ಬಸವಣ್ಣನವರ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿರುವುದನ್ನು ಓದುಗರೊಬ್ಬರು ನನ್ನ ಗಮನಕ್ಕೆ ತಂದರು. ಬಸವಣ್ಣನವರು ಬೋಧಿಸಿದ್ದು ವೀರಶೈವ ಧರ್ಮವನ್ನೋ ಲಿಂಗಾಯತ ಧರ್ಮವನ್ನೋ ಎಂಬುದು ಈ ಚರ್ಚೆಯ ಕೇಂದ್ರಬಿಂದುವಾಗಿತ್ತು.
ಪ್ರೊ. ಚಿದಾನಂದಮೂರ್ತಿಯವರು ವೀರಶೈವ ಬಸವಪೂರ್ವ ಯುಗದಲ್ಲೇ ಇತ್ತು, ಆ ತತ್ವವನ್ನು ಆಚರಣೆಗೆ ತಂದ ಒಬ್ಬ `ಅನ್ವಯಿಕ ವಿಜ್ಞಾನಿ` ಎಂದು ತಮ್ಮ ಆಧಾರಪೂರ್ವಕವಾಗಿ ವಾದಿಸಿದ್ದರು. ಅಷ್ಟೇ ಆಧಾರಪೂರ್ವಕವಾಗಿ ಪ್ರೊ. ಚಿದಾನಂದ ಮೂರ್ತಿಯವರ ವಾದವನ್ನು ಅಲ್ಲಗಳೆಯುತ್ತಾ ಬಸವಣ್ಣ ಸ್ಥಾಪಿಸಿದ ಧರ್ಮ ವೀರಶೈವವಲ್ಲ.
ಲಿಂಗಾಯತ ಧರ್ಮ ಎಂಬ ವಾದವನ್ನು ಪ್ರೊ. ಕಲ್ಬುರ್ಗಿಯವರು ಮಂಡಿಸಿದ್ದರು. ಇನ್ನೂ ಕೆಲವು ಗಣ್ಯರು ಈ ಚರ್ಚೆಯಲ್ಲಿ ಪಾಲುಗೊಂಡಿದ್ದರು. ಎಲ್ಲಿಯವರೆಗೆ ಸಮಾಜದಲ್ಲಿ ಪರಸ್ಪರ ವಿರುದ್ಧ ಜಾತಿ ಉಪಜಾತಿಗಳ ಪಾಂಥಿಕ ಹಿತಾಸಕ್ತಿಗಳಿರುತ್ತವೋ ಅಲ್ಲಿಯವರೆಗೆ ಈ ಚರ್ಚೆ ನಿಲ್ಲುವಂಥದ್ದಲ್ಲ.
ನನ್ನ ಗಮನಕ್ಕೆ ಇದನ್ನು ತಂದ ಓದುಗರು ವೀರಶೈವರಾಗಲಿ ಲಿಂಗಾಯತರಾಗಲಿ ಅಲ್ಲ. ಅವರು ಒಬ್ಬ ಅಂಬೇಡ್ಕರ್‌ವಾದಿ. ಬುದ್ಧ-ಬಸವ-ಅಂಬೇಡ್ಕರ್ ಪರಂಪರೆಯ ಜೊತೆಗೆ ತಮ್ಮನ್ನು ಗುರುತಿಸಿಕೊಂಡವರು. ಈ ಚರ್ಚೆಯನ್ನು ಗಮನಿಸಿ ಅವರು ತುಂಬಾ ಆತಂಕಕ್ಕೊಳಗಾಗಿದ್ದರು.
ಹಿರಿಯ ವಿದ್ವಾಂಸರು ಕೊಟ್ಟ ಕರಾರುವಾಕ್ಕು ತೀರ್ಮಾನಗಳಿಗಿಂತ ನನ್ನ ಗೆಳೆಯರ ಆತಂಕವೇ ನನಗೆ ಹೆಚ್ಚು ಅರ್ಥಪೂರ್ಣವಾಗಿ ತೋರಿತು. ಅಲ್ಲದೆ ಆರುಕೋಟಿ ಕನ್ನಡಿಗರಿಗೆ ಮಾನ್ಯರಾದ ಬಸವಣ್ಣನವರ ಬಗೆಗಿನ ಈ ಚರ್ಚೆಯಲ್ಲಿ ಯಾಕೆ ಎರಡು ಬಣದವರು ಮಾತ್ರ ಪಾಲುಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಯೂ ನನ್ನನ್ನು ಕೆಣಕತೊಡಗಿತು.
ನನ್ನ ಆ ಆತ್ಮೀಯ ಓದುಗರು ಕೇಳಿದ ಪ್ರಶ್ನೆ ಇದು: `ಇಂಥ ವಿವಾದಗಳ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?`
ಬಸವಣ್ಣ ಕೇವಲ ಚರಿತ್ರೆಯಲ್ಲ. ಮತ್ತೆ ಮತ್ತೆ ವರ್ತಮಾನವಾಗಿ ಎಂಟುನೂರು ವರ್ಷಗಳಿಂದ ಕವಿಗಳ, ಚಿಂತಕರ, ಜನಸಾಮಾನ್ಯರ ಮನಸ್ಸಿನಲ್ಲಿ ಇಂದಿಗೂ ಮರುಹುಟ್ಟು ಪಡೆಯುತ್ತಿಲ್ಲವೇ? ಪಾಲ್ಕುರಿಕೆ ಸೋಮನಾಥ ಶುರುಮಾಡಿದ ಬಸವ ಕಥನ ಮುಂದಿನ ಯುಗಗಳಲ್ಲಿ ಆಯಾ ಕಾಲದ ಅಗತ್ಯಗಳ, ಸ್ವಯಂವಿರೋಧಗಳ ಚೌಕಟ್ಟಿನಲ್ಲಿ ಮಾರ್ಪಾಟು ಹೊಂದುತ್ತಾ ಬಂದಿದೆ.
ಬಸವಣ್ಣ ಒಬ್ಬ ಮಹಾನ್ ಐತಿಹಾಸಿಕ ವ್ಯಕ್ತಿ ನಿಜ, ಆದರೆ ಅದಕ್ಕಿಂತ ಹೆಚ್ಚಾಗಿ ಅತ್ಯಂತ ಪ್ರಭಾವಿಯಾದ ಒಂದು ಸಾಂಸ್ಕೃತಿಕ ಸಂಕೇತ. ಇಂದು ನಾವು ಹೇಗೆ ಬಸವಣ್ಣನೆಂಬ ಆ ಸಂಕೇತವನ್ನು, ಆ ಮೌಲ್ಯಗಳ ಚೌಕಟ್ಟನ್ನು, ಆ ಆದರ್ಶಗಳ ಕಲ್ಪನೆಯನ್ನು ಸ್ವೀಕರಿಸಬೇಕು?
ಮೇಲೆ ಹೆಸರಿಸಿದ ವಿದ್ವಾಂಸರ ಹಾಗೆ ನಾನು ಬಸವಣ್ಣನವರ ಬಗ್ಗೆ ತೀರ್ಮಾನ ಕೊಡಲು ಹೊರಡುತ್ತಿಲ್ಲ. ನಮ್ಮ ತಲೆಮಾರಿನವರು ಬಸವಣ್ಣನವರಿಂದ ಕಲಿತದ್ದು ತೀರ್ಮಾನಗಳ ಭಾಷೆಯನ್ನಲ್ಲ. ಅಂತರ್ ನಿರೀಕ್ಷಣೆಯ, ಆತಂಕದ, ಆತ್ಮಪರೀಕ್ಷೆಯ, ಅನುಭವದಲ್ಲಿ ಆಧಾರವಿಲ್ಲದ ಎಲ್ಲವನ್ನೂ ನಿಕಷಕ್ಕೊಡ್ಡುವ ಆರ್ದ್ರವಾದ ಭಾಷೆಯನ್ನು ನಾವು ಬಸವಣ್ಣನವರಿಂದ ಕಲಿತೆವು.
ಇದಕ್ಕೆ ವಿರುದ್ಧವಾದ ಉಕ್ತಿಗಳನ್ನೂ ಬಸವ ವಚನದಿಂದ ಉಲ್ಲೇಖಿಸಬಹುದೆಂದೂ ನಾನು ಬಲ್ಲೆ. ಭಕ್ತಿಯೆಂಬುದು ಹೋಗುತ್ತ ಬರುತ್ತ ಕೊಯ್ಯುವ ಗರಗಸವಾದಾಗ, ಕೊಲುವನೆಂಬ ಭಾಷೆ ದೇವನದಾದಾಗ ಸರಳ ತೀರ್ಮಾನಗಳು ಅರ್ಥ ಕಳೆದುಕೊಳ್ಳುತ್ತವೆ.
ಅಂತಹ ತೀವ್ರ ಕ್ಷಣಗಳಲ್ಲಿ ಅಂತರಂಗ ಬಹಿರಂಗಗಳ ಮಥನದಿಂದ ಭಾಷೆ ಒಂದು ಮಾಂತ್ರಿಕ ಮರುಹುಟ್ಟನ್ನು ಪಡೆಯುತ್ತದೆ. ಈ ಗುಣದಿಂದಲೇ ವಚನಗಳ ಭಾಷೆ ಇಂದಿಗೂ ಹಳಸಿಲ್ಲ. ಅವುಗಳ ಧ್ವನಿಶಕ್ತಿ ಇನ್ನೂ ಹೊಸಹೊಸ ವಿಸ್ತರಣೆಗಳನ್ನು ಪಡೆದುಕೊಳ್ಳುತ್ತಿದೆ.
ನನಗೆ ತಿಳುವಳಿಕೆ ಬಂದಾಗಿನಿಂದ ನಾನು ಗಮನಿಸುತ್ತಾ ಬಂದಿರುವ ಬಸವ ಕೇಂದ್ರಿತ ಚರ್ಚೆ ಅಂತಿಮ ತೀರ್ಮಾನದ ಸಪಾಟು ದಾರಿಯನ್ನು ಹಿಡಿಯುತ್ತಾ ಬಂದಿದೆ.
ಕ್ಷಣಕಣಕ್ಕೂ ತನ್ನ ಅಂತರಂಗ ಶುದ್ಧಿಯನ್ನು ಪರೀಕ್ಷಿಸುತ್ತಿದ್ದ ಬಸವಣ್ಣನವರನ್ನು ಅಂತಹ ಆತ್ಮಶೋಧನಾಶಕ್ತಿ ತಿಲಮಾತ್ರವೂ ಇರದ ನಾವು ನಮ್ಮ ವ್ಯಕ್ತಿಗತ ಅಥವಾ ಗುಂಪಿನ ಸ್ವಾರ್ಥಕ್ಕೆ ಅನುಕೂಲವಾದ ಚೌಕಟ್ಟಿನಲ್ಲಿ ತುರುಕಿ ಬಿಡಲು ಹೊರಡುತ್ತಿದ್ದೇವೆ.
ಇದಕ್ಕೊಂದು ಮನೋವೈಜ್ಞಾನಿಕ ಕಾರಣವೂ ಇದ್ದೀತು. ಬಸವಣ್ಣನವರಂತಾಗಲು ನಮಗೆ ಧೈರ್ಯವಿಲ್ಲ. ಅಷ್ಟೇ ಅಲ್ಲ, ಅವರ ಆ ವಿಚಿತ್ರ ಧೈರ್ಯವನ್ನು ತಾಳುವ ಶಕ್ತಿಯೂ ಇಲ್ಲ.
ಬಹು ಮಗ್ಗುಲಿನ ಬಸವಣ್ಣನೆಂಬ ಸಂಕೇತವನ್ನು ಒಂದು ಫಾರ್ಮುಲಾ ಮಾಡಿ ನಮ್ಮ ಬರಡುತನವನ್ನು ಸಾರಿಕೊಳ್ಳುತ್ತಿದ್ದೇವೇನೋ ಎಂಬ ಅನುಮಾನ ಮೂಡುತ್ತದೆ.
ಬಸವಣ್ಣನೆಂಬ ಜಂಗಮ ಸಂಕೇತವನ್ನು (ಈ ಪದವನ್ನು ಜಾತಿ, ಉಪಜಾತಿಯ ಅರ್ಥದಲ್ಲಿ ನಾನು ಬಳಸುತ್ತಿಲ್ಲ) ಸ್ಥಾವರಗೊಳಿಸಲು ಹೊರಟಿರುವ ಇಂಥಾ ತೌಡು ಕುಟ್ಟುವಂಥ ಪ್ರಕ್ರಿಯೆಯ ಬಗ್ಗೆ ನಾವು ಇನ್ನಾದರೂ ಮರುಚಿಂತನೆ ಮಾಡಬೇಕು.
