Total Pageviews

Monday, November 21, 2011

ಕೆನೆ ಪದರ ಮತ್ತು ರಸ್ತೆಗೆ ತೆಳು ಡಾಂಬರು ಪದರ

ಈ ಸಮಾಜದಲ್ಲಿ ಭ್ರಷ್ಟರಲ್ಲದ ಉನ್ನತ ವ್ಯಕ್ತಿಯನ್ನು ಹುಡುಕುವುದೆಂದರೆ ದಿನದಿನಕ್ಕೆ ಕಷ್ಟವಾಗುತ್ತಿದೆ. `ಲೋಕಾಯುಕ್ತ` ಹುದ್ದೆಗೆ ಯೋಗ್ಯ ವ್ಯಕ್ತಿಯನ್ನು ದೇವಲೋಕದಿಂದಲೇ ಕರೆತರಬೇಕೇನೊ` ಎಂದು ಇತ್ತೀಚೆಗೆ ಈಶ್ವರಪ್ಪ ಹೇಳಿದ್ದನ್ನು ನೆನಪಿಸಿಕೊಳ್ಳಿ.

ಏಕೆ ಈಚೀಚೆಗೆ ಭ್ರಷ್ಟಾಚಾರ ಸರ್ವವ್ಯಾಪಿ ಆಗುತ್ತಿದೆ? ನಮ್ಮಲ್ಲಷ್ಟೇ ಅಲ್ಲ, ಬ್ರಿಟನ್ನಿನಲ್ಲೂ ಆದಾಯ ತೆರಿಗೆ ವಂಚಿಸಲು ಹೋಗಿ ಕೆಲವು ರಾಜಕಾರಣಿಗಳು ಕಂಬಿ ಎಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನುಷ್ಯನ ಗುಣಸ್ವಭಾವಗಳ ಅಧ್ಯಯನ ಮಾಡುವ ವರ್ತನಾ ವಿಜ್ಞಾನಿಗಳು, ಮನೋವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಭ್ರಷ್ಟಾಚಾರದ ಬಗ್ಗೆ ಏನನ್ನುತ್ತಾರೆಂದು ನೋಡಲು ಬ್ರಿಟನ್ನಿನ `ನ್ಯೂ ಸೈಂಟಿಸ್ಟ್` ಪತ್ರಿಕೆ ಜಗತ್ತಿನ ನಾನಾ ಭಾಗಗಳಲ್ಲಿ ಈ ಕುರಿತು ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳನ್ನೆಲ್ಲ ಕಲೆ ಹಾಕಿ ಕಳೆದ ವಾರ ಪ್ರಕಟಿಸಿದೆ. 

ಅದರ ಮುಖ್ಯಾಂಶಗಳು ಇಲ್ಲಿವೆ:
ಪ್ರಾಣಿಗಳೂ ಸಸ್ಯಗಳೂ ತಮ್ಮ ವಂಶ ವೃದ್ಧಿಯಾಗಲೆಂದು ಅನೇಕ ಅನೈತಿಕ ಕೆಲಸಗಳನ್ನು ಮಾಡುತ್ತವೆ. ಸುಳ್ಳು, ಮೋಸ, ವಂಚನೆ, ಸ್ವಜನ ಪಕ್ಷಪಾತ, ಕಳ್ಳತನ ಇವೆಲ್ಲವೂ ಜೀವಲೋಕದಲ್ಲಿ ಹಾಸು ಹೊಕ್ಕಾಗಿವೆ. 

ಎಲ್ಲೆಲ್ಲೂ ಮೋಸಗಾರರೇ ಇರುವಾಗ ತಾನೊಬ್ಬ ಸತ್ಯವಂತನಾಗಿ, ಸಂತನಾಗಿ ಇರುತ್ತೇನೆಂದರೆ ಆ ಜೀವಿ ಕಡುಕಷ್ಟದ ಬದುಕು ಸಾಗಿಸಬೇಕಾಗುತ್ತದೆ. ಹಾಗೆಂದು ತೀರಾ ಬಹಿರಂಗ ಭ್ರಷ್ಟನಾಗಿದ್ದರೂ ಏಟು ಬೀಳುತ್ತದೆ. 

