎಂದು ತಿಳಿದುಕೊಂಡವರೇ ವಿಧಾನಸೌಧದಲ್ಲಿ ಕೂತಿದ್ದಾರೆ. ಏನು ಕೇಳಿದರೂ ಅವರು ಮುಂದಿಡುವುದು ನಿರ್ಜೀವ ಅಂಕಿ ಅಂಶಗಳ ಕಂತೆಗಳನ್ನು. ವಿಪತ್ತು ನಿರ್ವಹಣೆಗೆ ಇರುವ ಬೇರೆಬೇರೆ ಆಯಾಮಗಳ ಬಗ್ಗೆ ಅವರಿಗೆ ಅರಿವಿದ್ದ ಹಾಗಿಲ್ಲ. ನೆರೆಪರಿಹಾರ ಎನ್ನುವುದು ಕೇವಲ ಕಂದಾಯ ಇಲಾಖೆಯ ಜವಾಬ್ದಾರಿ ಎಂದು ಸರ್ಕಾರ ತಿಳಿದುಕೊಂಡಿರುವುದು ಕೂಡಾ ಇದಕ್ಕೆ ಕಾರಣ. ಪುನರ್ವಸತಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿರುವ ಕೃಷಿ, ಆರೋಗ್ಯ, ವಸತಿ, ನೀರಾವರಿ,ಲೋಕೋಪಯೋಗಿ, ಶಿಕ್ಷಣ, ಇಂಧನ, ಸಮಾಜಕಲ್ಯಾಣ ಹೀಗೆ ಸರ್ಕಾರದ ಬೇರೆಬೇರೆ ಇಲಾಖೆಗಳ ನಡುವೆ ಸಮನ್ವಯವೇ ಇಲ್ಲದಂತಾಗಿದೆ. ಎಲ್ಲ ಇಲಾಖೆಗಳು ಪ್ರತ್ಯೇಕ ದ್ವೀಪಗಳ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಈ ಎಲ್ಲ ಇಲಾಖೆಗಳ ಸಚಿವರನ್ನೊಳಗೊಂಡ ತಂಡವೊಂದನ್ನು ರಚಿಸಿ ಅದಕ್ಕೆ ಪುನರ್ವಸತಿಯ ಹೊಣೆಯನ್ನು ಒಪ್ಪಿಸಿದ್ದರೆ ಈಗಿನ ಗೊಂದಲ ಇರುತ್ತಿರಲಿಲ್ಲ, ಅಕ್ರಮಗಳು ಕೂಡಾ ಕಡಿಮೆಯಾಗುತ್ತಿತ್ತು. ಕೆಲಸಗಳು ಕೂಡಾ ಬೇಗನೆ ಮುಗಿಯತ್ತಿತ್ತೋ ಏನೋ?

ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸ್ವಾವಲಂಬಿಯಾಗಿ ಆತ್ಮಾಭಿಮಾನದಿಂದ ಬದುಕುತ್ತಿದ್ದ ಜನರನ್ನು ನೆರೆಹಾವಳಿ ಅಕ್ಷರಶಃ ಪರಾವಲಂಬಿಯಾಗಿ ಆತ್ಮಾಭಿಮಾನ ಶೂನ್ಯರನ್ನಾಗಿ ಮಾಡಿದೆ. ಸರ್ಕಾರ ಕೂಡಾ ಸಂತ್ರಸ್ತರನ್ನು ದಾನಿಗಳ ಋಣಭಾರದಲ್ಲಿ ಹಾಕಿ ಬೇಡುವವರನ್ನಾಗಿ ಮಾಡಿದೆ. ಊರ ಕಡೆಗೆ ಯಾವುದೋ ಕಾರು ಬರುತ್ತಿರುವುದನ್ನು ಕಂಡ ಕೂಡಲೇ ಮಕ್ಕಳೆಲ್ಲ ಓಡಿ ಬರುತ್ತವೆ. ತಿನ್ನಲು, ಉಣ್ಣಲು, ಉಡಲು ಏನಾದರೂ ತಂದಿರಬಹುದೇ ಎಂಬ ನಿರೀಕ್ಷೆಯಿಂದ.

ಎಷ್ಟೋ ಮನೆಗಳಲ್ಲಿ ಅಸಹಾಯಕ ಹೆತ್ತವರೇ ಮಕ್ಕಳನ್ನು ಈ ಕೆಲಸಕ್ಕೆ ಹಚ್ಚುತ್ತಿದ್ದಾರೆ. ‘ಅನ್ನ ನೀಡುತ್ತಾ ಬಂದ ಜನರನ್ನು ಈ ನೆರೆ ಮತ್ತು ಸರ್ಕಾರ ಭಿಕ್ಷುಕರನ್ನಾಗಿ ಮಾಡಿದೆ’ ಎಂದು ಕೂಡಲಸಂಗಮದಲ್ಲಿ ಭೇಟಿಯಾದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳುತ್ತಿದ್ದರು. ನೆರೆ ಸಂತ್ರಸ್ತರನ್ನು ನೋಡಿದಾಗ ಹಾಗೆಯೇ ಅನಿಸುತ್ತದೆ.

No comments:

Post a Comment