ಹಾಗಾದರೆ ಬಸವಣ್ಣನವರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಆಧಾರಗಳ ಮೇಲೆ ನಿಂತ ಐತಿಹಾಸಿಕ ದೃಷ್ಟಿ ಒಂದು ಮಟ್ಟದವರೆಗೆ ಮುಖ್ಯ. ಆಧುನಿಕ ಜಗತ್ತಿನಲ್ಲಿ ಇತಿಹಾಸವೂ ಒಂದು ಮುಖ್ಯ ಚಾಲಕ ಶಕ್ತಿಯೆಂಬುದು ದಿಟ. ಆದರೆ ಇತಿಹಾಸವೂ ಒಂದು ಜಂಗಮ ಪ್ರಕ್ರಿಯೆ. ಅದೂ ನಿಂತ ನೀರಲ್ಲ.
ಉದಾಹರಣೆಗೆ, ಈಚೆಗೆ ಚಿಂತಕರ ಬಣವೊಂದು ಕರ್ನಾಟಕದಲ್ಲಿ ಸಕ್ರಿಯವಾಗಿ ವಚನಗಳಲ್ಲಿ ಜಾತಿ ಅನ್ನುವ ಪದದ ಪ್ರಯೋಗವೇ ಇಲ್ಲವೆಂದೂ, ಅಲ್ಲಿ ಬಳಕೆಯಾಗುವ ಕುಲ ಎಂಬ ಪದ ಜಾತಿಗೆ ಸಂವಾದಿಯಲ್ಲವೆಂದೂ, ಹಾಗಾಗಿ ವಚನಕಾರರು ಜಾತಿ ವಿರೋಧ ಮಾಡಲೇ ಇಲ್ಲವೆಂದೂ ವಾದಿಸತೊಡಗಿದೆ.
ಇನ್ನೊಬ್ಬ ಪ್ರತಿಭಾವಂತ ಯುವ ಇತಿಹಾಸಕಾರರು ಬಸವಣ್ಣ ಕಲ್ಯಾಣಕ್ಕೆ ಬಂದುದಕ್ಕೆ ಅನುಭವ ಮಂಟಪ ಸ್ಥಾಪಿಸಿದ್ದಕ್ಕೆ ಚಾರಿತ್ರಿಕ ಆಧಾರಗಳಿಲ್ಲವೆಂದು ವಾದಿಸಿದ್ದಾರೆ. ಇಂಥ ಅನುಮಾನಗಳ ಹಿನ್ನೆಲೆಯಲ್ಲಿ ಶಿಸ್ತುಬದ್ಧವಾದ ಸಂಶೋಧನೆ ಮುಂದುವರೆದು ನಾವು ಐತಿಹಾಸಿಕ ಸತ್ಯಕ್ಕೆ ಹತ್ತಿರವಾಗಬಹುದು.
ಇಂಥ ಇತಿಹಾಸಕಾರರ ಮಾತುಗಳನ್ನು ಕೇಳಿಸಿಕೊಂಡ ಮೇಲೂ ನನಗನ್ನಿಸುತ್ತದೆ: ಬಸವಣ್ಣ ಒಂದು ಐತಿಹಾಸಿಕ ಪಾತ್ರವೆನ್ನುವುದು ಅದೆಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾಗಿ ಇತಿಹಾಸ ಎಂದು ಮುಟ್ಟಲಾಗದ ಆದರ್ಶ ಕಲ್ಪನೆಯಾಗಿ ಬಸವಣ್ಣ ನಮ್ಮ ನಡುವೆ ಇದ್ದಾರೆ. ಬಸವಣ್ಣ ಕೇವಲ ಚರಿತ್ರೆಯಲ್ಲ, ಚಾರಿತ್ರ್ಯವೂ ಹೌದು.
ಈ ಚಾರಿತ್ರ್ಯದ ಭಿತ್ತಿಯಾದ ಕಲ್ಯಾಣವೂ ಅಷ್ಟೆ. ಆದ್ದರಿಂದಲೇ ಅಕ್ಕ ಹೇಳಿದ್ದು: `ಕಲ್ಯಾಣವೆಂಬುದನಾರಿಗೂ ಹೊಗಬಾರದು.` ಬಸವ ಕಲ್ಯಾಣದ ಕಥೆ ಕಲ್ಲೋಲದಲ್ಲಿ ಮುಗಿಯಿತಾದರೂ ಮುಂದೆ ಸಂಗೋಪನ ಯುಗದವರು ವಿಜಯಕಲ್ಯಾಣವನ್ನೂ ಕೊಡೇಕಲ್ಲು ಪರಂಪರೆಯವರು ಅಮರ ಕಲ್ಯಾಣವನ್ನೂ ಕಟ್ಟಲು ಹೊರಟಿದ್ದು; ಮಲೆ ಮಾದೇಶ್ವರ, ಮಂಟೇಸ್ವಾಮಿ, ಕುರುಬರ ರೇವಣಸಿದ್ಧ, ದೇವಾಂಗದವರ ರುದ್ರಮುನಿಸ್ವಾಮಿ ಮುಂತಾದ ಮುಂದಿನ ಯುಗದ ಸಂತರ ಕಥನಗಳಲ್ಲಿ ಕಲ್ಯಾಣ ಪ್ರವೇಶ ಒಂದು ಮುಖ್ಯ ಘಟನೆಯಾಗಿ ಬಂದದ್ದು.
ಭಾರತದಲ್ಲಿ ಇತಿಹಾಸ ರಚನೆಯ ಪರಂಪರೆ ಇರಲಿಲ್ಲವೆಂದು ಕೆಲವರು ತರ್ಕಿಸುತ್ತಾರೆ. ಇದು ನಿಜವಿರಬಹುದು. ಆದರೂ ಆ ಕಾರಣದಿಂದ `ಇತಿಹಾಸ ರಚನಾಪೂರ್ವ` ಭಾರತ ಜಡ್ಡುಗಟ್ಟಲಿಲ್ಲ. ಕಾಲಕಾಲಕ್ಕೆ ಸಂಘರ್ಷಗಳೂ ಸುಧಾರಣೆಗಳೂ ನಡೆಯುತ್ತಲೇ ಬಂದವು.
ಆದರ್ಶಗಳು ಸಮುದಾಯಗಳಿಗೆ ಚಾಲನೆಯನ್ನು ನೀಡುತ್ತಲೇ ಬಂದವು. ಹಿಂದೊಮ್ಮೆ ಈ ನೆಲದ ತಮ್ಮ ಆಳ್ವಿಕೆಯನ್ನು ಬರ್ಬರ ಶಕ್ತಿಗಳ ಹಲ್ಲೆಯಿಂದ ಕಳೆದುಕೊಂಡೆವೆಂಬ ವೇದನಾಪೂರ್ವಕ ಸ್ಮರಣೆಯ ನೆಳಲಿನಲ್ಲಿರುವ ಅಲೆಮಾರಿ ಸಮುದಾಯಗಳೂ ಮುಂದೊಂದು ದಿನ ಕಳೆದುಕೊಂಡದ್ದನ್ನು ಮತ್ತೆ ಪಡೆದುಕೊಳ್ಳುವೆವೆಂಬ ನಂಬುಗೆಯಿಂದ ಇನ್ನೂ ಬಾಳುತ್ತಿವೆ.
ವಸ್ತುನಿಷ್ಠತೆ ಇತಿಹಾಸಕಾರ ತನಗೆ ತಾನೇ ಹಾಕಿಕೊಂಡ ಶಿಸ್ತು. ಆದರೆ ವ್ಯಕ್ತಿನಿಷ್ಠ ಆದರ್ಶಗಳೊಂದಿಗೆ ಬದುಕುವುದು ಸಮುದಾಯಗಳು ತಮಗೆ ತಾವೇ ಕೊಟ್ಟುಕೊಂಡ ಸ್ವಾತಂತ್ರ್ಯ.
ಆದ್ದರಿಂದಲೇ ಕಲ್ಪನಾಜನ್ಯವಾದ ಕಾವ್ಯ ಕಲೆಗಳು ನಮ್ಮ ಜೀವದ ಗೆಳೆಯರಾಗಿರುವುದು. ಅಕ್ತೇವಯೋ ಪಾಜ್ ಹೇಳುತ್ತಾನೆ: `ಇತಿಹಾಸವಿಲ್ಲದೆ ಕಾವ್ಯವಿಲ್ಲ. ಆದರೆ ಇತಿಹಾಸ ಕಾವ್ಯವಲ್ಲ.` ಒಂದು ಅರ್ಥದಲ್ಲಿ ಕಾವ್ಯಾತ್ಮಕ ಪ್ರಕ್ರಿಯೆಗಳು ಇತಿಹಾಸದ ನಿರಾಕರಣೆಗಳೂ ಆಗಿರುತ್ತವೆ.
ಈ ಕಾರಣದಿಂದಲೇ ಜೀವಗಳ ಮರ್ತ್ಯಲೋಕ ಕರ್ತಾರನ ಕಮ್ಮಟವಾಗಿರುವುದು. ಹಾಗೆ ನೋಡಿದರೆ ಮಾನವ ಕಲ್ಪನೆಯನ್ನು ಕಲಕುವ, ಕೆಣಕುವ ಅವೆಷ್ಟೋ ಪಾತ್ರಗಳು, ಘಟನೆಗಳು, ಸಂಗತಿಗಳು ಚಾರಿತ್ರಿಕವಲ್ಲವೇ ಅಲ್ಲ. ಬಹುಶಃ ಅವು ಯೂಂಗ್ ಹೇಳಿದ ಹಾಗೆ ಸಾಮುದಾಯಿಕ ಸುಪ್ತಮನಸ್ಸಿನ ಮೂಲಮಾದರಿಗಳು. ಪಾಂಡವರು, ಕೌರವರು, ಗ್ರೀಕರು, ಟ್ರೋಜನ್ನರು,ಕೋವಲ, ಕಣ್ಣಗಿ-ಇವರೆಲ್ಲಾ ಯಾರು? ಇದೇ ಅರ್ಥದಲ್ಲಿ ಜಾರ್ಜಸಂಟಾಯನ ಧಾರ್ಮಿಕ ಅಭಿವ್ಯಕ್ತಿಗಳಾದ ದೇವತೆಗಳನ್ನು ಕಾವ್ಯದ ಉಪಮೆಗಳಿಗೆ ಹೋಲಿಸಿದ.
ವಾದಕ್ಕೋಸ್ಕರ ಒಂದು ವಾದವನ್ನು ಮಂಡಿಸೋಣ. ನಾಳೆ ಒಬ್ಬ ಚರಿತ್ರಕಾರ ಬುದ್ಧ ಒಬ್ಬ ಐತಿಹಾಸಿಕ ವ್ಯಕ್ತಿಯಲ್ಲ ಎಂದು ಸಾಕ್ಷ್ಯಾಧಾರ ಸಮೇತ ಸಾಧಿಸಿದ ಅಂದುಕೊಳ್ಳಿ.
ಹಾಗೆಂದ ಮಾತ್ರಕ್ಕೆ ಬೌದ್ಧ ಧರ್ಮದ ಪ್ರಭಾವ ಮುಗಿದುಹೋಗುತ್ತದೆಯೆ? ಹಾಗೆ ನೋಡಿದರೆ ಮಹಾಯಾನ ಬೌದ್ಧ ಪಂಥಗಳು ಆರಾಧಿಸುತ್ತಾ ಬಂದಿರುವುದು ಗತದ ಬುದ್ಧನನ್ನ್ಲ್ಲಲ, ಬೋಧಿಸತ್ವನನ್ನು, ಭವಿಷ್ಯದ ಬುದ್ಧನನ್ನು, ಆಗಿ ಹೋದದ್ದನ್ನಲ್ಲ, ಆಗಬೇಕಾದುದನ್ನು.
ಯಾಕೆಂದರೆ ಬೋಧಿಸತ್ವನಷ್ಟು ಉದಾರವಾಗಿ ನರಜೀವಿಗಳು ವಾಸ್ತವದಲ್ಲಿ ನಡೆದುಕೊಳ್ಳುವುದು ಸಾಧ್ಯವೇ ಇಲ್ಲ. ಹುಲಿಯೊಂದು ಹಸಿದಿರುವುದನ್ನು ಕಂಡು ತನ್ನನ್ನು ತಾನೇ ಅದರ ಆಹಾರವಾಗಿ ಅರ್ಪಿಸಿಕೊಂಡ ಬೋಧಿಸತ್ವನ ಮಹಾ ಕರುಣೆ ಆದರ್ಶವೊಂದರ ಅತಿಶಯೋಕ್ತಿಯೇ ಹೊರತು ವಾಸ್ತವದ ಸಹಜೋಕ್ತಿಯಲ್ಲ.