ಇಂಥ ಸಂದರ್ಭದಲ್ಲಿ ಇವೆರಡರ ನಡುವಣ ಮಾರ್ಗವೇ ಯಶಸ್ಸಿನ ಸೋಪಾನವಾಗುತ್ತದೆ. ಅಂದರೆ, `ನಾವೆಲ್ಲ ನೀತಿವಂತರಾಗಿ ಬಾಳೋಣ` ಎಂಬ ಆದರ್ಶವನ್ನು ನಟಿಸುತ್ತಲೇ ಆದಷ್ಟೂ ಬುದ್ಧಿವಂತಿಕೆಯಿಂದ ತನ್ನ ಸ್ಥಾನವನ್ನು ಭದ್ರಪಡಿಸುತ್ತ ಹೋಗುವುದೇ ಯಶಸ್ಸಿನ ಸೂತ್ರವಾಗಬೇಕು. ಅಲ್ಲಿಗೆ, ವಿಕಾಸ ವಿಜ್ಞಾನದ ಪ್ರಕಾರ, ಬೂಟಾಟಿಕೆಯೇ (ಹಿಪಾಕ್ರಿಸಿ) ಜೀವಲೋಕದ ಅಂತಃಸ್ರೋತ ಗುಣವಾಗಿರಬೇಕು. 

ಮನುಷ್ಯನೂ ಹಾಗೆಯೇ ಇರಬೇಕಿತ್ತು; ಆದರೆ `ಯಶಸ್ಸು` ಎಂದರೆ ಆತನ ಮಟ್ಟಿಗೆ ಸಂತಾನವೃದ್ಧಿಯೇ ಪರಮೋಚ್ಚ ಎನ್ನುವಂತಿಲ್ಲ; ಮಠಾಧೀಶರುಗಳಿದ್ದಾರೆ. ಇನ್ನು ಹಣಗಳಿಕೆಯೇ ಅಳತೆಗೋಲು ಎನ್ನುವಂತೆಯೂ ಇಲ್ಲ. ಸರಳ ಬದುಕು ನಡೆಸುವವರೂ ಭ್ರಷ್ಟರಿರಬಹುದು. 

ಪ್ರಾಣಿ ಪ್ರಪಂಚದಲ್ಲಿ ಕಾಣಸಿಗದ ಮೌಲ್ಯಾಧಾರಿತ ಬದುಕು, ಸತ್ಯವಂತನೆಂಬ `ಕೀರ್ತಿ` ಇವೆಲ್ಲ ಮನುಷ್ಯ ಪ್ರಪಂಚದಲ್ಲಿ ಹಾಸುಹೊಕ್ಕಾಗಿರುತ್ತವೆ. ನಾವು ವಿಕಾಸ ಪಥದಲ್ಲಿ ವಿವಿಧ ಬಗೆಯ ಆದರ್ಶ ಪಥಗಳನ್ನು, ನೈತಿಕ ಕೋಟೆಗಳನ್ನು ಕಟ್ಟಿಕೊಳ್ಳುತ್ತ ಬಂದಿದ್ದೇವೆ. 

ಅವುಗಳ ನಡುವೆ ಎತ್ತರಕ್ಕೆ ಬೆಳೆದ ವ್ಯಕ್ತಿಗಳೇ ಆಗಾಗ ಹಠಾತ್ತಾಗಿ ಅಪಕೀರ್ತಿಯ ಪ್ರಪಾತಕ್ಕೆ ಬೀಳುತ್ತಾರೆ. ಹಾಗಾಗಿ ನಮ್ಮಳಗಿನ ಭ್ರಷ್ಟಮತ್ತೆಯನ್ನು ಅಥವಾ ಅದಕ್ಕೆ ಕಾರಣಗಳನ್ನು ಅಳೆಯುವುದು ಸುಲಭವಲ್ಲ. ಆದರೂ ವಿಜ್ಞಾನಿಗಳು ನಾನಾ ಬಗೆಯ ಪ್ರಯೋಗಗಳ ಮೂಲಕ, ಆಟಗಳ ಮೂಲಕ ಮನುಷ್ಯನ `ಭ್ರಷ್ಟಮತ್ತೆ`ಯನ್ನು ಅಳೆಯಲು ಯತ್ನಿಸುತ್ತಿದ್ದಾರೆ. 