ಹಾಗೆಂದರೆ ಚಾರಿತ್ರಿಕವಾದರೂ ಅದಕ್ಕಿಂತ ಹೆಚ್ಚಾಗಿ ಆದರ್ಶವಾದಿ ಮಾನವೀಯ ಸಂಕೇತವನ್ನಾಗಿ, ಸಾಧ್ಯತೆಯನ್ನಾಗಿ ಬಸವಣ್ಣನವರನ್ನು ನೋಡಬಹುದೆ?
ನೋಡಬಹುದು. ಆದರೆ ಇಲ್ಲಿಯೂ ಕೆಲವು ತೊಡಕುಗಳಿವೆ. ಬಸವಣ್ಣನವರನ್ನು ಬೇರೆ ಬೇರೆ ಕಥನಕಾರರು, ಇತಿಹಾಸಕಾರರು ಪರಸ್ಪರ ವಿರೋಧಿ ನಿಲುವುಗಳಲ್ಲಿಟ್ಟು ಬೇರೆಬೇರೆಯೇ ಆದ ಚಿತ್ರಣಗಳನ್ನು ನೀಡುತ್ತಾರೆ. ಹರಿಹರನಲ್ಲಿ ಕಾಣುವ ಬಸವಣ್ಣ ಶಿವಭಕ್ತಿಯ ಪರಾಕಾಷ್ಠೆ.
ಬಿಜ್ಜಳನನ್ನು ಜೈನನೆಂದು ತಪ್ಪು ತಿಳಿದು ಅವನನ್ನು ಮೆರೆಸಲು ಹೋಗಿ ಬಸವಣ್ಣನವರ ಪಾತ್ರಕ್ಕೆ ಕುಂದು ತಂದಿರುವ `ಬಿಜ್ಜಳರಾಯ ಪುರಾಣ`ದ ದೃಷ್ಟಿಯೇ ಬೇರೆ. ಪಿ.ಕೆ. ರಾಜಶೇಖರ ಅವರು ಸಂಪಾದಿಸಿರುವ ಮೈಸೂರುಸೀಮೆಯ ಜಾನಪದ ಬಸವ ಪುರಾಣದ ತುಣುಕುಗಳಲ್ಲಿರುವ ಬಸವಣ್ಣ ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳ ಹೊರೆಯನ್ನು ಮಡಿವಾಳ ಮಾಚಿದೇವರಿಗೆ ಇತ್ತು ವಿರಮಿಸುತ್ತಾನೆ.
`ಶೂನ್ಯ ಸಂಪಾದನೆ`ಯ ವಿವಿಧ ಪಾಠಗಳಲ್ಲಿ ಅದೇ ರೀತಿ ಮಂಟೇಸ್ವಾಮಿ ಮುಂತಾದ ಜನಪದ ಕಥನಗಳಲ್ಲಿ ಅಲ್ಲಮಪ್ರಭುವಿನ ಅಥವಾ ಆ ಸ್ವರೂಪದ ಗುರುವಿನ ಶಿಷ್ಯನಾಗಿ ಚಿತ್ರಿತವಾಗಿದ್ದಾನೆ. ಅಷ್ಟೇ ಅಲ್ಲದೆ, ಆಧುನಿಕ ಯುಗದಲ್ಲಿ ಬಿ. ಪುಟ್ಟಸ್ವಾಮಯ್ಯ, ಅನಕೃ, ತ.ರಾ.ಸು., ಬಸವರಾಜ ಕಟ್ಟೀಮನಿ ಮುಂತಾದ ಕಾದಂಬರಿಕಾರರರು, ಬೆಳ್ಳಾವೆ ನರಹರಿಶಾಸ್ತ್ರಿಗಳಂಥ ನಾಟಕಕಾರರು ಒಂದು ರೀತಿಯಲ್ಲಿ ಗಾಂಧಿವಾದಿ ಅನ್ನಬಹುದಾದ ಬಸವಣ್ಣನನ್ನು ತಂದಿದ್ದಾರೆ.
ಈ ಚಿತ್ರಣಗಳಿಗಿಂತ ಭಿನ್ನವಾಗಿ ಹೆಚ್ಚು ಸಂಕೀರ್ಣವಾಗಿರುವ ಬಸವಣ್ಣನನ್ನು ಲಂಕೇಶ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮುಂತಾದ ನಾಟಕಕಾರರರು ರೂಪಿಸಿದ್ದಾರೆ. ಸೃಜನಶೀಲ ಮೂಸೆಯಲ್ಲಿ ಮೂಡಿರುವ ಬಸವಣ್ಣನವರ ಚಿತ್ರಣಗಳಷ್ಟೇ ವೈವಿಧ್ಯಮಯವಾಗಿವೆ ಬಸವಣ್ಣನವರ ವೈಚಾರಿಕ ಚಿತ್ರಣಗಳು.
ಎಂ.ಆರ್.ಶ್ರೀ, ಕಪಟರಾಳ ಕೃಷ್ಣರಾವ್, ರಂ.ರಾ. ದಿವಾಕರ ಮುಂತಾದವರು ಆ ನಂತರ ಪ್ರೊ. ಚಿದಾನಂದಮೂರ್ತಿ ಅವರು ಬಸವಣ್ಣನನ್ನು ಹಿಂದೂಧರ್ಮದ ಮುಂದುವರಿಕೆಯಾಗಿ ಕಂಡರೆ ಪ್ರೊ.ಕಲ್ಬುರ್ಗಿ ಮುಂತಾದವರು ಬಸವಣ್ಣನವರ ಸ್ವತಂತ್ರ ಸುಧಾರಣಾವಾದೀ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ.
ಮ.ನ.ಜ ಅವರಂಥ ವಿದ್ವಾಂಸರು ಬಸವಣ್ಣನವರ ದಲಿತ ಹಿನ್ನೆಲೆಗಳಿಗೆ ಒತ್ತು ಕೊಟ್ಟಿದ್ದಾರೆ. ಇವೆಲ್ಲಕ್ಕೂ ಮೊದಲು ವಚನ ವಾಙ್ಮಯದಲ್ಲೇ ಬಸವಣ್ಣನವರ ವಿಭಿನ್ನ ಚಿತ್ರಣಗಳಿವೆ. ಜನಪದ ಮೂಲಗಳಲ್ಲಿ ಬಸವಣ್ಣನವರನ್ನು ಒಂದು ಪಾವಿತ್ರ್ಯದ ಸಂಕೇತವನ್ನಾಗಿ ಸವಾಲನ್ನಾಗಿ ನೋಡಿದ್ದಾರೆ. ಉತ್ತರಭಾರತದ ಸಂತ ಪರಂಪರೆ ಗೋರಖನಾಥನನ್ನು ನೋಡಿದ ಹಾಗೆ, ಆಧುನಿಕರು, ನವ್ಯರು ಬಸವಣ್ಣನವರ ವ್ಯಕ್ತಿತ್ವದ ಸಂಕೀರ್ಣ ಮಾನವೀಯ, ಸಮಾಜ ಶಾಸ್ತ್ರೀಯ ಆಯಾಮಗಳನ್ನು ತೆರೆದಿದ್ದಾರೆ.
ಇಷ್ಟೊಂದು ಬಸವಣ್ಣನವರಲ್ಲಿ ನಮ್ಮ ಬಸವಣ್ಣ ಯಾರು? ಬಸವಣ್ಣನವರ ಕುಲ-ಜಾತಿಗಳ ತನಿಖೆ ತನಿಖೆದಾರರಿಗೆ ಎಷ್ಟು ಮುಖ್ಯವಾದರೂ ನಮಗೆ ಮುಖ್ಯವಲ್ಲ. ಅಥವಾ ಐತಿಹಾಸಿಕ ಸಂಶೋಧನೆ ಎಷ್ಟು ಮುಖ್ಯವಾದರೂ ಬಸವಣ್ಣನೆಂಬ ಆದರ್ಶವನ್ನು ಆ ಐತಿಹಾಸಿಕ ತೀರ್ಪುಗಳಿಗೆ ಇಳಿಸುವ ಮಾರ್ಗವೂ ಸಂಕುಚಿತವಾದುದು. ಬ
ಸವಣ್ಣನವರನ್ನು ಒಂದು ಸರಳತತ್ವದ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುವ ಧಾರ್ಮಿಕ ದೃಷ್ಟಿಗಳೂ ಅಷ್ಟೆ. ಹಾಗಿದ್ದರೆ ನಮ್ಮ ಬಸವಣ್ಣ ಯಾರು? ಬಸವಣ್ಣನವರನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುವುದು?
ಬಸವಣ್ಣನವರು ಕೂಡಲಸಂಗಮನನ್ನು ಹೇಗೆ ಅರ್ಥಮಾಡಿಕೊಂಡರು? ಒಂದು ತೀರ್ಮಾನವಾಗಿರುವ ವಿಷಯವಾಗಿ ಅಲ್ಲ. ಸ್ವಾನುಭವದ, ಆತ್ಮಶೋಧನೆಯ, ಆತಂಕದ, ಅನುಮಾನಗಳ, ತಲ್ಲಣದ, ಆರ್ದ್ರವಾದ, ಉತ್ಕಟವಾದ ಭಾವ-ಭಾಷೆಗಳ ಮೂಲಕ. ಇತರ ಬಸವಕಾಲೀನ ವಚನಕಾರರೂ ಹೀಗೇ ಬಸವಣ್ಣನವರನ್ನು ಅರ್ಥಮಾಡಿಕೊಂಡರು.
ವಚನಕಾರರಲ್ಲಿ ಆಗಲೇ ಇದ್ದ ಈ ಪ್ರವೃತ್ತಿ ಇನ್ನೊಂದು ಬಗೆಯಲ್ಲಿ ನವ್ಯ, ದಲಿತ ಮತ್ತು ನವ್ಯೋತ್ತರ ಸಾಹಿತ್ಯಿಕ ಚಿತ್ರಣಗಳಲ್ಲಿ ಮುಂದುವರಿದಿದೆ. ಈ ಹಾದಿಯಲ್ಲಿ ಕ್ರಮಿಸಿದಾಗ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವಷ್ಟೇ ಮುಖ್ಯವಾಗುತ್ತದೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳುವ ಬಗೆ.
ಹಾಗೆಯೇ ನಮ್ಮ ಉದ್ದಿಶ್ಯಗಳ ಬಗೆಗಿನ ಸ್ಪಷ್ಟತೆ. ಬಸವಣ್ಣನವರ ಸಮಕಾಲೀನ ವಚನಕಾರರು ಹೀಗೆಯೇ ಅರ್ಥಮಾಡಿಕೊಂಡರೆಂದು ತೋರುತ್ತದೆ. ಆ ಹಿರೀಕರ ಹಾದಿಯನ್ನು ಹಿಡಿದು ನಾವೂ ನಮ್ಮ ಬಸವಣ್ಣನನ್ನು ಕಂಡುಕೊಳ್ಳುವ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ.
Total Pageviews
Tuesday, September 20, 2011
ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿಯ ಗರಿ
ಕನ್ನಡದ ಹಿರಿಯ ಕವಿ, ನಾಟಕಕಾರ ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರ ಸಮಗ್ರ ಸಾಹಿತ್ಯಕ್ಕೆ ಈ ಗೌರವ ನೀಡಲಾಗಿದೆ. ಸರಿ ಸುಮಾರು ದಶಕದ ನಂತರ ಕಂಬಾರ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಕಿರೀಟ ದೊರೆತಿದೆ. ಕನ್ನಡದಲ್ಲಿ ಜ್ಞಾನಪೀಠ ಪಡೆದವರ ಸಂಖ್ಯೆ ಎಂಟಕ್ಕೇರಿದೆ.
ಜನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ತಂದ ಇವರು ಕೇವಲ ಕವಿ ಮಾತ್ರವಲ್ಲ ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಜಾನಪದ ತಜ್ಞ.