`ನಮ್ಮಲ್ಲಿ ಬಹುಪಾಲು ಜನರು ಪ್ರಾಮಾಣಿಕ ಬದುಕು ನಡೆಸುತ್ತೇವೆ, ಏಕೆಂದರೆ ಮೋಸ ಮಾಡುವ ಅವಕಾಶ ಸಿಕ್ಕಿರಲಿಲ್ಲ` ಎಂಬುದನ್ನು ಸ್ವಿಸ್ ಫೆಡರಲ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಸಿದ ಪ್ರಯೋಗವೊಂದರಲ್ಲಿ ತೀರ್ಮಾನಿಸಲಾಗಿದೆ.
ಮನೋವಿಜ್ಞಾನಿಗಳು ಇಂಥವನ್ನೆಲ್ಲ ಪತ್ತೆ ಹಚ್ಚಲೆಂದು ಆಟಗಳನ್ನು ರೂಪಿಸುತ್ತಾರೆ. ಪ್ರತಿ ಆಟಗಾರನಿಗೆ ಒಬ್ಬ ಸಹಾಯಕ (ಆಳು) ಇರುತ್ತಾನೆ. ಆತನ ನೆರವಿನಿಂದ ಬಿಸಿನೆಸ್ ಮಾಡುತ್ತ, ಆತನಿಗೂ ನ್ಯಾಯಯುತವಾಗಿ ಲಾಭಾಂಶ ಹಂಚುತ್ತ ಮುನ್ನಡೆಯಬೇಕು. ನಿಯತ್ತಿನಲ್ಲಿ ಆಡಿದರೆ ಕೊನೆಯಲ್ಲಿ ಎಲ್ಲರ ಐಶ್ವರ್ಯವೂ ಸಮಸಮ ಆಗಬೇಕು. 

ನಿಯತ್ತಿನಲ್ಲೇ ಆಡಬೇಕು, ಆಳುಗಳಿಗೆ ಸಲ್ಲಬೇಕಾದ್ದನ್ನು ನೀಡಬೇಕು ಎಂಬುದನ್ನು ಎಲ್ಲರೂ ಆರಂಭದಲ್ಲಿ ಒಪ್ಪಿದ್ದರು. ಮೊದಲ ಸುತ್ತಿನಲ್ಲಿ ಹೂಡಿಕೆ ಬಂಡವಾಳ ಕಮ್ಮಿ ಇದ್ದಾಗ, ಒಬ್ಬೊಬ್ಬನೇ ಆಳು ಇದ್ದಾಗ ಯಾರೂ ಮೋಸ ಮಾಡಲಿಲ್ಲ. ಎರಡನೆಯ ಸುತ್ತಿನಲ್ಲಿ ಬಿಸಿನೆಸ್ಸನ್ನು ಇಮ್ಮಡಿ ಮಾಡಿ, ಒಬ್ಬೊಬ್ಬನಿಗೆ ಮೂವರು ಆಳುಗಳನ್ನು ನೀಡಲಾಯಿತು. 

ಶೇಕಡಾ 20ರಷ್ಟು ಆಟಗಾರರು ಆಳುಗಳಿಗೆ ಸೇರಬೇಕಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಲಪಟಾಯಿಸತೊಡಗಿದರು. ಮೂರು, ನಾಲ್ಕನೆಯ ಸುತ್ತಿನಲ್ಲಿ ಬಂಡವಾಳ ಹೂಡಿಕೆ ಜಾಸ್ತಿ ಆಗುತ್ತ ಹೋದಂತೆ ಮೋಸದ ಪ್ರಮಾಣವೂ ಜಾಸ್ತಿಆಗುತ್ತ ಅದು ಶೇ. 45ಕ್ಕೆ ಏರಿತು. ಬಡವರು ಹಂಚಿಕೊಂಡು ಉಣ್ಣುತ್ತಾರೆ. ಶ್ರೀಮಂತರು ಸ್ವಾರ್ಥಿಗಳಾಗುತ್ತ ಹೋಗುತ್ತಾರೆ ಎಂಬುದು ಈ ಪ್ರಯೋಗದಿಂದ ಗೊತ್ತಾಯಿತು.

ಆದರೆ ವಾಸ್ತವದಲ್ಲಿ ಬಡದೇಶಗಳಲ್ಲೇ ಲಂಚಗುಳಿತನ ಹೆಚ್ಚಿದೆ. `ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್` ಸಂಸ್ಥೆ ಪ್ರತಿ ವರ್ಷ ಜಗತ್ತಿನ ಎಲ್ಲ ದೇಶಗಳ `ಭ್ರಷ್ಟತಾ ಸೂಚ್ಯಂಕ`ವನ್ನು ಪ್ರಕಟಿಸುತ್ತಿದೆ. 

ಭ್ರಷ್ಟಾಚಾರ ಅತ್ಯಂತ ಕಡಿಮೆ ಇರುವ ಡೆನ್ಮಾರ್ಕ್, ನ್ಯೂಝಿಲೆಂಡ್, ಸಿಂಗಪೂರ್, ಫಿನ್ಲೆಂಡ್, ಸ್ವೀಡನ್ ಮುಂತಾದ ಶ್ರೀಮಂತ ದೇಶಗಳು ಮೊದಲ ಐದು ಸ್ಥಾನಗಳಲ್ಲಿದ್ದರೆ, ಚೀನಾ 78, ಭಾರತ 87, ಅರ್ಜೆಂಟಿನಾ 105, ಬಾಂಗಾದ್ಲೇಶ್ 134 ಮತ್ತು ಪಾಕಿಸ್ತಾನ 143ನೇ ಸ್ಥಾನದಲ್ಲಿವೆ. 

ಎಲ್ಲಕ್ಕಿಂತ ಕೆಳಗೆ ದಟ್ಟ ದರಿದ್ರ ಸೊಮಾಲಿಯಾ 178ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಏನೆಂದರೆ ಇದ್ದ ಸೀಮಿತ ಸಂಪತ್ತನ್ನೇ ಎಲ್ಲರೂ ಬಾಚಿಕೊಳ್ಳಲು ಹೊರಟಾಗ ಕೆಲವೇ ಶಕ್ತಿಶಾಲಿಗಳು ಮೇಲುಗೈ ಪಡೆಯುತ್ತಾರೆ. ಇದು ನಿಜವಿದ್ದೀತೆ?

ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಆ ಮೂಲಕ ಆತ ತನಗೆ ತಾನೇ `ಪವರ್‌ಫುಲ್` ಎಂದುಕೊಳ್ಳುವಂತೆ ಮಾಡುವ ಅನೇಕ ತಂತ್ರಗಳು ಮನೋವಿಜ್ಞಾನದಲ್ಲಿವೆ. ಒಂದು ತಂತ್ರದ ಪ್ರಕಾರ, ತಾನು ಇದುವರೆಗೆ ಗೆಲುವು ಸಾಧಿಸಿದ ಪ್ರಸಂಗಗಳೆಲ್ಲ ಸಾಲಾಗಿ ವ್ಯಕ್ತಿಗೆ ನೆನಪಾಗುವಂತೆ ಮಾಡಿದರೆ ಸಾಕು, ತಾನು ಶಕ್ತಿಶಾಲಿ ಎಂಬ ಭಾವನೆ ತಾತ್ಕಾಲಿಕವಾಗಿ ಆತನ ಮನಸ್ಸಿನಲ್ಲಿ ಮೂಡುತ್ತದೆ.

ಅಂಥ ಕ್ಷಣದಲ್ಲಿ ಆತನ ಮಿದುಳಿನ ಯಾವ ಯಾವ ಭಾಗಗಳು ಉದ್ದೀಪನವಾಗುತ್ತವೆ ಎಂಬುದನ್ನು ನೆದರ್‌ಲ್ಯಾಂಡ್ಸ್‌ನ ಎರಡು ವಿಶ್ವವಿದ್ಯಾಲಯಗಳ ತಜ್ಞರು ಸ್ಕ್ಯಾನ್ ಮಾಡಿ ನೋಡಿದರು.