ಮುಖ್ಯವಾಗಿ ಕವಿ, ನಾಟಕಕಾರರಾಗಿ ಇವರು ಜನಪ್ರಿಯರು. ಇವರು ಬರೆದ ಕೃತಿಗಳು ಹಲವು ಹತ್ತು. ಅದರಲ್ಲಿ ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿ ಮೀನು ಮುಖ್ಯ ಕವನಸಂಕಲನಗಳು. ಜೋಕುಮಾರಸ್ವಾಮಿ ಇವರ ಸುಪ್ರಸಿದ್ಧ ನಾಟಕ. ಅಲ್ಲದೆ ಋಷ್ಯಶೃಂಗ, ಕಾಡುಕುದುರೆ, ಹರಕೆಯ ಕುರಿ, ಅಂಗಿ ಮ್ಯಾಲಂಗಿ, ಬೆಪ್ಪುತಕ್ಕಡಿ ಬೋಳೆ, ಸಿರಿ ಸಂಪಿಗೆ, ಶಿಖರ ಸೂರ್ಯ ಇವರ ಇನ್ನಿತರ ಮುಖ್ಯ ನಾಟಕಗಳು.
ಕಾದಂಬರಿಕಾರರಾಗಿಯೂ ಹೆಸರು ಮಾಡಿರುವ ಇವರು ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಗಳನ್ನು ಬರೆದಿದ್ದಾರೆ.
ತಮ್ಮ ಸಿರಿ ಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ. ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ಕನ್ನಡದಲ್ಲಿ ಕುವೆಂಪು, ದ.ರಾ. ಬೇಂದ್ರೆ, ಶಿವರಾಮಕಾರಂತ, ಮಾಸ್ತಿವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತ್ತು. ಇದೀಗ ಕಂಬಾರರೂ ಕೂಡ ಈ ಸಾಲಿಗೆ ಸೇರಿದಂತಾಗಿದೆ.

Monday, September 5, 2011
ರಾಳೇಗಣ ಸಿದ್ಧಿ ಮತ್ತು ರಾಮಲೀಲಾ ಮೈದಾನ
ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿರುವ ಸಂಬಂಧಿಕರೊಬ್ಬರು ನನಗೆ ಪೋನ್ ಮಾಡಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನಸಾರೆ ಶಾಪ ಹಾಕುತ್ತಿದ್ದರು (ಸದ್ಯಕ್ಕೆ ಅವರ ಹೆಸರು ರಾಂಪಣ್ಣ ಎಂದಿಟ್ಟುಕೊಳ್ಳೋಣ). ಕಳೆದ ವಾರದ ನನ್ನ ಅಂಕಣವನ್ನು ಓದಿದ್ದ ರಾಂಪಣ್ಣ `ನಾವು ನಮ್ಮ ಮಕ್ಕಳಿಂದ ಬೀದಿಗೆ ಬಿದ್ದಿರುವಂತೆ, ಆ ಮನಮೋಹನ್‌ಸಿಂಗ್ ತಮ್ಮ `ಮಕ್ಕಳಿಂದ` ಬೀದಿಗೆ ಬೀಳಬೇಕು. ಸರಿಯಾಗಿಯೇ ಬರೆದಿದ್ದೀರಿ` ಎಂದು ಸಿಟ್ಟು ಕಾರಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಕೃಷಿಕರಾಗಿರುವ ರಾಂಪಣ್ಣನವರಿಗೆ ಈಗ ಸುಮಾರು 70 ವರ್ಷ. ತನ್ನ ಯೌವ್ವನದ ದಿನಗಳಲ್ಲಿ ಯುವಕ ಸಂಘ ಕಟ್ಟಿ ಊರಿಗೆ ರಸ್ತೆ, ಕುಡಿಯುವ ನೀರು, ಶಾಲೆ ಬರಲು ಕಾರಣರಾದವರು ಅವರು. ಬಹಳ ಕಷ್ಟದಲ್ಲಿಯೇ ಹೊಟ್ಟೆಬಟ್ಟೆ ಕಟ್ಟಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸಿದ್ದಾರೆ. ಹಿರಿಯ ಮಗ ಮುಂಬೈನಲ್ಲಿದ್ದಾನೆ, ಕಿರಿಯವನು ದೆಹಲಿಯಲ್ಲಿದ್ದಾನೆ ಮತ್ತು ಮಗಳು ಅಮೆರಿಕಾದಲ್ಲಿದ್ದಾಳೆ. ಎಲ್ಲರಿಗೂ ಅವರದ್ದೇ ಆಗಿರುವ ಸಂಸಾರ ಇದೆ. ಈಗ ಇರುವ ಪಟ್ಟಣಗಳಲ್ಲಿಯೇ ನೆಲೆ ಊರಿದ್ದಾರೆ.
ಎರಡು ವರ್ಷಗಳ ಹಿಂದೆ ಮಕ್ಕಳೆಲ್ಲ ಕೂಡಿ ತಂದೆ-ತಾಯಿಗೆ ದೊಡ್ಡ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಣಕ್ಕೇನೂ ಕೊರತೆ ಇಲ್ಲ, ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮಕ್ಕಳು ತಪ್ಪದೆ ಹಣ ತುಂಬುತ್ತಾರೆ. ಆದರೇನು ಫಲ? ರಾಂಪಣ್ಣನಿಗೆ ವೃದ್ಧಾಪ್ಯಸಹಜ ಕಾಯಿಲೆಗಳೆಲ್ಲ ಇವೆ. ಹೆಂಡತಿ ಮಂಡಿನೋವಿನಿಂದಾಗಿ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ, ಎಲ್ಲದ್ದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕಾದ ದಯನೀಯ ಸ್ಥಿತಿ.
ಎಲ್ಲವೂ ಇದೆ. `ಹೇಗಿದ್ದೀರಿ ಅಪ್ಪಾ, ಅಮ್ಮಾ?` ಎಂದು ಪಕ್ಕದಲ್ಲಿ ಕುಳಿತು ಕೇಳುವವರೇ ಇಲ್ಲ. ವರ್ಷಗಳ ಹಿಂದೆ ತಮ್ಮ ಬುದ್ಧಿವಂತ ಮಕ್ಕಳ ಬಗ್ಗೆ ಹೆಮ್ಮೆಯಿಂದ ಬಾಯ್ತುಂಬ ಮಾತನಾಡುತ್ತಿದ್ದ ರಾಂಪಣ್ಣ ಈಗ ಅವರ ಹೆಸರೆತ್ತಿದರೆ ಸಿಡಿಯುತ್ತಾರೆ. `ಮುಪ್ಪಿನ ಕಾಲದಲ್ಲಿ ನಮ್ಮನ್ನು ಬೀದಿಗೆ ಹಾಕಿದ ಮಕ್ಕಳು ಇದ್ದರೇನು, ಬಿಟ್ಟರೇನು` ಎಂದು ಕೇಳುತ್ತಿದ್ದಾರೆ. `ನನ್ನದೇ ತಪ್ಪು, ಸುಮ್ಮನೆ ಒಂದು ಡಿಗ್ರಿ ಓದಿಸಿದ್ದರೆ ಇಲ್ಲಿಯೇ ಯಾವುದಾದರೂ ಬ್ಯಾಂಕಿನಲ್ಲೋ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಬಳಿ ಇರುತ್ತಿದ್ದರು. ಏನೂ ಓದಿಸದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇಲ್ಲಿಯೇ ಕೃಷಿ ಮಾಡಿಕೊಂಡು ಬಿದ್ದಿರುತ್ತಿದ್ದರು. ಅದೇನೋ ಐಟಿ-ಬಿಟಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಈ ಕೃಷಿ ನಂಬಿ ಅವರು ಹಾಳಾಗುವುದು ಬೇಡ ಎಂದು ಎಂಜಿನಿಯರಿಂಗ್ ಓದಿಸಿ ಕೆಟ್ಟೆ. ಇವೆಲ್ಲವೂ ಮನಮೋಹನ್‌ಸಿಂಗ್ ಮಾಡಿದ ಅವಾಂತರ, ಆರ್ಥಿಕ ಉದಾರೀಕರಣ ನಡೆಯದೆ ಹೋಗಿದ್ದರೆ ನಾವು ಆಮಿಷಗೊಳಗಾಗುತ್ತಿರಲಿಲ್ಲ` ಎಂದು ಹೇಳುತ್ತಿದ್ದಾಗ ಅವರ ಗಂಟಲು ಕಟ್ಟಿತ್ತು.
ಅವರ ಸಂಕಟಕ್ಕೆ ಇನ್ನೊಂದು ಕಾರಣ ಇತ್ತು. ಸಾಮಾನ್ಯವಾಗಿ ಚೌತಿ-ಅಷ್ಟಮಿಗೆ ಊರಿಗೆ ಬರುತ್ತಿದ್ದ ಮಕ್ಕಳು ಈ ಬಾರಿ ಬಂದಿಲ್ಲ. `ರಜೆಗಳೆಲ್ಲ ಅಣ್ಣಾ ಹಜಾರೆ ಚಳವಳಿಯಲ್ಲಿ ಕಳೆದು ಹೋಯಿತು, ಮುಂದಿನ ಬಾರಿ ಬರುತ್ತೇವೆ` ಎಂದು ಅಮ್ಮನಿಗೆ ಪೋನ್ ಮಾಡಿದ್ದರಂತೆ. `ಅಷ್ಟೊಂದು ದೇಶಪ್ರೇಮ ಇದ್ದರೆ ಇಲ್ಲಿಯೇ ಬಂದು ಏನಾದರೂ ಉದ್ಯೋಗ-ಉದ್ಯಮ ಮಾಡಬಹುದಲ್ಲ, ದೆಹಲಿ-ಮುಂಬೈ ಎಂದು ಯಾಕೆ ಕುಣಿದಾಡುತ್ತಿದ್ದಾರೆ? ತಂದೆ-ತಾಯಿ ಮೇಲೆ, ಊರಿನ ಮೇಲೆ ಇಲ್ಲದ ಪ್ರೀತಿ ದೇಶದ ಮೇಲೆ ಏನು ಇರುತ್ತದೆ? ಎಲ್ಲ ಢೋಂಗಿ`-ಮಕ್ಕಳಿಗೆ ಹೇಳಲಾಗದ್ದನ್ನು ರಾಂಪಣ್ಣ ನನ್ನೊಡನೆ ಹೇಳಿ ಕೋಪ ತೀರಿಸಿಕೊಂಡರು.
ಅವರ ಹೊಟ್ಟೆ ಉರಿ ಹೆಚ್ಚಿಸಿರುವುದು ನೆರೆಯಲ್ಲಿಯೇ ಇನ್ನೊಂದು ರೈತ ಕುಟುಂಬ. ಆ ಕುಟುಂಬದ ಯಜಮಾನನಿಗೂ ಮೂವರು ಮಕ್ಕಳು. ಅವರಲ್ಲಿ ಯಾರಿಗೂ ಶಿಕ್ಷಣ ತಲೆಗೆ ಹತ್ತಿಲ್ಲ. ಒಬ್ಬ ಮಗ ಊರಲ್ಲಿಯೇ ಇದ್ದು ಗದ್ದೆ-ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಆಟೋರಿಕ್ಷಾ ಓಡಿಸುತ್ತಿದ್ದಾನೆ. ಊರಿನ ಯುವಕ ಸಂಘಕ್ಕೆ ಈಗ ಅವನೇ ಅಧ್ಯಕ್ಷ. ಮಗಳು ಸಮೀಪದ ಊರಿನ ರೈತನನ್ನೇ ಮದುವೆಯಾಗಿದ್ದಾಳೆ. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳ ಗೌಜಿ-ಗದ್ದಲ. ಮೂರೂ ಹೊತ್ತು ದುಡ್ಡಿಗಾಗಿ ಕಿತ್ತಾಟ, ತಂದೆ-ಮಕ್ಕಳ ಬಡಿದಾಟ, ಅತ್ತೆ-ಸೊಸೆಯರ ಕಾದಾಟ ಎಲ್ಲವೂ ನಡೆಯುತ್ತಿವೆ. ಅವರೆಲ್ಲರೂ ಬಂದು ರಾಂಪಣ್ಣನವರ ಬಳಿ ದೂರು ಹೇಳುತ್ತಿರುತ್ತಾರೆ. ಇದನ್ನೆಲ್ಲ ಕೇಳಿಕೇಳಿ ರಾಂಪಣ್ಣ ಇನ್ನಷ್ಟು ಖಿನ್ನರಾಗುತ್ತಾರೆ. ಅವರಿಗಾಗಿ ಅಲ್ಲ, ತಮಗಾಗಿ. `ನಮ್ಮ ಸ್ಮಶಾನದಂತಹ ಮನೆಗಿಂತ ಆ ಜಗಳದ ಮನೆಯೇ ವಾಸಿ ಅಲ್ಲವೇ?` ಎಂದು ಅವರು ಕೇಳುತ್ತಿದ್ದರು.
ಬೇರೆ ಊರುಗಳಲ್ಲಿ ಇಂತಹ ಕುಟುಂಬಗಳ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಕ್ಕೆ ಹೋದರೆ ಈ ರೀತಿ ಮಕ್ಕಳನ್ನೇ ಶಪಿಸುತ್ತಾ ಕೂತಿರುವ ನೂರಾರು ತಂದೆ-ತಾಯಿಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಬಡತನ, ಅಂಧಶ್ರದ್ಧೆ, ಅನಾನುಕೂಲತೆಗಳ ನಡುವೆಯೂ ಜೀವಂತವಾಗಿದ್ದ ಹಳ್ಳಿಗಳು ಈಗ ಬಯಲು ವೃದ್ಧಾಶ್ರಮದಂತೆ ಕಾಣುತ್ತಿವೆ. ವರ್ಷಕ್ಕೊಮ್ಮೆಯೋ, ಎರಡು ವರ್ಷಗಳಿಗೊಮ್ಮೆಯೋ ವಾರದ ರಜೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಬಂದಾಗ ಗಿಜಿಗುಡುತ್ತಿರುವ ಮನೆಗಳು ಅವರ ನಿರ್ಗಮನದೊಂದಿಗೆ ಮತ್ತೆ ಭಣಗುಡುತ್ತವೆ. ವರ್ಷಕ್ಕೆ ಎರಡರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುತ್ತಿರುವ ಇಂದಿನ ನವ ಮಧ್ಯಮ ವರ್ಗದ ಸದಸ್ಯರು ಇವರು. ಉದ್ಯೋಗವನ್ನರಸಿಕೊಂಡು ಹಳ್ಳಿ ತೊರೆದು ಪಟ್ಟಣ ಸೇರಿದವರು. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದು ಇದೇ ವರ್ಗ.
ಶ್ರಿಮಂತರು ಮತ್ತು ಬಡವರ ಬಗ್ಗೆ ನಡೆದಷ್ಟು ಚರ್ಚೆ ಮಧ್ಯಮವರ್ಗದ ಬಗ್ಗೆ ನಮ್ಮಲ್ಲಿ ನಡೆದಿಲ್ಲ. ಅವರೊಂದು ರೀತಿಯಲ್ಲಿ ಮುಖ ಇಲ್ಲದ, ದನಿ ಇಲ್ಲದ, ಧೈರ್ಯವೂ ಇಲ್ಲದ ವಿಚಿತ್ರ ಜನವರ್ಗ ಎಂದೇ ಅವರನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ಅಣ್ಣಾ ಚಳವಳಿಯ ನಂತರ ಈ ಮಧ್ಯಮ ವರ್ಗ ಮುಖ ಎತ್ತಿ, ದನಿ ಎತ್ತರಿಸಿ ಮಾತನಾಡತೊಡಗಿರುವ ಕಾರಣದಿಂದಾಗಿಯೇ ಅವರ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಮಧ್ಯಮ ವರ್ಗ ಎಂದಾಕ್ಷಣ ನಮ್ಮಲ್ಲಿ ಬಹಳಷ್ಟು ಮಂದಿ ಅದನ್ನು ಮೇಲ್ಜಾತಿ ಜತೆ ಸಮೀಕರಿಸುತ್ತಾರೆ. ನಾನು ಗೌರವಿಸುವ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿಯವರು ಕಳೆದ ವಾರದ ನನ್ನ ಅಂಕಣಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿಯೂ ಎಲ್ಲೋ ಈ ಅಭಿಪ್ರಾಯ ಇದೆ. ಆದರೆ ನನ್ನ ಅಭಿಪ್ರಾಯ ಅದಾಗಿರಲಿಲ್ಲ. ಈ ಐದು ಕೋಟಿ ಜನಸಂಖ್ಯೆಯ ಮಧ್ಯಮವರ್ಗ ಇದೆಯಲ್ಲಾ, ಇದೊಂದು ಬೇರೆಯೇ ಜಾತಿ. ಇದರಲ್ಲಿರುವವರು ಮನು ಮಹಾಶಯ ಸೃಷ್ಟಿಸಿದ್ದ ವರ್ಣಾಶ್ರಮ ವ್ಯವಸ್ಥೆಯಲ್ಲಿರುವ ಜಾತಿಗಳಿಗೆ ಸೇರಿದವರಲ್ಲ. ಇವರೆಲ್ಲ ಆರ್ಥಿಕ ಉದಾರೀಕರಣ ಸೃಷ್ಟಿಸಿದ ಆಧುನಿಕ `ವರ್ಣಾಶ್ರಮ ವ್ಯವಸ್ಥೆ`ಯಲ್ಲಿನ ಜಾತಿಗಳಿಗೆ ಸೇರಿದವರು. ಇವರು ಮೇಲ್ಜಾತಿ ಕುಟುಂಬಗಳಲ್ಲಿ ಮಾತ್ರವಲ್ಲ, ಕೆಳಜಾತಿ ಕುಟುಂಬಗಳಲ್ಲಿಯೂ ಇದ್ದಾರೆ, ಬ್ರಾಹ್ಮಣ-ಅಬ್ರಾಹ್ಮಣ ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಎಲ್ಲರ ಮನೆಯಲ್ಲಿಯೂ ಇದ್ದಾರೆ. `ನಾವೆಲ್ಲ ಭಾಷೆಗಾಗಿ, ನೀರಿಗಾಗಿ, ಭೂಮಿಗಾಗಿ ನಡೆಸುತ್ತಿದ್ದ ಚಳವಳಿಯ ಕಾಲದಲ್ಲಿ ಅತ್ತ ಸುಳಿಯದ ನನ್ನ ಮಗಳು ಮೊನ್ನೆ ಫ್ರೀಡಮ್ ಪಾರ್ಕ್‌ಗೆ ಹೋಗಿ ಕೂತಿದ್ದಳು` ಎಂದು ಇತ್ತೀಚೆಗೆ ಸಿಕ್ಕ ಹಿರಿಯ ಹೋರಾಟಗಾರರೊಬ್ಬರು ವಿಷಾದದಿಂದ ಹೇಳುತ್ತಿದ್ದರು. `ನಮ್ಮ ಜತೆ ಗುರುತಿಸಿಕೊಳ್ಳಲು ಏನೋ ಕೀಳರಿಮೆ, ಫ್ರೀಡಮ್‌ಪಾರ್ಕ್‌ನಲ್ಲಿ ಹೋಗಿ ಕೂತರೆ ಸಿಗುವ ಸಾಮಾಜಿಕ ಮಾನ್ಯತೆಯೇ ಬೇರೆ ಎನ್ನುವುದು ಅವಳಿಗೆ ತಿಳಿದಿದೆ` ಎನ್ನುತ್ತಿದ್ದರು ಅವರು.
`ಅಣ್ಣಾ ಚಳವಳಿ ನವ ಮಧ್ಯಮವರ್ಗದ ಅಂತರಾತ್ಮವನ್ನು ಬಡಿದೆಬ್ಬಿಸಿದೆ, ಅವರು ಜಾಗೃತರಾಗಿದ್ದಾರೆ, ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ` ಎಂದೆಲ್ಲ ಹೇಳಲಾಗುತ್ತಿದೆ. ನಿಜವಾಗಿಯೂ ಅಂತಹ ಪರಿವರ್ತನೆ ನಡೆದಿದ್ದರೆ ಅದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸೋಣ. ಆದರೆ ನಾವು ಇಲ್ಲಿಯವರೆಗೆ ಈ ವರ್ಗದಲ್ಲಿ ಕಂಡ ಹೆಚ್ಚಿನವರು ಅತೀ ಎನಿಸುವಷ್ಟು ಭೌತಿಕವಾದಿಗಳು, ಸ್ವಾರ್ಥಿಗಳು ಮತ್ತು ಆಳದಲ್ಲಿ ಆತ್ಮವಂಚಕರಾಗಿರುವವರು. ಬದುಕು ಎಂದರೆ ತನ್ನ ಮನೆ, ಮಡದಿ, ಮಕ್ಕಳು ಅಷ್ಟೆ. ಅದರಾಚೆಗೆ ಇರುವ ಸಮಾಜದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಇವರಿಗೆ ತಂದೆ-ತಾಯಿಯನ್ನು ನೋಡಿಕೊಳ್ಳುವುದೆಂದರೆ ಅವರ ಬ್ಯಾಂಕ್ ಖಾತೆಗೆ ಒಂದಷ್ಟು ದುಡ್ಡು ಹಾಕುವುದು. ಇನ್ನೂ ಕಿರಿಕಿರಿ ಮಾಡಿದರೆ ಎಲ್ಲಾದರೂ ವೃದ್ಧಾಶ್ರಮಕ್ಕೆ ಕೊಂಡೊಯ್ದು ಸೇರಿಸುವುದು. ಇವರ ಸಮಾಜ ಸೇವೆ ಕೂಡಾ ವಾರಾಂತ್ಯದ ಒಂದು ಔಟಿಂಗ್ ಅಷ್ಟೆ. ತಾವು ಬಹಳ ಪ್ರಗತಿಶೀಲರು, ಉದಾರ ಮನೋಭಾವದವರು ಎಂದು ಸಮಾಜದಲ್ಲಿ ತೋರಿಸಿಕೊಳ್ಳುವ ಇವರು ಪಕ್ಕದಲ್ಲಿ ಮಲಗಿದ್ದ ಹೆಂಡತಿಯ ಮೊಬೈಲ್‌ಗೆ ನಡುರಾತ್ರಿಯಲ್ಲಿ ಸಹೋದ್ಯೋಗಿಯ ಎಸ್‌ಎಂಎಸ್ ಬಂದರೆ ನಿದ್ದೆಗೆಡಿಸಿಕೊಳ್ಳುತ್ತಾರೆ.
ಇಂತಹದ್ದೊಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಕೌಟುಂಬಿಕ ಹಿಂಸೆ ಮತ್ತು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಯಾರೆಂದು ಅಧ್ಯಯನ ಮಾಡಿದರೆ ಈ ನವ ಮಧ್ಯಮ ವರ್ಗದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಜಾತಿ ಎಲ್ಲಿದೆ ಎಂದು ಉಡಾಫೆಯಿಂದ ಪ್ರಶ್ನಿಸುವ ಇವರ ಜಾತ್ಯತೀತ ನಿಲುವಿನ ಹಿಂದಿನ ಆತ್ಮವಂಚನೆಯನ್ನು ತಿಳಿದುಕೊಳ್ಳಬೇಕಾದರೆ ಭಾನುವಾರ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೆಟ್ರಿಮೋನಿಯಲ್ ಪುಟ ಓದಬೇಕು.
ಈ ಜನವರ್ಗ ಅಣ್ಣಾ ಹಜಾರೆ ಅವರಿಂದ ಕಲಿತದ್ದೇನು, ಕೇವಲ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ? ಅಣ್ಣಾ ಎಂದರೆ ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಣ್ಣಾ ಹಜಾರೆ ಅವರಿಗೆ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿರಬಹುದು. ಆದರೆ ಅವರ ಬದುಕಿನ ಬಹುದೊಡ್ಡ ಸಾಧನೆ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಹುಟ್ಟೂರು ರಾಳೇಗಣಸಿದ್ಧಿಯಲ್ಲಿ ಮಾಡಿರುವ ಗ್ರಾಮ ಸುಧಾರಣೆ. ಮನಸ್ಸು ಮಾಡಿದ್ದರೆ ಅವರು ಕೂಡಾ ಮಾಜಿ ಸೈನಿಕನಿಗೆ ಸರ್ಕಾರ ನೀಡುವ ಜಮೀನನ್ನು ಪಡೆದು ನಿಶ್ಚಿಂತೆಯಿಂದ ಇರಬಹುದಿತ್ತು. ಆದರೆ ಅವರು ಯೋಚನೆ ಮಾಡಿದ್ದೇ ಬೇರೆ. ಅಣ್ಣಾನ ಪ್ರವೇಶವಾಗುವ ವರೆಗೆ ರಾಳೇಗಣಸಿದ್ಧಿ ಬಡತನ, ಅನಕ್ಷರತೆ, ಮೂಢನಂಬಿಕೆಗಳಿಂದ ಕೂಡಿದ ದೇಶದ ಸಾವಿರಾರು ಗ್ರಾಮಗಳಲ್ಲಿ ಒಂದಾಗಿತ್ತು. ಇಂದು ಅದು ಕಳ್ಳರು, ಕುಡುಕರು, ಭ್ರಷ್ಟರು, ಸೋಮಾರಿಗಳು, ಅನಕ್ಷರಸ್ಥರು ಇಲ್ಲದ ಆದರ್ಶ ಗ್ರಾಮ. ಮದುವೆ ಬೇಡ, ಕುಟುಂಬ ಬೇಡ ಎಂದು ಭೌತಿಕ ಜಗತ್ತಿನ ಎಲ್ಲ ಸುಖಗಳನ್ನು ತೊರೆದು ಗ್ರಾಮ ಸುಧಾರಣೆಗೆ 38ನೇ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡಾಗ ಮುಂದೊಂದು ದಿನ ಇಷ್ಟೊಂದು ಖ್ಯಾತಿ ಪಡೆಯಲಿದ್ದೇನೆ ಎಂದು ಅಣ್ಣಾ ಅವರಿಗೆ ಖಂಡಿತ ತಿಳಿದಿರಲಿಕ್ಕಿಲ್ಲ.