ಸೆರೆ ಕುಡಿದವರಲ್ಲಿ ಕಾಣಬರುವಂತೆ ನಿರ್ಭಯ, ನಿಸ್ಸಂಕೋಚ, ನಿರ್ಲಜ್ಜ, ನಿರಾತಂಕ ಭಾವಗಳನ್ನು ಸ್ಫುರಿಸಬಲ್ಲ ನರಮಂಡಲದ ಭಾಗಗಳು ಮಿನುಗತೊಡಗಿದವು. ಅದರರ್ಥ ಏನೆಂದರೆ, ಅತಿಯಾದ ಆತ್ಮವಿಶ್ವಾಸವಿರುವ ವ್ಯಕ್ತಿ ನಿರ್ಭಯಿ ಆಗುತ್ತಾನೆ.

ತಾನು ಏನು ಮಾಡಿದರೂ ಜೀರ್ಣಿಸಿಕೊಳ್ಳಬಲ್ಲೆ, ಜಯಿಸಬಲ್ಲೆ ಎಂಬ ಭಾವನೆ ಸದಾ ಸ್ಥಾಯಿಯಾಗಿ ಇರುತ್ತದೆ. ತನ್ನನ್ನು ಕಂಡಾಗ ಸೆಲ್ಯೂಟ್ ಹೊಡೆಯುವ, ಕಾಲಿಗೆ ಬೀಳುವ ವಂದಿಮಾಗಧರು ಸುತ್ತೆಲ್ಲ ಇರುವಾಗ ಸಹಜವಾಗಿಯೇ ತಾನು ಪವರ್‌ಫುಲ್ ಎಂಬ ಭಾವನೆ (ಮದ) ಬರುತ್ತದೆ. ಅಧಿಕಾರ ಇರುವವರು, ಶ್ರೀಮಂತರು, ಸ್ವಾಮೀಜಿಗಳು ಭ್ರಷ್ಟಕೂಪಕ್ಕೆ ಜಾರುತ್ತಾರೆ. 

ಲಂಚದಿಂದ ದೂರ ಇರಬಯಸುವವರು ಉಡುಗೊರೆಗಳನ್ನು ಮಾತ್ರ ಸ್ವೀಕರಿಸುತ್ತಾರೆ. ಇನ್ನು ಕೆಲವರು ಲಂಚ ಸಂಗ್ರಹಕ್ಕೆಂದೇ ಮಧ್ಯವರ್ತಿಗಳನ್ನು ಇಟ್ಟುಕೊಂಡಿರುತ್ತಾರೆ. 

ರೆವಿನ್ಯೂ ಇಲಾಖೆಯಲ್ಲಿ, ಡ್ರೈವಿಂಗ್ ಲೈಸೆನ್ಸ್ ಪಡೆಯುವಲ್ಲಿ ನಾವೆಲ್ಲ ಇಂಥವರನ್ನು ನೋಡಿದ್ದೇವೆ. ಪಾಪಕೃತ್ಯದಲ್ಲಿ ತಾನು ನೇರ ಭಾಗಿಯಾಗಿಲ್ಲ ಎಂತಲೊ ಅಥವಾ ಸಿಕ್ಕಿಬಿದ್ದರೆ ತಾನು ಬಚಾವು ಆಗಬಹುದು ಎಂತಲೊ ಈ ಮಾರ್ಗ ಅನುಸರಿಸುತ್ತಾರೆ. ಮತ್ತೆ ಕೆಲವರು ತಮ್ಮ ಗಳಿಕೆಯ ಒಂದು ಪಾಲನ್ನು ತಮ್ಮ ಮೇಲಿನವರಿಗೆ ಮತ್ತು/ಅಥವಾ ದೇವರಿಗೆ ನೀಡಿ ಪಾಪಪ್ರಜ್ಞೆಯಿಂದ ಮುಕ್ತರಾಗುತ್ತಾರೆ.