ಸ್ವಾರ್ಥವಿಲ್ಲದೆ, ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರು ಕೆಲಸ ಮಾಡಿದರು. ನೇರ ನಡೆ-ನುಡಿಯ ಮೇಲೆ ನಂಬಿಕೆ ಇಟ್ಟು ಬದುಕಿದರು.
ನಿಜವಾದ ಅಣ್ಣಾ ರಾಮಲೀಲಾ ಮೈದಾನದ ವೇದಿಕೆಯಲ್ಲಿ ಇರಲಿಲ್ಲ, ಅವರು ರಾಳೇಗಣ ಸಿದ್ಧಿಯ ಮನೆ ಮನೆಗಳಲ್ಲಿದ್ದಾರೆ. ಆ ಅಣ್ಣಾನನ್ನು ಬಿಟ್ಟು ಈ ಅಣ್ಣಾನನ್ನು ನೋಡಲಾಗುವುದೇ ಇಲ್ಲ, ನೋಡುವುದು ಸರಿಯೂ ಅಲ್ಲ. ಯುವಜನತೆ ಆದರ್ಶ ಎಂದು ಸ್ವೀಕರಿಸಬೇಕಾಗಿರುವುದು ಮತ್ತು ಕಾಯಾ, ವಾಚಾ ಮನಸಾ ಅನುಸರಿಸಬೇಕಾಗಿರುವುದು ಕೇವಲ ರಾಮಲೀಲಾ ಮೈದಾನದ ಅಣ್ಣಾನನ್ನಲ್ಲ. ಅದಕ್ಕಿಂತಲೂ ಮುಖ್ಯವಾಗಿ ರಾಳೇಗಣಸಿದ್ಧಿಯ ಅಣ್ಣಾನನ್ನು. ಇಳಿ ವಯಸ್ಸಿನಲ್ಲಿ ಮಕ್ಕಳ ಮುಖ ನೋಡಲು ಹಲುಬುತ್ತಿರುವ ರಾಂಪಣ್ಣನಂತಹವರು ಕೂಡಾ ಬಯಸುತ್ತಿರುವುದು ಇದನ್ನೇ. ರಾಮಲೀಲಾ ಮೈದಾನದ ಅಣ್ಣಾ ಅವರನ್ನು ಅನುಸರಿಸಿದವರು ಕತ್ತಲ ಹೊತ್ತಿನಲ್ಲಿ ರಸ್ತೆಬದಿ ಕ್ಯಾಂಡಲ್ ಹಚ್ಚಿ ಟಿವಿ ಪರದೆ ಮೇಲೆ ಕಾಣಿಸಿಕೊಳುತ್ತಾರೆ, ರಾಳೇಗಣಸಿದ್ಧಿಯ ಅಣ್ಣಾ ಅವರನ್ನು ಆದರ್ಶ ಎಂದು ಸ್ವೀಕರಿಸಿದವರು ಕತ್ತಲು ತುಂಬಿರುವ ಹಳ್ಳಿಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಹರೀಶ್ ಹಂದೆಯಂತಹವರಾಗುತ್ತಾರೆ. ನಮಗೆ ಬೇಕಾಗಿರುವುದು ಕ್ಯಾಂಡಲ್‌ವಾಲಾಗಳಲ್ಲ, ಹರೀಶ್ ಹಂದೆಯಂತಹವರು, ಅಲ್ಲವೇ

Saturday, September 3, 2011
ಗುರುದೇವ ರವೀಂದ್ರರ ವಿಚಿತ್ರಲೋಕ
ಸುಮಾರು 1930ರಲ್ಲಿ ಹೀಗಾಯಿತು: ಒಬ್ಬ ವಿಶ್ವಪ್ರಸಿದ್ಧ ವ್ಯಕ್ತಿ ಇದ್ದಕ್ಕಿದ್ದಂತೆ ತಬ್ಬಲಿಯಂತಾದ. ಆತ ಬಂಗಾಳದಲ್ಲಿ ಹುಟ್ಟಿ, 8ನೆಯ ವಯಸ್ಸಿನಲ್ಲಿಯೇ ಕಾವ್ಯರಚನೆಗೆ ತೊಡಗಿದ್ದ. ಸಾಹಿತ್ಯದ, ಕಲೆಯ ಹಲವು ಪ್ರಕಾರಗಳನ್ನು ಶ್ರೀಮಂತಗೊಳಿಸಿ ಅಪಾರ ಕೀರ್ತಿಭಾಜನನಾಗಿದ್ದ.
ಜಗತ್ತಿನ ಐದು ಖಂಡಗಳ 30ದೇಶಗಳನ್ನು ಸುತ್ತಿ ಬಂದು, ಹೋದಹೋದಲ್ಲೆಲ್ಲ ಆಯಾದೇಶಗಳ ಆ ಕಾಲದ ಕವಿ, ಕಲಾವಿದ, ಜ್ಞಾನಿ, ವಿಜ್ಞಾನಿ, ನೇತಾರ, ನಾಯಕರೊಂದಿಗೆ ತಲಸ್ಪರ್ಶಿಯಾದ ಚರ್ಚೆ-ಸಂವಾದಗಳನ್ನು ನಡೆಸಿದ್ದ;
ಅವರಿಂದ ಪ್ರಭಾವಿತನಾಗಿ, ಅವರನ್ನೂ ಪ್ರಭಾವಿಸುತ್ತಾ, ಜಗತ್ತಿನ ಆಗುಹೋಗುಗಳ ಬಗ್ಗೆ, ವಿಶ್ವದ ಏಕತೆಯ ಬಗ್ಗೆ, ಮಾನವನ ಸ್ವಾತಂತ್ರ್ಯದ ಬಗ್ಗೆ, ವಿಶ್ವಶಾಂತಿಯ ಬಗ್ಗೆ ಪ್ರವಚನ ನೀಡುತ್ತಾ, ಧ್ಯಾನಿಸುತ್ತಿದ್ದ.
ಹೀಗೆ ದಿಗ್ಭಿತ್ತಿ ಪರ್ಯಂತ ಕೀರ್ತಿಯನ್ನು ಆರ್ಜಿಸುತ್ತಾ, ಸಮಸ್ತ ಭೂಮಂಡಲದ ಅನಧಿಕೃತ ಸಾಂಸ್ಕೃತಿಕ, ನೈತಿಕ, ತಾತ್ವಿಕ ರಾಯಭಾರಿಯಾಗಿ ಪೃಥ್ವಿಮಂಡಲವನ್ನು ಸುತ್ತಿಬಂದ ಪ್ರಪ್ರಥಮ ಭಾರತೀಯನಾಗಿದ್ದ.
1861ರಲ್ಲಿ ಹುಟ್ಟಿದ ಆತ 1913ರಲ್ಲೇ ನೊಬೆಲ್ ಬಹುಮಾನ ಪಡೆದ ಮೊದಲ ಏಷಿಯನ್ನನಾಗಿದ್ದ. ಆತನ ತೇಜಸ್ವಿ ಮುಖ, ನೀಳವಾದ ಪ್ರಭಾವಿ ಗಡ್ಡ, ಎಲ್ಲೋ ಒಂದು ಕಡೆ ಏಸುಕ್ರಿಸ್ತನ ನೆನಪು ತರುತ್ತಿತ್ತು.
1928ರಲ್ಲಿ ದಕ್ಷಿಣ ಜರ್ಮನಿಯ ಒಂದು ಸುಂದರತಾಣದಲ್ಲಿ ಒಂದು ದೊಡ್ಡ ಶ್ರೋತೃವೃಂದಕ್ಕೆ ತನ್ನ ಗೀತಾಂಜಲಿ ಬಂಗಾಳಿ ಕವಿತೆಗಳ ತಾನೇ ಮಾಡಿದ ಕೆಟ್ಟ ಇಂಗ್ಲಿಷ್ ಅನುವಾದಗಳನ್ನು ಆತ ಓದುತ್ತಿರುವಾಗ ಇಂಗ್ಲಿಷ್ ಬಲ್ಲವನಾಗಿದ್ದ ಒಬ್ಬ ಪತ್ರಕರ್ತ ಬರೆದ:
`ಆ ಕವಿತೆಗಳೇನೋ ನನಗೆ ಹಿಡಿಸಲಿಲ್ಲ. ಅವನ ಮಾತೂ ನನಗೆ ಅರ್ಥವಾಗಲಿಲ್ಲ. ಆದರೆ ಅವನ ಮುಖ, ನೀಳವಾದ ಗಡ್ಡ, ದನಿಯ ಗಾಂಭೀರ್ಯ ಇವನ್ನೆಲ್ಲಾ ಕಂಡಾಗ ಅನಿಸತೊಡಗಿತು: ಇವನೇ ವಿಶ್ವದ ಮುಂದಿನ ಪ್ರವಾದಿ ಇರಬಹುದೇ?` ಆತನೇ ಗುರುದೇವ ರವೀಂದ್ರನಾಥ ಟ್ಯಾಗೋರ್!
1930ರಲ್ಲಿ ತನ್ನ ಇಳಿವಯಸ್ಸಿನಲ್ಲಿ ಅವನನ್ನು ತಬ್ಬಲಿತನ ಆವರಿಸಿತು. ಏರು ಜೋರಿನಲ್ಲಿ ಮೇಳ ನಡೆದಿರಲು ತಂತಿ ಹರಿದ ಹಾಗೆ ಭಾರತದ ಪ್ರತಿನಿಧಿಯಾಗಿ ಜಗತ್ತು ಆತನನ್ನು ಆದರಿಸಿದ್ದರೂ ಭಾರತೀಯತೆಯ, ರಾಷ್ಟ್ರೀಯವಾದದ ಅತಿರೇಕಗಳ ಬಗ್ಗೆ ಎಚ್ಚರವನ್ನು ಕಾಯ್ದುಕೊಂಡಿದ್ದ.
ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ವಿಶ್ವಾತ್ಮಕತೆಯ ಹರಿಕಾರತ್ವವನ್ನು ಆವಾಹಿಸಿಕೊಂಡಿದ್ದ ಆತನಿಗೆ ತನ್ನ ಈ ವರೆಗಿನ ದಾರ್ಶನಿಕ ಚೌಕಟ್ಟಿಗೆ ಸಿಲುಕದ ಒಂದು ಅನುಭವ ಪ್ರಪಂಚವಿರುವುದು ಅನಿರೀಕ್ಷಿತವಾಗಿ ಗೋಚರವಾಯಿತು. ತನ್ನ ಪ್ರವಾದಿತ್ವದ ಕನ್ನಡಕವನ್ನು ಕಳಚಿ ಜಗತ್ತಿನತ್ತ ದೃಷ್ಟಿ ಹಾಯಿಸಿದ ಸಂತನ ಸ್ವಂತ ಮನಸ್ಸು ಶಾಂತಿಯನ್ನು ತೊರೆದು ಅಶಾಂತವಾಯಿತು.
ಈ ವರೆವಿಗೆ ತನ್ನ ಮಾಧ್ಯಮಗಳಾಗಿದ್ದ ಶಬ್ದ, ಧ್ವನಿಗಳಿಗೆ ಹೊರತಾದ ರೂಹುಗಳು ಆತನನ್ನು ಕಾಡತೊಡಗಿದವು. ಅಲ್ಲಿಯವರೆಗೆ ಕವಿ, ಸಂಗೀತಗಾರನಾಗಿದ್ದ ಮಹಾನ್ ಕಲಾವಿದ ಎಪ್ಪತ್ತರ ಇಳಿವಯಸ್ಸಿನಲ್ಲಿ ಚಿತ್ರಕಾರನಾಗಿ ಮರು ಹುಟ್ಟಿದ. ಆ ಮೂಲಕ ಭಾರತೀಯ ಚಿತ್ರಕಲೆಗೂ ಮರುಹುಟ್ಟು ನೀಡಿದ.