ಅದು ಸರಿ, ಆದರೆ ಲಂಚ ಕೊಡುವವರು ಇರುವವರೆಗೆ ಅದನ್ನು ಪಡೆಯುವವರು ಇರುತ್ತಾರೆ ತಾನೆ? ಪವರ್‌ಫುಲ್ ವ್ಯಕ್ತಿಗಳಷ್ಟೇ ಅಬ್ಬೇಪಾರಿ ಜನರೂ ಪಾಪಕೃತ್ಯದಲ್ಲಿ ಭಾಗಿಯೆನ್ನಬೇಕಾಗುತ್ತದೆ. ಹಾಗೆ ಒಂದು ದೇಶದ ಇಡೀ ಸಮಾಜವೇ ಭ್ರಷ್ಟವಾಗಲು ಸಾಧ್ಯವೆ? ಸಮಾಜದ ಎಲ್ಲ ಸ್ತರಗಳಲ್ಲೂ ಭ್ರಷ್ಟತನ ಅಂತರ್ಗತವಾಗಿರಲು ಸಾಧ್ಯವೆ? 

ಆಕ್ಸ್‌ಫರ್ಡ್ ವಿವಿಯ ತಜ್ಞರು ಈ ಪ್ರಶ್ನೆಯನ್ನು ಕೆದಕಿದರು. ಜಗತ್ತಿನ 34 ದೇಶಗಳಿಂದ ಬಂದ ಸ್ನಾತಕಪೂರ್ವ ವಿದ್ಯಾರ್ಥಿಗಳ ಸಮೂಹಕ್ಕೆ ಒಂದು ಪ್ರಶ್ನಾವಳಿಯನ್ನು ನೀಡಿದರು. 

ಯಾವ ಯಾವ ಸಂದರ್ಭಗಳಲ್ಲಿ (ಉದಾ: ಆಸ್ಪತ್ರೆಯಲ್ಲಿ ತನ್ನ ಸರದಿ ಮೊದಲು ಬರುವಂತೆ) ಅಧಿಕಾರಿಗಳಿಗೆ ಲಂಚ ನೀಡುವುದು ಸೂಕ್ತ/ ಅನೈತಿಕ/ ಜಾಣತನ ಎಂಬ ಪಟ್ಟಿ ಅದರಲ್ಲಿತ್ತು. 

ಯಾವ ದೇಶದಿಂದ ಬಂದ ಯುವಕರ ಪ್ರತಿಕ್ರಿಯೆ ಹೇಗಿದೆ ಎಂದು ಭ್ರಷ್ಟತಾ ಸೂಚ್ಯಂಕದ ಪಟ್ಟಿಯಲ್ಲಿರುವ ದೇಶಗಳ ಜತೆ ತಾಳೆ ನೋಡಿದರು. ಭ್ರಷ್ಟಾಚಾರ ಜಾಸ್ತಿ ಇರುವ ದೇಶಗಳಿಂದ ಬಂದ ಯುವಜನರು ಲಂಚ ನೀಡಲು ಸುಲಭವಾಗಿ ಮುಂದಾಗುತ್ತಾರೆ ಎಂಬುದು ಈ ಪ್ರಶ್ನಾವಳಿಯನ್ನು ವಿಶ್ಲೇಷಿಸಿದಾಗ ತಿಳಿದು ಬಂತು. 

`ಲಂಚಗುಳಿತನ ಎಂಬುದು ಆಯಾ ದೇಶದ ಸಂಸ್ಕೃತಿಯಲ್ಲೇ ಬೇರೂರಿ ಬೆಳೆದಿರುತ್ತದೆ` ಎಂದು ಫ್ಲಾರಿಡಾ ಸ್ಟೇಟ್ ವಿವಿಯ ಸಮಾಜ ವಿಜ್ಞಾನಿ ಡೇನಿಲಾ ಸೆರ‌್ರಾ ತೀರ್ಮಾನಿಸಿದರು. 

ಇದ್ದುದರಲ್ಲಿ ಸಮಾಧಾನದ ಸಂಗತಿ ಏನೆಂದರೆ ಭ್ರಷ್ಟ ಸಮಾಜದಿಂದ ದೂರವಾಗಿ ಹೆಚ್ಚಿನ ಸಮಯವನ್ನು ಬೇರೆ ದೇಶಗಳಲ್ಲಿ ಕಳೆದರೆ ಕ್ರಮೇಣ ಅವರು ಬದಲಾಗುತ್ತಾರೆ. 