ಆ ಚಿತ್ರಗಳು ಚಿತ್ರಗಳ ಹಾಗೆಯೇ ಇರಲಿಲ್ಲ. ಹಾಗೆಂದು ಭಾರತೀಯ ಚಿತ್ರಕಲಾ ಪಂಡಿತರು ಮುಖ ಸಿಂಡರಿಸಿಕೊಂಡರು. ಅವರಿಗೆ ಆ ಚಿತ್ರಗಳು ಅಸ್ತವ್ಯಸ್ತ ಗೆರೆಗಳ ಹಾಗೆ, ಶಾಯಿ ಚೆಲ್ಲಿದಾಗ ಉಂಟಾಗುವ ಕಲೆಗಳ ಹಾಗೆ ಕಂಡವೇ ಹೊರತು ಕಲಾಕೃತಿಗಳಾಗಿ ತೋರಲಿಲ್ಲ. ವಿಶ್ವಕವಿಯ ಈ ಬಾಲಿಶ ಅವಾಂತರಗಳು ಅವರಿಗೆ ಮುಜುಗರ ಉಂಟು ಮಾಡಿದವು.
ಅವರು ಕೇಳಿದರು: `ಚಿತ್ರಕಲೆಗೆ ಕೈಹಾಕುವ ಮೊದಲು ನಿಮಗೆ ಈ ಕ್ಷೇತ್ರದಲ್ಲಿ ಯಾವ ಥರದ ತರಬೇತಿಯಾಗಿತ್ತು?` ಅದಕ್ಕೆ ರವೀಂದ್ರನಾಥ ಟ್ಯಾಗೋರರು ಹಾಕಿದ ಮರುಪ್ರಶ್ನೆ: `30 ವರ್ಷಗಳ ಹಿಂದೆ ಹಿಂದೆ ನಾನು ಸಂಗೀತಕ್ಕೆ ಕೈ ಹಾಕಿದಾಗ ಆ ಮೊದಲು ನನಗೆ ಯಾವ ತರಬೇತಿ ಇತ್ತು? 8ನೆಯ ವಯಸ್ಸಿನಲ್ಲಿ ಕವಿತೆ ರಚಿಸತೊಡಗಿದಾಗ ಅದಕ್ಕಿಂತಾ ಮುಂಚೆ ನನಗೆ ಯಾವ ತರಬೇತಿ ಇತ್ತು?`ಹೀಗೆ ಟ್ಯಾಗೋರರು ಸ್ವ ಸಮರ್ಥನೆಯ ನಿರಾಕರಣೆಯನ್ನೇ ಸ್ವಸಮರ್ಥನೆಯನ್ನಾಗಿ ಬಳಸಿಕೊಂಡರು.
ಭಾರತೀಯರು ಇಷ್ಟಪಡದ ಆ ಚಿತ್ರಗಳನ್ನು ವಿದೇಶಿ ವಿದ್ವಾಂಸರು ಮೆಚ್ಚಿ ಮಾತಾಡಿದಾಗ ಚಿತ್ರಕಲಾ ಪಂಡಿತರಿಗೆ ಆ ವಿಚಿತ್ರ ಚಿತ್ರಲೋಕ ನುಂಗಲಾರದ, ಉಗುಳಲಾರದ ತುಪ್ಪವಾಯಿತು.
ರವೀಂದ್ರ ಭಕ್ತರಿಗೂ ಹಾಗೆಯೇ ಅನಿಸಿರಬಹುದು. `ಕೊಥಾಯ್ ಆಲೋ ಕೊಥಾಯ್ ಓರೇ ಆಲೋ` (ಎಲ್ಲಿ ಬೆಳಕು, ಹೇಳು ಎಲ್ಲಿದೆ ಬೆಳಕು?) ಎಂದು ನೊಬೆಲ್ ಪುರಸ್ಕೃತ `ಗೀತಾಂಜಲಿ`ಯಲ್ಲಿ ಕೇಳಿದ ಆ ಬೆಳಕಿನ ಪೂಜಾರಿಯೆಲ್ಲಿ? ಕತ್ತಲಿನಿಂದ ಕೆತ್ತಿದ ಹಾಗೆ ಕಾಣುವ ಈ ಕರಾಳ ಚಿತ್ರಲೋಕದ ಕಾಳಾಮುಖನೆಲ್ಲಿ? `ಸೊಕೊಲ್ ಆಕಾಶ್ ಸೊಕೊಲ್ ಧೊರಾ ಆನೊಂದೇ ಹೋಶಿತೇ ಭರಾ, ಜೆ ದಿಕ್ ಪಾನೇ ನೊಯನ್ ಮಿಲೇ ಭಾಲೋ ಶೊಬಾಯ್ ಭಾಲೋ? (ಸಕಲ ಆಕಾಶ-ಧರೆಗಳು ಬೆಳಕಿನಿಂದ ತುಳುಕುತ್ತಿವೆ: ಯಾವ ದಿಶೆಯಲ್ಲಿ ಕಣ್ಣು ಹಾಯಿಸಿದರೂ ಎಲ್ಲವೂ ಚೆಲುವಾಗಿದೆ) ಎಂದ ಆ ಸೌಂದರ್ಯಾರಾಧಕ ಎಲ್ಲಿ ಹೋದ?
ಜೀವಜಡ ಲೋಕಗಳ ಭ್ರೂಣಗಳಲ್ಲಿ ಇನ್ನೂ ಸಂಚಿತ ರೂಪು ಲಾವಣ್ಯಗಳನ್ನು ತಾಳದ ಈ ವಿಕೃತಾಕೃತಿಗಳನ್ನು ಭ್ರೂಣಪಾತ ಮಾಡಿದ ಈ ಅ ಸೌಂದರ್ಯದ ಆವಾಹಕ ಎಲ್ಲಿಂದ ಬಂದ?
1913ರಲ್ಲಿ ಟ್ಯಾಗೋರರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ಈ ಘಟನೆಯಲ್ಲಿ ಟ್ಯಾಗೋರರ ಮಿತ್ರನಾಗಿದ್ದ ಐರಿಷ್ ಕವಿ ಯೇಟ್ಸ್‌ನ ನೆರವು ಬಹುಮುಖ್ಯ ಪಾತ್ರ ವಹಿಸಿತ್ತು. ಆತ `ಗೀತಾಂಜಲಿ`ಯ ಮೊದಲ ಇಂಗ್ಲಿಷ್ ತರ್ಜುಮೆಗೆ ಮುನ್ನುಡಿ ಬರೆದು ಆ ಕವಿತೆಗಳನ್ನು ಕೊಂಡಾಡಿದ್ದ. ಮುಪ್ಪಾಗುವ ಹೊತ್ತಿಗೆ ಯೇಟ್ಸ್‌ನಿಗೆ ಟ್ಯಾಗೋರರ ಕಾವ್ಯದ ಬಗ್ಗೆ, ಭಾರತೀಯ ಕಾವ್ಯದ ಬಗ್ಗೆ ಒಂದು ಬಗೆಯ ಭ್ರಮನಿರಸನ ಉಂಟಾಯಿತು.
ಟ್ಯಾಗೋರರ ಕಾವ್ಯವನ್ನೂ ಒಳಗೊಂಡು ಭಾರತೀಯ ಕಾವ್ಯ ದುರಂತಾನುಭವಗಳನ್ನು ಎದುರಿಸುವುದರಲ್ಲಿ ವಿಫಲವಾಗಿದೆಯೆನಿಸಿತು. (ಬಹುಶಃ ಯೇಟ್ಸ್ `ಮಹಾಭಾರತ`ದ ಕೊನೆಯ ಸ್ವರ್ಗಾರೋಹಣ ಪರ್ವವನ್ನು ಓದಿರಲಿಲ್ಲ).
ಭಾರತೀಯ ಕಾವ್ಯದಲ್ಲಿ ದುರಂತದ ಅಭಾವವಿದೆ ಎಂಬುದು ಚರ್ಚಾಸ್ಪದ. ಆದರೆ ಟ್ಯಾಗೋರರ 1930ರ ಪೂರ್ವ ಸೃಷ್ಟಿಯ ಬಗ್ಗೆ ಇದು ಬಹುಶಃ ನಿಜ. ಕಡೆಯ ಪಕ್ಷ `ಗೀತಾಂಜಲಿ`ಯ ವಿಷಯದಲ್ಲಿ ಇದು ಖಂಡಿತಾ ನಿಜ.
`ಗೀತಾಂಜಲಿ`ಯ ಲೋಕದಲ್ಲಿ ವಿರಹವಿದೆ, ನೋವಿದೆ, ನಿರಾಶೆಯಿದೆ. ಆದರೆ ನಿರ್ಗುಣ ಭಕ್ತಿಯ ಲೋಕದಲ್ಲಿ ದುರಂತಕ್ಕೆ ಜಾಗವಿಲ್ಲ. ಆಲ್ಲಿನ ನರಕದಲ್ಲೂ ಸ್ವರ್ಗದ ನೆರಳಿದೆ. ದುರಂತದಲ್ಲೂ ಅಗಲಿ ಕೂಡುವ ಸುಖದ ಭರವಸೆಯಿದೆ. ಇಲ್ಲಿನ ಕೊರಡು ಮತ್ತೆ ಖಂಡಿತಾ ಕೊನರುತ್ತದೆ.
ಆದರೆ ಟ್ಯಾಗೋರರ ಚಿತ್ರಲೋಕದಲ್ಲಿ ವಿಶ್ವಚೈತನ್ಯದ ಆ ಪ್ರಭೆ ಮಾಯವಾಗಿದೆ. ಅವರು ರಚಿಸಿದ ಸುಮಾರು ಇನ್ನೂರು ಚಿತ್ರಗಳಲ್ಲಿ ಸೌಂದರ್ಯದ ಹುಡುಕಾಟವೂ ಇಲ್ಲ.
ಅಲ್ಲಿರುವುದು ಸೌಂದರ್ಯ-ವಿಕೃತಿಗಳನ್ನು ದಾಟಿದ, ಸುಖಾಂತ-ದುಃಖಾಂತಗಳನ್ನು ತೆಗಳದ ಮರುಜನ್ಮದ, ಮರುಹುಟ್ಟಿನ ದಾಹ, ತಹತಹ. ಗತದ ಸಂಕೋಲೆಗಳಿಂದ ಬಿಡುಗಡೆ ಪಡೆದ ನವನಿರ್ಮಿತಿಯ ಶಕ್ತಿ. ಮೈನವಿರೇಳಿಸುವುದು, ಮನಕಲಕುವುದು ಇದರ ಉದ್ದೇಶವಲ್ಲ, ಅಥವಾ ಹೊರಲೋಕದ ಆಕೃತಿಗಳನ್ನು ಹಿಡಿದಿಡುವುದೂ ಅಲ್ಲ.
ಅಂತರಾಳಗಳಲ್ಲಿ ನಿಂತ ನೀರುಗಳನ್ನು ಕೆದಕಿ ಮನತಳದ ಅಪೂರ್ಣ, ಆಕಾರ-ನಿರಾಕಾರಗಳ ನಡುವೆ ತುಯ್ಯುತ್ತಿರುವ ಜಡಜೀವಗಳನ್ನು ಮಂದಬೆಳಕಿನಲ್ಲಿ ಕಾಣಿಸುವ ಈ ವಿಚಿತ್ರಚಿತ್ರಲೋಕದ ಬಗೆ ಬೇರೆ.
ಅದು ಸೊಬಗಿನ ಸೋನೆಯಲ್ಲ. ಆದಿಮ ವಿವರಗಳ ಅನಾವರಣ. ಇದನ್ನು ಬೆಳಗುವವನು ಪ್ರಕಾಶ ಸ್ವರೂಪದ ಸೂರ್ಯನಲ್ಲ; ನಿದ್ದೆ ಎಚ್ಚರಗಳ ನಡುವೆ ಸುಳಿಯುವ ಆದಿತ್ಯ.
ಸಾಹಿತ್ಯದಲ್ಲಿ ಭಾರತೀಯ ನವೋದಯದ ಶಿಲ್ಪಿಯಾದ ಟ್ಯಾಗೋರ್ ಚಿತ್ರಕಲೆಯಲ್ಲಿ ಭಾರತೀಯ ಆಧುನಿಕತೆಯ ಹರಿಕಾರರಾಗಿ ಕಾಣುತ್ತಾರೆ. ದೃಶ್ಯಾನುಭವವನ್ನು ಶಬ್ದಗಳ ಮೂಲಕ ತೆರೆದಿಡುವಲ್ಲಿ ಸಿದ್ಧಹಸ್ತರಾದ ಟ್ಯಾಗೋರರ ಮತ್ತೊಂದು ಪ್ರತಿಭೆ ಅವರ ಚಿತ್ರಕಲೆಯಲ್ಲಿ ಮುನ್ನೆಲೆಗೆ ಬರುತ್ತದೆ. ಅದು ಶಬ್ದಪೂರ್ವ ರೂಹುಗಳ ವಿಸ್ಮೃತಿ. ಇದೇ ಅಲ್ಲವೇ ಆಧುನಿಕ ಕಲೆಯ ನಿರ್ವಚನ? ಕೈಡಿಸ್ಕಿ, ಪಿಕಾಸೋ, ಡಾಲಿ ಮುಂತಾದವರು ಕ್ರಮಿಸಿದ್ದು ಈ ಹಾದಿಯನ್ನೇ.
ಅವರೆಲ್ಲರನ್ನೂ ಟ್ಯಾಗೋರರ ಚಿತ್ರಕಲೆ ನೆನಪಿಸುತ್ತದಾದರೂ, ಅವರು ಯಾರಲ್ಲಿಯೂ ಅವರ ಚಿತ್ರಕಲೆಯ ಪೂರ್ವಮಾದರಿಗಳಿಲ್ಲ. ಅಥವಾ ಟ್ಯಾಗೋರರ ಸಾಹಿತ್ಯಿಕ ಕೃತಿಗಳಲ್ಲೂ ಅವುಗಳ ಪೂರ್ವ ಸೂಚನೆಗಳಿಲ್ಲ.
ಜಗತ್ತನ್ನು ಭಿನ್ನವಾಗಿ ನೋಡತೊಡಗಿದ ಅವರ ಕಲ್ಪನೆಯ ಕಣ್ಣು ತನ್ನನ್ನೂ ತಾನೇ ಭಿನ್ನವಾಗಿ ಚಿತ್ರಿಸುತ್ತದೆ. ಇದಕ್ಕೆ ಉದಾಹರಣೆಯಾಗಿದೆ 1932ರಲ್ಲಿ ಅವರು ರಚಿಸಿದ ಸ್ವಂತ ಮುಖಚಿತ್ರ. ಅವರ ತಾರುಣ್ಯದ ಮುಖ ಇಲ್ಲಿ ಪೂರ್ತಿ ಕಪ್ಪಾಗಿದೆ. ಅಸ್ತವ್ಯಸ್ತ ಕೆದರಿದ ಕೂದಲು, ಉದ್ದನೆಯ ಕುರುಚಲು ಗಡ್ಡ ಕತ್ತಲಿಗಿಂತ ಕಪ್ಪಾಗಿವೆ.
ಕತ್ತರಿಯನ್ನು ಎಂದೂ ಕಾಣದಂತಿರುವ ಮೀಸೆಯೂ ಅಲ್ಲಿದೆ. ಹಣೆಯ ಭಾಗದಲ್ಲಿ, ಬಲಗಣ್ಣಿನಲ್ಲಿ ನೀಳವಾದ ಮೂಗಿನಲ್ಲಿ ತುಟಿಯಂಚಿನಲ್ಲಿ ಎಲ್ಲೋ ಒಂದಿಷ್ಟು ಬೆಳಕಿನ ಸೂಚನೆಯಿದೆ. ಆ ಕಣ್ಣುಗಳು ಹೊರ ಲೋಕದ ಕಡೆ ನೋಡುತ್ತಲೇ ಇಲ್ಲ. ತಮ್ಮನ್ನು ತಾವೇ ಈಕ್ಷಿಸಿಕೊಳ್ಳುತ್ತಿವೆ.
ಆ ಮುಖದ ಹಿಂದೆ ಮಲಿನವಾದ ಹೊನ್ನಿನಂತೆ ಕಾಣುವ ಭಿತ್ತಿಯಿದೆ. ಆದರೆ ಅದಕ್ಕೂ ಈ ಕಪ್ಪುಮುಖದ ಕೌತುಕಕ್ಕೂ ಯಾವ ಅಂಟು-ನಂಟೂ ಇಲ್ಲ.ಟ್ಯಾಗೋರರ ಮುಖಚಿತ್ರಗಳು, ವ್ಯಕ್ತಿಚಿತ್ರಗಳು ಹೆಚ್ಚೂ ಕಡಿಮೆ ಇದೇ ಬಗೆಯವು.
ಅವುಗಳ ಕಣ್ಣುಗಳು ಹೊರಗಡೆ ನೋಡುತ್ತಿಲ್ಲ. ಅವೆಲ್ಲವೂ ಮುಮ್ಮಗ್ಗುಲಿನ ರೂಪುಗಳನ್ನು ಸೆರೆ ಹಿಡಿಯುವ ಕ್ಯಾಮರಾಗಳಿಗೆ ನಿಲುಕದೆ, ಒಮ್ಮಗ್ಗುಲಿನ ಅಥವಾ ಇಮ್ಮಗ್ಗುಲಿನ ಗೊತ್ತಿನಲ್ಲಿ ಮೂಡಿದವು. ಅವೆಲ್ಲವೂ ಅತೃಪ್ತಿಯಿಂದ ತಪ್ತವಾಗಿವೆ. ಅವಕ್ಕೆ ಶಾಂತಿಯ ಸೋಂಕೂ ಇಲ್ಲ. ಬೆಳಕಿನ ಭರವಸೆಯಿಲ್ಲ. ಟ್ಯಾಗೋರರು ಚಿತ್ರಿಸಿದ ದ ಒಂದೇ ಒಂದು ಮುಖ ಹೊರಗಡೆ ಅಂದರೆ ನಮ್ಮ ಕಡೆ ನೋಡುತ್ತಿದೆ.
ಅದು ಒಬ್ಬ ಸಂನ್ಯಾಸಿಯ ಚಿತ್ರ. ಅವನ ದೇಹದ ಮೇಲ್ಭಾಗ ಮಂದಗತ್ತಲಿನಲ್ಲಿ ಮುಳುಗಿದೆ. ಹೇಳಬೇಕಾದ್ದನ್ನು ಹೇಳಲೋ ಬೇಡವೋ ಅನ್ನುವ ಹಾಗೆ ನಮ್ಮ ಕಡೆ ನೋಡುತ್ತಿದ್ದಾನೆ. ಪ್ರಕ್ಷುಬ್ಧನಾಗಿದ್ದಾನೆ. ಅವನು ಬುದ್ಧನೂ ಅಲ್ಲ, ಮಹಾವೀರನೂ ಅಲ್ಲ.
ಟ್ಯಾಗೋರರ ಪ್ರಕೃತಿಚಿತ್ರಗಳಿಗೂ ಅವರ ಪ್ರಕೃತಿ ಕಾವ್ಯಕ್ಕೂ ಅದೆಂತಹ ವ್ಯತ್ಯಾಸ? ಅವರ ಚಿತ್ರಲೋಕದ ಮರಗಿಡಗಳೂ, ಗಿರಿಕಣಿವೆಗಳೂ, ಆಕೃತಿಗಳೂ ಸೂರ್ಯಚಂದ್ರರಿಗಿಂತ ಹಳೆಯ ಮಂದಬೆಳಕಿನಲ್ಲಿ ಇನ್ನೂ ರೂಪು ತಾಳುತ್ತಿರುವುದರಿಂದ ಅವು ಒಂದರಿಂದ ಒಂದು ಇನ್ನೂ ಬಿಡಿಬಿಡಿಯಾಗಿಲ್ಲ. ಇಮ್ಮಗ್ಗುಲಿನ ಗೊತ್ತಿನಿಂದ ಹೊರಬಂದು ತಮ್ಮ ಸ್ವರೂಪವನ್ನೂ ಇನ್ನೂ ಪಡೆದುಕೊಳ್ಳುವುದರಲ್ಲಿವೆ.
ಅವರ ನಾಟಕೀಯ ಘಟನೆಗಳ ವಿ-ಚಿತ್ರಣವೂ ವಿಲಕ್ಷಣ. ಹಲವು ಪಾತ್ರಗಳು ಇನ್ನೂ ಮನುಷ್ಯಾಕೃತಿಯನ್ನು ಪಡೆಯಲು ನಿರಾಕರಿಸುತ್ತಿವೆ. ಅವು ಇನ್ನೂ ಬರಿಯ ಆಕಾರಗಳು, ಗೆರೆಗಳು ಅಥವಾ ಜ್ಯಾಮಿತಿಯ ಅಚ್ಚುಗಳು. ಒಂದು ಪಾತ್ರ ಮರದ ಗೊಂಬೆಯಂತಿದೆ. ಇಲ್ಲಿನ ಮಹಿಳೆಯರು ಪೂರ್ಣದೇಹಿಗಳಾಗುತ್ತಿಲ್ಲ.
ಈ ಪ್ರಕಾರದ ಅತ್ಯಂತ ಸ್ತುತ್ಯ ಚಿತ್ರ ಮ್ಯಾಕ್‌ಬೆತ್‌ನ ಮೂವರು ಮಾಟಗಾತಿಯರದು. ಅವರು ಕತ್ತಲಿಗೆ ಹೆದರಿ ಓಡುತ್ತಿರುವ ಚಂದ್ರನ ಓಡುಬೆಳಕಿನಲ್ಲಿ ನೆರಳುಗಳಂತೆ ಕುಣಿಯುತ್ತಿರುವ ಕಪ್ಪನೆಯ ಕೇಶರಾಶಿಯಂತಿದ್ದಾರೆ.
ಟ್ಯಾಗೋರರ ಚಿತ್ರಲೋಕದಲ್ಲಿ ಇನ್ನೂ ಅನೇಕ ವಿಚಿತ್ರಗಳಿವೆ. ಅಲ್ಲೊಂದು ಹೆಣ್ಣು ಗಂಡಿನ ಜೋಡಿಯಿದೆ. ಜ್ಯಾಮಿತಿಯ ಚಹರೆರಹಿತ ಆಕಾರಗಳಾಗಿರುವ ಅವರು ತ್ರಿಕೋನಾಕೃತಿಯಲ್ಲಿ ಬಂದಿಯಾಗಿ, ಅವರು ಪಿಟೀಲಾಗಿ ಪರಸ್ಪರರ ಕೈಗಳಲ್ಲಿ ಮಾರ್ಪಡುತ್ತಿದ್ದಾರೆ.
ವಿಚಿತ್ರಲೋಕವನ್ನು ವಿ-ರಚಿಸುವ ಪ್ರಕ್ರಿಯೆಯ ಕ್ರೂರ ತಿಳಿಹಾಸ್ಯದ ಪ್ರತೀಕಗಳಾಗಿ ಅವರು ಕಾಣುತ್ತಾರೆ. ಇನ್ನೊಂದೆಡೆ ಅಂದಚಂದಗಳಿಗಿಂತ ಹಳೆಯದಾದ ಹೆಣ್ಣಿನ ಮುಖದ ಪೂರ್ವಾಕೃತಿಯೊಂದು ಕತ್ತಲಲ್ಲಿ ಕರಗುತ್ತಿರುವ ನಿಸರ್ಗ ವಿವರಗಳಲ್ಲಿ ಕರಗಿಹೋಗುತ್ತಿದೆ.
ರಚನೆಗಳು ವಿರಚನೆಗೊಳ್ಳುವ, ಹೊತ್ತುಗೊತ್ತುಗಳಿಗಂತಲೂ ಪೂರ್ವದ ಟ್ಯಾಗೋರರ ವಿ-ಚಿತ್ರ ಪ್ರಪಂಚದಲ್ಲಿ ಸಾಂಪ್ರದಾಯಿಕ ಸೌಂದರ್ಯವಿಲ್ಲ, ನಿಜ. ಆದರೆ ಅದಕ್ಕೆ ತನ್ನದೇ ಆದ ಬೆಡಗುಗಳಿವೆ, ಬೆರಗುಗಳಿವೆ.
ಟ್ಯಾಗೋರರ ನೂರಾ ಐವತ್ತನೆಯ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಅವರ ಸಾರ್ವಜನಿಕ ಆಯಾಮಕ್ಕೆ ಹೊರತಾದ ಈ ಖಾಸಗಿ ಚಿತ್ರಲೋಕದ ಮರುಹುಟ್ಟನ್ನೂ ನೆನಪಿಸಿಕೊಳ್ಳುವ ಜರೂರು ಇದೆ.

Subscribe to:
Comments (Atom)