ವಿದೇಶದಲ್ಲೇ ಪದವಿ ಪಡೆದು ಅಲ್ಲೇ ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ಇನ್ನೊಂದು ಪ್ರಶ್ನಾವಳಿ ನೀಡಿ ಫಲಿತಾಂಶ ನೋಡಿ ಈ ನಿರ್ಣಯಕ್ಕೆ ಬಂದ ಸೆರ‌್ರಾ, `ಇವರೇ ಮುಂದೆ ತಮ್ಮ ದೇಶದಲ್ಲಿ ಬದಲಾವಣೆಯ ಹರಿಕಾರರಾಗುವ ಸಾಧ್ಯತೆ ಇದೆ` ಎಂದು ಹೇಳುತ್ತಾರೆ.

ಹದಿಹರಯದ ಆದರ್ಶಗಳನ್ನು ಮುಂದೆಯೂ ಕಟ್ಟುನಿಟ್ಟಾಗಿ ಪಾಲಿಸಬಲ್ಲವರು, ಹರಿಕಾರರಾಗಬಲ್ಲವರು ಎಂಥ ಪತಿತ ಸಮಾಜದಲ್ಲೂ ಕೆಲವರು ಇದ್ದೇ ಇರುತ್ತಾರೆ. 

ಅಂಥವರನ್ನು ಹುಡುಕುವುದು, ಅಂಥವರ ತಂಡ ಕಟ್ಟುವುದು ಹೇಗೆ? ಭ್ರಷ್ಟತೆಯ ನಾನಾ ಮುಖಗಳನ್ನು ಅಳೆದು ನೋಡಿದ ಸಮಾಜ ವಿಜ್ಞಾನಿಗಳಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಯಾರು ಸುಲಭವಾಗಿ ಭ್ರಷ್ಟರಾಗುತ್ತಾರೆ ಎಂಬುದಕ್ಕೆ ಎಮ್‌ಐಟಿಯ ವರ್ತನಾ ಅರ್ಥತಜ್ಞ ಡ್ಯಾನ್ ಏರಿಯೆಲಿ ಕೆಲವು ಸೂಚನೆಗಳನ್ನು ಪಟ್ಟಿ ಮಾಡಿದ್ದಾರೆ. 

ಅವರ ಪ್ರಕಾರ, ಸೃಜನಶೀಲ ವ್ಯಕ್ತಿಗಳು ಇತರರಿಗಿಂತ ಜಾಸ್ತಿ ಅಪ್ರಾಮಾಣಿಕರಾಗಿರುತ್ತಾರೆ. ಹೀಗೆ ಮಾಡುವುದು ಏಕೆ ಸರಿ ಎಂದು ತಮಗೆ ತಾವೇ ಕತೆ ಕಟ್ಟಿಕೊಳ್ಳುತ್ತ ಆತ್ಮವಂಚನೆ ಮಾಡಿಕೊಳ್ಳುವಲ್ಲಿ ಅವರು ನಿಸ್ಸೀಮರಾಗಿರುತ್ತಾರೆ. 

ಆತ್ಮವಂಚನೆ ಎಂಬುದು ಭ್ರಷ್ಟಾಚಾರದತ್ತ ಮೊದಲ ಹೆಜ್ಜೆ- ಗೊತ್ತಲ್ಲ?
ಅದೆಲ್ಲ ಗೊತ್ತು, ಭ್ರಷ್ಟಾಚಾರದ ನಿಯಂತ್ರಣಕ್ಕೆ ಈ ವಿಜ್ಞಾನಿಗಳಲ್ಲಿ ಏನಾದರೂ ಹೊಸ ಅಸ್ತ್ರ ಇದೆಯೆ? ಶಿಕ್ಷೆ ಮತ್ತು ಅವಮಾನ ಎರಡೂ ಪ್ರಯೋಗಶಾಲೆಗಳಲ್ಲಿ ಉತ್ತಮ ಅಸ್ತ್ರಗಳು ನಿಜ. ಸಿಕ್ಕಿ ಬಿದ್ದೇನೆಂಬ ಭಯದಿಂದಾಗಿಯೇ ಎಲ್ಲರೂ ಅಲ್ಲಿ ಪ್ರಾಮಾಣಿಕರಾಗುತ್ತಾರೆ. 

ಆದರೆ ಮೇಲ್ವಿಚಾರಕನೇ ಅನೈತಿಕ ಹಾದಿ ತುಳಿಯುವಾಗ ಈ ಎರಡೂ ವಿಫಲವಾಗುತ್ತವೆ. ಹಾಗಾಗಿ ಸಾರ್ವತ್ರಿಕವಾಗಿ ಎಲ್ಲರೂ ಭ್ರಷ್ಟಾಚಾರದ ವಿರುದ್ಧ ಸಂಘಟಿತರಾಗಿ ಕ್ರಿಯಾಶೀಲರಾದರೆ ಮಾತ್ರ ಅದನ್ನು ಹತ್ತಿಕ್ಕಬಹುದು ಎಂದು ಇಂಡೊನೇಶ್ಯದಲ್ಲಿ ವಿಶ್ವಸಂಸ್ಥೆಯ ಸಲಹಾಕಾರನಾಗಿ ಕೆಲಸ ಮಾಡಿದ ಬೆಂಜಮಿನ್ ಓಲ್ಕನ್ ಹೇಳುತ್ತಾರೆ. 

ಅಲ್ಲಿ ವಿವಿಧ ಸ್ತರಗಳಲ್ಲಿ ಲೆಕ್ಕಪತ್ರ ತಪಾಸಣೆ ಮಾಡುವ ಕಟ್ಟುನಿಟ್ಟಿನ (ಪ್ರಾಯಶಃ ನಮ್ಮಲ್ಲಿ ಜಾರಿಗೆ ಬರಲಿರುವ ಲೋಕಪಾಲ್ ಮಾದರಿಯ) ವ್ಯವಸ್ಥೆ ಇದೆಯೆಂದು ಅವರು ಹೇಳುತ್ತಾರೆ. ಅದೆಷ್ಟೊ ಬಾರಿ ತಪಾಸಣೆಗೆ ಬರಲೇ ಬೇಕೆಂದಿಲ್ಲ. `ಬರುತ್ತಿದ್ದೇವೆ` ಎಂದು ಹೆದರಿಸಿದರೂ ರಸ್ತೆಯ ಮೇಲೆ ತುಸು ದಪ್ಪ ಡಾಂಬರು ಪದರ ಬೀಳುವುದನ್ನು ಅವರು ವಿವರಿಸುತ್ತಾರೆ.

ಭ್ರಷ್ಟಾಚಾರವನ್ನು ನಿಯಂತ್ರಿಸುವ ತಾಕತ್ತು ಮೇಲಿನವರ ಕೈಯಲ್ಲಿದ್ದರೆ ಸಾಲದು. ಅವಕಾಶ ವಂಚಿತ ಜನಸಾಮಾನ್ಯರ ಕೈಯಲ್ಲೂ ಅದು ಇರಬೇಕಲ್ಲವೆ? ಈ ನಿಟ್ಟಿನಲ್ಲಿ ನಾವು ಭಾರತೀಯರು ಕೆಳಗಡೆ ಜನಸಾಮಾನ್ಯರ ಕೈಗೆ `ಮಾಹಿತಿ ಹಕ್ಕು` ಅಸ್ತ್ರವನ್ನು ಮೊದಲು ನೀಡಿದ್ದೇವೆ. ಮೇಲ್ಗಡೆಯಿಂದ ಲೋಕಪಾಲರನ್ನೂ ಸ್ಥಾಪಿಸಲು ಸಿದ್ಧತೆ ನಡೆಸಿದ್ದೇವೆ. ಕಾದು ನೋಡೋಣ, ಡಾಂಬರು ಪದರದ ದಪ್ಪ ಹೆಚ್ಚುತ್ತದೊ ಅಥವಾ ಆಗಲೂ ಕೆನೆಪದರವೇ ಮೇಲುಗೈ ಸಾಧಿಸುತ್ತದೊ ಎಂದು.

No comments:

Post a Comment